PFI ಜೊತೆ RSS ಹೋಲಿಕೆ ಮಾಡಿ ವಿವಾದ ಸೃಷ್ಟಿಸಿದ ಹಿರಿಯ ಪೊಲೀಸ್​ ಅಧಿಕಾರಿಗೆ ಹಿಗ್ಗಾಮುಗ್ಗಾ ತರಾಟೆ!

Bihar SSP
Published on

ಪಟನಾ: ಭಯೋತ್ಪಾದಕ ಘಟಕವನ್ನು ಪತ್ತೆ ಹಚ್ಚಿದ ಸಂಬಂಧ ಮಾಧ್ಯಮಗಳ ಮುಂದೆ ಹೇಳಿಕೆ ನೀಡುವಾಗ ಬಿಹಾರದ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ವಿವಾದ ಸೃಷ್ಟಿಸಿದ್ದಾರೆ. ಉ್ರಗರ ಕಾರ್ಯ ವಿಧಾನವನ್ನು ವಿವರಿಸುವಾಗ ಬಿಜೆಪಿಯ ಸೈದ್ಧಾಂತಿಕ ಗುರು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್​ಎಸ್​ಎಸ್​) ವನ್ನು ಉದಾಹರಣೆಯಾಗಿ ನೀಡುವ ಮೂಲಕ ಹಲವರ ಕೆಂಗಣ್ಣಿಗೆ ಪೊಲೀಸ್​ ಅಧಿಕಾರಿ ಗುರಿಯಾದರು.

ಲಾಠಿ ಬಳಕೆಗೆ ಯುವಕರಿಗೆ ತರಬೇತಿ ನೀಡಲು ಇರುವ ಆರ್​ಎಸ್​ಎಸ್ ಶಾಖೆಯಂತೆ ಪಿಎಫ್​ಐ ಸಂಘಟನೆ ದೈಹಿಕ ಶಿಕ್ಷಣದ ಸೋಗಿನಲ್ಲಿ ಯುವಕರನ್ನು ತಮ್ಮ ಕೇಂದ್ರಗಳಿಗೆ ಕರೆಸಿಕೊಂಡು ತಮ್ಮ ಸಿದ್ಧಾಂತವನ್ನು​ ಪ್ರಚಾರ ಮಾಡುತ್ತಿದ್ದರು ಮತ್ತು ಯುವಕರ ಬ್ರೈನ್​ವಾಷ್​ ಮಾಡುತ್ತಿದ್ದರು ಎಂದು ಬಿಹಾರ ರಾಜಧಾನಿ ಪಟನಾದ ಹಿರಿಯ ಪೊಲೀಸ್​ ವರಿಷ್ಠಾಧಿಕಾರಿ ಮಾನವ್ಜೀತ್​​ ಸಿಂಗ್​ ಧಿಲ್ಲಾನ್​ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ.

ಈ ಹೇಳಿಕೆ ವೈರಲ್​ ಆಗುತ್ತಿದ್ದಂತೆ ಬಿಜೆಪಿ ನಾಯಕರು ಅದನ್ನು ಖಂಡಿಸಿದ್ದಾರೆ. ಅಲ್ಲದೆ, ಧಿಲ್ಲಾನ್​ ಅವರಿಂದ 48 ಗಂಟೆಯೊಳಗೆ ಅವರ ಹೇಳಿಕೆಗೆ ವಿವರಣೆ ಪಡೆಯಬೇಕೆಂದು ಬಿಹಾರ ಸಿಎಂ ನಿತೀಶ್​ ಕುಮಾರ್​ ಅವರು ಹಿರಿಯ ಪೊಲೀಸ್​ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ.

ಬಿಹಾರದ ಎಸ್​ಎಸ್​ಪಿ ಧಿಲ್ಲಾನ್​ ಈ ಕೂಡಲೇ ತಮ್ಮ ಹೇಳಿಕೆಯನ್ನು ಹಿಂಪಡೆದುಕೊಂಡು ಕ್ಷಮೆಯಾಚಿಸಬೇಕೆಂದು ರಾಜ್ಯಸಭಾ ಸದಸ್ಯ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಸುಶೀಲ್​ ಮೋದಿ ಆಗ್ರಹಿಸಿದ್ದಾರೆ. ಎಸ್​ಎಸ್​ಪಿ ಅವರು ತಮ್ಮ ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡಿದ್ದಾರೆ ಎಂಬುದನ್ನು ಇಂತಹ ಹೇಳಿಕೆಗಳು ನಿರೂಪಿಸುತ್ತವೆ. ಆರ್​ಎಸ್​ಎಸ್​ನಂತಹ ರಾಷ್ಟ್ರೀಯ ಸಂಘಟನೆಯನ್ನು ಅದು ಹೇಗೆ ಪಿಎಫ್​ಐ ಜೊತೆ ಹೋಲಿಕೆ ಮಾಡುತ್ತೀರಾ? ಎಂದು ಬಿಜೆಪಿ ಶಾಸಕ ಹರಿಭೂಷಣ್​ ಠಾಕೂರ್​ ಬಚೌಲ್​ ಟೀಕಿಸಿದ್ದಾರೆ.

ನಿನ್ನೆ (ಜುಲೈ 14) ಬಿಹಾರದ ರಾಜಧಾನಿ ಪಟನಾದಲ್ಲಿ ಸಂಶಯಾಸ್ಪದ ಭಯೋತ್ಪಾದಕ ಘಟಕವನ್ನು ಭೇದಿಸಿದ ಬೆನ್ನಲ್ಲೇ ಮಾಧ್ಯಮಗಳ ಮುಂದೆ ಕಾರ್ಯಾಚರಣೆ ಕುರಿತು ವಿವರಣೆ ನೀಡುವಾಗ ಎಸ್​ಎಸ್​ಪಿ ಧಿಲ್ಲಾನ್​ ಈ ಹೇಳಿಕೆ ನೀಡಿದರು. ಪತ್ತೆಯಾದ ಭಯೋತ್ಪಾದಕ ಘಟಕವು 2047ಕ್ಕೆ ಭಾರತವನ್ನು ಮುಸ್ಲಿಂ ರಾಷ್ಟ್ರವನ್ನಾಗಿಸುವ ಸಂಚು ರೂಪಿಸುತ್ತಿತ್ತು ಎಂದು ತಿಳಿದುಬಂದಿದೆ. ಅಲ್ಲದೆ, ಜುಲೈ 12ರಂದು ಪ್ರಧಾನಿ ಮೋದಿ ಭೇಟಿಯ ವೇಳೆ ಅವರನ್ನು ಹತ್ಯೆ ಮಾಡಲು ಪ್ಲಾನ್​ ಮಾಡಿದ್ದರು ಎಂಬ ಭಯಾನಕ ಅಂಶ ಶಂಕಿತ ಉಗ್ರರ ಬಂಧನದ ಬಳಿಕ ಬಯಲಾಗಿದೆ ಈ ಘಟಕಕ್ಕೆ ಪಿಎಫ್​ಐ ಲಿಂಕ್​ ಇದೆ ಎಂಬುದು ಬಯಲಾಗಿದೆ. ಏಕೆಂದರೆ, ದಾಳಿ ವೇಳೆ 2047ಕ್ಕೆ ‘ಭಾರತವು ಇಸ್ಲಾಮಿಕ್​ ಭಾರತದ ಆಡಳಿತ ಕಡೆಗೆ’ ಎಂಬ ಶೀರ್ಷಿಕೆಯುಳ್ಳ ದೋಷಾರೋಪಣೆ ದಾಖಲೆಗಳು ಪತ್ತೆಯಾಗಿವೆ. ಅಲ್ಲದೆ, 25 ಪಿಎಫ್​ಐ ಭಿತ್ತಿಪತ್ರಗಳನ್ನು ಸಹ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಬಂಧಿತ ಶಂಕಿತ ಉಗ್ರರಿಬ್ಬರು ಭಾರತದಲ್ಲಿ ದೇಶ ವಿರೋಧಿ ಅಭಿಯಾನ ನಡೆಸಲು ಪಾಕಿಸ್ತಾನ, ಬಾಂಗ್ಲಾದೇಶ, ಟರ್ಕಿ ಸೇರಿದಂತೆ ಹಲವು ಇಸ್ಲಾಮಿಕ್ ರಾಷ್ಟ್ರಗಳಿಂದ ಹಣ ಪಡೆಯುತ್ತಿದ್ದರು ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net