

ವಾಷಿಂಗ್ಟನ್: ಹಣ ಅಂದ್ರೆ ಹೆಣ ಕೂಡ ಬಾಯ್ಬಿಡುತ್ತದೆ ಅನ್ನೋ ಮಾತಿದೆ. ಏಕೆಂದರೆ ಇಂದು ಬಹುತೇಕರು ಓಡುತ್ತಿರುವುದು ಹಣದ ಹಿಂದೆಯೇ. ಅಂತಹ ಹಣ ಬೀದಿಯಲ್ಲಿ ಹಾರಾಡಿದಾರೆ ಯಾರಾದರೂ ಬಿಡುತ್ತಾರಾ? ಖಂಡಿತ ಇಲ್ಲ. ಅದೇ ರೀತಿಯಲ್ಲಿ ಅಮೆರಿಕದಲ್ಲಿ ಟ್ರಕ್ ಒಂದರಿಂದ ಆಕಸ್ಮಿಕವಾಗಿ ರಸ್ತೆಗೆ ಚಲ್ಲಿದ ನೋಟುಗಳನ್ನು ಬಾಚಿಕೊಂಡ ಜನರಿಗೆ ಬಿಗ್ ಶಾಕ್ ಎದುರಾಗಿದೆ.
ಯುನೈಟೆಡ್ ಸ್ಟೇಟ್ಸ್ನ ದಕ್ಷಿಣ ಕ್ಯಾಲಿಫೋರ್ನಿಯಾದ ಹೆದ್ದಾರಿಯಲ್ಲಿ ಟ್ರಕ್ ಒಂದು ಶುಕ್ರವಾರ ಹಣ ಸಾಗಿಸುತ್ತಿತ್ತು. ಸ್ಯಾನ್ ಡಿಯಾಗೋದಲ್ಲಿರುವ ಫೆಡರಲ್ ಡೆಪಾಸಿಟ್ ಇನ್ಸುರೆನ್ಸ್ ಕಾರ್ಪ್ ಕಂಪನಿಗೆ ಟ್ರಕ್ ಹಣ ಹೊತ್ತು ಸಾಗಿತ್ತು. ಟ್ರಕ್ ಒಳಗೆ ಇದ್ದ ಅನೇಕ ಬ್ಯಾಗ್ ಓಪನ್ ಆಗಿ ಅದರಲ್ಲಿ ಹಣ ರಸ್ತೆಗೆ ಚೆಲ್ಲಿದವು. ಹಣ ನೋಡಿದ ಮೇಲೆ ಕೇಳಬೇಕೆ, ಅಲ್ಲಿದ್ದ ಜನರು ತಕ್ಷಣ ಹಣವನ್ನು ಬಾಚಿಕೊಳ್ಳಲು ಮುಗಿಬಿದ್ದರು.
ಡೆಮಿ ಬ್ಯಾಗ್ಬಿ ಎಂಬ ಬಾಡಿ ಬಿಲ್ಡರ್ ತನ್ನ ಇನ್‌ಸ್ಟಾಗ್ರಾಮ್ ಪುಟದಲ್ಲಿ ಘಟನೆಗೆ ಸಂಬಂಧಿಸಿದ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದಾರೆ. ಇದು ನಾನು ನೋಡಿದ ಅತ್ಯಂತ ಹುಚ್ಚುತನದ ಸಂಗತಿಯಾಗಿದೆ. ಪ್ರತಿಯೊಬ್ಬರೂ ಮುಕ್ತಮಾರ್ಗದಿಂದ ಹಣವನ್ನು ಪಡೆಯಲು ಮುಕ್ತಮಾರ್ಗದಲ್ಲಿ ನಿಲ್ಲಿಸಿದ್ದಾರೆಂದು ಬರೆದುಕೊಂಡಿದ್ದಾರೆ.
ಇನ್ನು ತಮ್ಮ ಬಳಿಯಿರುವ ಹಣವನ್ನು ಹಿಂದಿರುಗಿಸುವಂತೆ ಅಧಿಕಾರಿಗಳು ಜನರನ್ನು ಆಗ್ರಹಿಸಿದ್ದಾರೆ. ಈ ಘಟನೆಯಲ್ಲಿ ಎಷ್ಟು ಹಣ ಕಳೆದುಹೋಗಿದೆ ಎಂಬುದನ್ನು ಅಧಿಕಾರಿಗಳು ಸ್ಪಷ್ಟನೆ ನೀಡಿಲ್ಲ. ಆದರೆ, ಅನೇಕ ಮಂದಿ ಸಾಕಷ್ಟು ಹಣ ಬಾಚಿಕೊಂಡಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಟ್ರಕ್ನ ಒಂದು ಬಾಗಿಲು ಆಕಸ್ಮಿಕವಾಗಿ ತೆರೆದುಕೊಂಡ ಪರಿಣಾಮ ಈ ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳದಲ್ಲೇ ಇಬ್ಬರನ್ನು ಬಂಧಿಸಲಾಗಿದ್ದು, ಹಣ ಬಾಚಿರುವ ಇನ್ನಿತರು ಕೂಡ ಕ್ರಿಮನಲ್ ಪ್ರಕರಣ ಎದುರಿಸಬೇಕಾಗುತ್ತದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಘಟನೆ ಸಂಬಂಧಿಸಿದ ವಿಡಿಯೋ ಆಧಾರದ ಮೇಲೆ ಅಧಿಕಾರಿಗಳು ತನಿಖೆಯನ್ನು ಕೈಗೊಂಡಿದ್ದಾರೆ. (ಏಜೆನ್ಸೀಸ್)