ಒಂದು ವರ್ಷದ ಬಳಿಕ ಚೀನಾದಲ್ಲಿ ಕೋವಿಡ್​ಗೆ ಮೊದಲ ಬಲಿ: ಅಮೆರಿಕದಲ್ಲಿ ಮತ್ತೆ ಲಾಕ್​ಡೌನ್​ ಎಚ್ಚರಿಕೆ

Lockdown
Published on

ಬೀಜಿಂಗ್​: ಜಾಗತಿಕವಾಗಿ ಕರೊನಾ ವೈರಸ್​ ಪ್ರಕರಣಗಳಲ್ಲಿ ತೀವ್ರ ಕುಸಿತ ಕಂಡ ಕೆಲವೇ ವಾರಗಳ ಬಳಿಕ ಮತ್ತೊಮ್ಮೆ ಕರೊನಾ ವೈರಸ್ ವಕ್ಕರಿಸಿದ್ದು, ಜಾಗತಿಕವಾಗಿ ಮತ್ತೆ ಕರೊನಾ ಪ್ರಕರಣಗಳ ಸಂಖ್ಯೆ ಏರುತ್ತಿದೆ. ಕರೊನಾ ಪರಿಸ್ಥಿತಿಯು ಒಂದು ರೀತಿಯಲ್ಲಿ ಹೋದೆಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷೀಲಿ ಎಂಬಂತಾಗಿದೆ.

ಕರೊನಾದ ಉಗಮ ಸ್ಥಾನ ಚೀನಾ ಮತ್ತು ಅದರ ನೆರೆಯ ರಾಷ್ಟ್ರ ದಕ್ಷಿಣ ಕೊರಿಯಾದಲ್ಲಿ ದಿನನಿತ್ಯದ ಕರೊನಾ ಪ್ರಕರಣಗಳ ಸಂಖ್ಯೆ ಮತ್ತೆ ಏರು ಗತಿಯಲ್ಲಿದೆ. ಇಲ್ಲಿ ಒಮಿಕ್ರಾನ್​ ರೂಪಾಂತರಿ ಹರಡುತ್ತಿರುವುದಾಗಿ ವರದಿಯಾಗಿದೆ. ಇದರಿಂದ ಎಚ್ಚೆತ್ತಿರುವ ಭಾರತ ಸರ್ಕಾರ ಈಗಾಗಲೇ ಎಲ್ಲ ರಾಜ್ಯಗಳಿಗೂ ಪತ್ರ ಬರೆದು ಕಟ್ಟೆಚ್ಚರಿಕೆ ವಹಿಸುವಂತೆ ತಿಳಿಸಿದೆ.

ಚೀನಾದಲ್ಲಿ ಸಾವು

2020 ರಲ್ಲಿ ವುಹಾನ್‌ನಲ್ಲಿ ಆರಂಭಿಕ ಹಂತದಲ್ಲಿ ಸಂಭವಿಸಿದ ಕೋವಿಡ್​ ಸ್ಫೋಟದ ಬಳಿಕ ಚೀನಾವು ಪ್ರಸ್ತುತ ಸ್ಥಳೀಯವಾಗಿ ಹರಡುವ ಕೋವಿಡ್ -19 ಪ್ರಕರಣಗಳ ಅತಿದೊಡ್ಡ ಅಲೆಯೊಂದಿಗೆ ಹೋರಾಡುತ್ತಿದೆ. ಶನಿವಾರ ಚೀನಾದ ಎರಡು ಕರೊನಾ ಸಾವು ಪ್ರಕರಣಗಳು ವರದಿಯಾಗಿದೆ. 2021ರ ಜನವರಿ ನಂತರ ಕರೊನಾದಿಂದ ಸಂಭವಿಸಿದ ಮೊದಲ ಸಾವು ಇದಾಗಿದೆ.

ಚೀನಾದಲ್ಲಿ ಒಮಿಕ್ರಾನ್​ ಸಮುದಾಯಕ್ಕೆ ಹರಡಿದ್ದು, ಶನಿವಾರ 2,157 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿವೆ. ಅದರಲ್ಲೂ ಚೀನಾದ ಜಿಲಿನ್ ಪ್ರಾಂತ್ಯದಲ್ಲೆ ಹೆಚ್ಚಿನ ಪ್ರಕರಣಗಳು ಕಂಡುಬಂದಿವೆ. ಇದರ ನಡುವೆ ಅಂತಾರಾಷ್ಟ್ರೀಯ ಪ್ರಯಾಣವನ್ನು ನಿರ್ಬಂಧಿಸುವ ಮತ್ತು ಹೊರಗಿನ ಪ್ರಪಂಚದೊಂದಿಗೆ ಸಂಪರ್ಕಗಳನ್ನು ಕಡಿತಗೊಳಿಸುವ ಹೆಚ್ಚು ಟೀಕೆಗೊಳಗಾದ ತನ್ನ "ಡೈನಾಮಿಕ್ ಶೂನ್ಯ-ಕೋವಿಡ್" ನೀತಿಯನ್ನು ಸಡಿಲಿಸುವುದನ್ನು ಚೀನಾ ತಳ್ಳಿಹಾಕುವ ಮೂಲಕ ನಿರ್ಬಂಧಗಳು ಮುಂದುವರಿಯುತ್ತದೆ ಎಂದು ತಿಳಿಸಿದೆ.

ಈ ಡೈನಾಮಿಕ್​ ಶೂನ್ಯ ಕೋವಿಡ್​ ನೀತಿಯ ಅಡಿಯಲ್ಲಿ, ಚೀನಾವು ಅಂತಾರಾಷ್ಟ್ರೀಯ ಪ್ರಯಾಣವನ್ನು ತೀವ್ರವಾಗಿ ಕಡಿತಗೊಳಿಸಿದೆ. 23,000 ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಸೇರಿದಂತೆ ಲಕ್ಷಾಂತರ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಿದೆ. ಹೆಚ್ಚಾಗಿ ವೀಸಾ ಮತ್ತು ವಿಮಾನಗಳ ರದ್ದತಿಯ ನಂತರ ಚೀನಾದಲ್ಲಿ ವೈದ್ಯಕೀಯ ಅಧ್ಯಯನವನ್ನು ಮಾಡುತ್ತಿದ್ದ ವಿದ್ಯಾರ್ಥಿಗಳು ಇದೀಗ ಭಾರತದಲ್ಲಿ ಸಿಲುಕಿದ್ದಾರೆ.

ಯುಎಸ್​ನಲ್ಲಿ ಲಾಕ್​ಡೌನ್​ ಎಚ್ಚರಿಕೆ

ಇದೇ ಸಂದರ್ಭದಲ್ಲಿ ಯುಎಸ್ ಅಧ್ಯಕ್ಷ ಜೋ ಬಿಡನ್ ಅವರ ಮುಖ್ಯ ವೈದ್ಯಕೀಯ ಸಲಹೆಗಾರ ಡಾ ಆಂಥೋನಿ ಫೌಸಿ, ಪ್ರಕರಣಗಳು ಹೆಚ್ಚಾದರೆ ಯುಎಸ್ ಶೀಘ್ರದಲ್ಲೇ ಲಾಕ್‌ಡೌನ್ ಕ್ರಮಗಳನ್ನು ಹೇರುವುದನ್ನು ನೋಡಬಹುದು ಎಂದು ಎಚ್ಚರಿಸಿದ್ದಾರೆ. ಒಮಿಕ್ರಾನ್​ನ ಬಿಎ.2 ಉಪ-ರೂಪಾಂತರವು ಶೀಘ್ರದಲ್ಲೇ ಯುಎಸ್​ನಲ್ಲಿ ಸೋಂಕಿನ ಪ್ರಮಾಣವನ್ನು ಹೆಚ್ಚಿಸಬಹುದು ಎಂದು ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net