

ನವದೆಹಲಿ: ಇಂದು ಬಜೆಟ್ ಮಂಡಿಸುವ ವೇಳೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಡಿಜಿಟಲ್ ಯೂನಿವರ್ಸಿಟಿ ಸ್ಥಾಪನೆಗೆ ಕೇಂದ್ರ ಸರ್ಕಾರ ಯೋಜನೆ ರೂಪಿಸುತ್ತಿದೆ ಎಂದು ಘೋಷಿಸಿದರು. ಈ ಡಿಜಿಟಲ್ ಯೂನಿವರ್ಸಿಟಿಯು ದೇಶದ ವಿದ್ಯಾರ್ಥಿಗಳಿಗೆ ವಿಶ್ವ ದರ್ಜೆಯ ಶಿಕ್ಷಣವನ್ನು ನೀಡಲಿದೆ ಎಂದರು.
ವಿಶ್ವದರ್ಜೆಯ ಸಾರ್ವತ್ರಿಕ ಶಿಕ್ಷಣವನ್ನು ವೈಯಕ್ತಿಕ ಕಲಿಕಾ ಅನುಭವದೊಂದಿಗೆ ದೇಶದ ವಿದ್ಯಾರ್ಥಿಗಳ ಮನೆಯ ಬಾಗಿಲಿಗೆ ಪೂರೈಸಲು ಡಿಜಿಟಲ್ ಯುನಿವರ್ಸಿಟಿಯನ್ನು ಸ್ಥಾಪಿಸಲಾಗುವುದು ಎಂದು ಬಜೆಟ್ ಮಂಡನೆ ವೇಳೆ ನಿರ್ಮಲಾ ಸೀತಾರಾಮನ್ ಹೇಳಿದರು.
ಡಿಜಿಟಲ್ ಯೂನಿವರ್ಸಿಟಿ ಅಂದರೆ ಏನು?
ನೆಟ್ವರ್ಕ್ ಹಬ್ ಮತ್ತು ಸ್ಪೋಕ್ ಮಾಡೆಲ್ ಆಧಾರದ ಮೇಲೆ ಕೇಂದ್ರ ಸರ್ಕಾರವು ಡಿಜಿಟಲ್ ಯೂನಿವರ್ಸಿಟಿಯನ್ನು ಸ್ಥಾಪಿಸಲು ಯೋಜಿಸಿದೆ. ಇಲ್ಲಿ ಹಬ್ ಮತ್ತು ಸ್ಪೋಕ್ ಮಾಡೆಲ್ ವಿತರಣಾ ವಿಧಾನವಾಗಿ ಕಾರ್ಯನಿರ್ವಹಿಸಲಿದೆ. ಅಂದ್ರೆ ಕೇಂದ್ರಿಕೃತ ಹಬ್ನಲ್ಲಿ ಸೃಷ್ಟಿಯಾಗುವ ಜ್ಞಾನವನ್ನು ಸ್ಪೋಕ್ ಸಣ್ಣ ಸಣ್ಣ ಸ್ಥಳಗಳ ಅಂತಿಮ ಬಳಕೆಯವರೆಗೂ ತಲುಪಿಸುತ್ತದೆ.
ಇಲ್ಲಿ "ಹಬ್" ಎಂಬುದು ದೇಶದ ಅತ್ಯುತ್ತಮ ಸರ್ಕಾರಿ ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳನ್ನು ಸೂಚಿದರೆ, ಸ್ಪೋಕ್ ಪ್ರತಿಯೊಬ್ಬ ವೈಯಕ್ತಿಕ ವಿದ್ಯಾರ್ಥಿಗಳನ್ನು ಸೂಚಿಸುತ್ತದೆ. ಹಬ್ನಲ್ಲಿ ಸೃಷ್ಟಿಯಾಗುವ ಜ್ಞಾನವನ್ನು ಡಿಜಿಟಲ್ ಮಾಧ್ಯಮಗಳ ಮೂಲಕ ಪ್ರತಿಯೊಬ್ಬ ವಿದ್ಯಾರ್ಥಿಯನ್ನು ತಲುಪಿಸುವುದು ಡಿಜಿಟಲ್ ಯೂನಿವರ್ಸಿಟಿಯ ಕರ್ತವ್ಯ ಆಗಿರಲಿದೆ.
ಪ್ರತಿಯೊಂದು ಹಬ್ಗಳು ಕೂಡ "ಅತ್ಯಾಧುನಿಕ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಪರಿಣತಿಯನ್ನು" ನಿರ್ಮಿಸುವ ನಿರೀಕ್ಷೆಯಿದೆ. ನಿರ್ಮಲಾ ಸೀತಾರಾಮನ್ ಮಾತಿನ ಪ್ರಕಾರ ಹಬ್ನಲ್ಲಿ ನೀಡಲಾಗುವ ಜ್ಞಾನವೂ ದೇಶದ ವಿವಿಧ ಭಾಷೆಗಳಲ್ಲಿ ದೊರೆಯಲಿದೆ.
ಐಎಸ್ಟಿಇ ಗುಣಮಟ್ಟದ ಪ್ರಕಾರವೇ ಡಿಜಿಟಲ್ ಯೂನಿವರ್ಸಿಟಿ ಸ್ಥಾಪನೆಯಾಗಲಿದೆ. ಐಎಸ್ಟಿಇ ಮಾನದಂಡಗಳು ಬೋಧನೆ ಮತ್ತು ಕಲಿಕೆಯಲ್ಲಿ ತಂತ್ರಜ್ಞಾನದ ಬಳಕೆಯ ಮಾನದಂಡವನ್ನು ತಿಳಿಸುತ್ತದೆ. (ಏಜೆನ್ಸೀಸ್)