

ವಿಜಯನಗರ: ನಿನ್ನೆಯ ನಮ್ಮ ರಾಜಾಹುಲಿ ಭಾಷಣಕ್ಕೆ ಕಾಂಗ್ರೆಸ್ನವರು ತತ್ತರಿಸಿ ಹೋಗಿದ್ದಾರೆ. ಬಿಎಸ್ವೈಗೆ ಅರಳು ಮರಳು ಅಂತಿದ್ದಾರೆ. ಆದರೆ, ರಾಜಾಹುಲಿ ಯಾರಿಗೂ ಜಗ್ಗಲ್ಲ ಮತ್ತು ಬಗ್ಗಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೊಂಡಾಡಿದರು.
ಹೊಸಪೇಟೆಯಲ್ಲಿ ಬಿಜೆಪಿ ಜನ ಸಂಕಲ್ಪ ಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಬೊಮ್ಮಾಯಿ, ಬಿಎಸ್ವೈಗೆ ಇಂದಿಗೂ ಅದೇ ಸ್ಫೂರ್ತಿ ಇದೆ. ಬಿಎಸ್ವೈ ಅವರನ್ನು ಅಧಿಕಾರದಿಂದ ಇಳಿಸಲು ಏನೆಲ್ಲಾ ಮಾಡಿದ್ರಿ ಅಂತಾ ಗೊತ್ತಿದೆ. ಕೇಸ್ ಹಾಕಿಸಿದ್ರು ಮತ್ತು ಶಾಶ್ವತವಾಗಿ ಅಧಿಕಾರದಿಂದ ದೂರ ಇಡಲು ಯತ್ನಿಸಿದ್ರು. ಆದರೆ, ಕರ್ನಾಟಕದ ಹೃದಯ ಸಿಂಹಾಸನದಲ್ಲಿ ಬಿಎಸ್ವೈ ನೆಲೆಸಿದ್ದಾರೆ ಎಂದು ಹೇಳಿದರು.
ಪ್ರಪಂಚದಲ್ಲಿ ಕೋವಿಡ್ ಆವರಿಸಿತು. ಆದರೆ, ಮೋದಿಯವರು ದೇಶದ ಜನರ ಆರೋಗ್ಯದ ಸುರಕ್ಷತೆಗೆ ಗಮನ ನೀಡಿದರು. ಪ್ರವಾಹಕ್ಕೆ ಸ್ಪಂದಿಸಿದ್ದಾರೆ. ಆರೋಗ್ಯಕ್ಕೆ ಗಮನ ಹರಿಸಿದ್ದಾರೆ ಹಾಗೂ ಬೇಟಿ ಪಡಾವೋ ಬೇಟಿ ಬಚಾವೋ ಸೇರಿದಂತೆ ಹಲವಾರು ಯೋಜನೆಗಳನ್ನು ಮಾಡಿದ್ದಾರೆ. ನಿನ್ನೆ ವಿಶ್ವಬ್ಯಾಂಕ್ ವರದಿ ಬಂದಿದೆ. ಬೇರೆ ಎಲ್ಲ ದೇಶಗಳಲ್ಲಿ ಆರ್ಥಿಕ ಹಿಂಜರಿತ ಕಂಡಿದೆ. ಆದರೆ, ಭಾರತ ಆರ್ಥಿಕ ಸಮಾನತೆ ಕಂಡುಕೊಂಡು ಸಧೃಡವಾಗಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಕಾರಣ ಎಂದು ತಿಳಿಸಿದರು.
ಸಿದ್ದರಾಮಣ್ಣ ನಿಮ್ಮಗೆ ಅರಳು ಮರಳಾಗಿದೆ. ಮೀಸಲಾತಿ ವಿಚಾರವಾಗಿ ಕಾಂಗ್ರೆಸ್ ಯಾವತ್ತೂ ಯೋಚನೆ ಮಾಡಲಿಲ್ಲ. ದೀನ-ದಲಿತರ ಹೆಸರು ಹೇಳಿಕೊಂಡು, ಮತ ಪಡೆದು ರಾಜಕೀಯ ಮಾಡಿದ್ರಿ. ದಲಿತರನ್ನು ಕತ್ತಲೆಯಲ್ಲಿ ಇಟ್ಟಿದ್ರಿ ಎಂದು ಟೀಕಾ ಪ್ರಹಾರ ನಡೆಸಿದ ಸಿಎಂ ಬೊಮ್ಮಾಯಿ, ನಮಗೂ ಕಾನೂನು ಗೊತ್ತಿದೆ. ಯಾವುದಾದ್ರು ಸಾಧನೆ ಮಾಡೋಕೆ ದಿಟ್ಟ ನಿರ್ಧಾರವನ್ನು ಕೈಗೊಳ್ಳಬೇಕು. ಬೆಕ್ಕು ಅಡ್ಡ ಬರುತ್ತದೆ ಅಂದ್ರೆ ಮನೆಯಿಂದ ಹೊರಗೆ ಬರದಿರಲು ಸುಮ್ಮನೇ ಇರೋಕ್ಕಾಗುತ್ತಾ. ಬೆಕ್ಕು ಅಲ್ಲ, ಹುಲಿ ಅಡ್ಡ ಬಂದ್ರು ನಾವೂ ಹೆದರಲ್ಲ ಎಂದರು.
ನೀವು ಸಮುದಾಯ ಒಡೆಯುವ ಪ್ರಯತ್ನ ಮಾಡಿದ್ರಿ. ಲಿಂಗಾಯತ, ವೀರಶೈವ ಅಂತಾ ಧರ್ಮ ಒಡೆಯಲು ಯತ್ನಿಸಿದ್ರಿ. ನಮ್ಮ ಸರ್ಕಾರದಲ್ಲಿ ಎಲ್ಲರೂ ಒಗ್ಗಟ್ಟಾಗಿ, ಒಂದಾಗಿ ಸಾಗಿ ಅಂತಿದ್ದೇವೆ. ನೀವು ದಲಿತ ಮಕ್ಕಳ ಹಾಸಿಗೆ ದಿಂಬು ಸಹ ಬಿಡದೇ ಭ್ರಷ್ಟಾಚಾರ ಮಾಡಿದ್ರಿ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ದುಡ್ಡೇ ಖರ್ಚು ಮಾಡಲಿಲ್ಲ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ನಮ್ಮ ಸರ್ಕಾರದಲ್ಲಿ ಯಾರಿಗೂ ಭಯ ಇಲ್ಲ. ನಿಮ್ಮ ಸರ್ಕಾರ ಇದ್ದಾಗ 24 ಹಿಂದುಗಳ ಹತ್ಯೆ ಆಯ್ತು. ಆದ್ರೆ ಈಗ ಆ ಭಯ ಇಲ್ಲ. ಹಗರಣದ ಬಗ್ಗೆ ನ್ಯಾಯಾಂಗ ತನಿಖೆ ಮಾಡಿ ಅಂತಾರೆ. ನಾವೂ ಲೋಕಾಯುಕ್ತ ಮಾಡಿದ್ವಿ. ನಿಮ್ಮ ಸರ್ಕಾರ ಇದ್ದಾಗ ಸಚಿವರ ಮೇಲೆ ಕೇಸ್ ಆಗ್ತಾ ಇದ್ದವು. ಅದಕ್ಕೆ ನೀವು ಎಸಿಬಿಯನ್ನು ಅರಂಭ ಮಾಡಿದ್ರಿ. ಈಗ ಲೋಕಾಯುಕ್ತ ಮತ್ತೆ ಬಂದ ಮೇಲೆ ನಿಮ್ಮ ಹಗರಣಗಳ ತನಿಖೆ ಆಗುತ್ತವೆ. ಆಗ ಕಾಂಗ್ರೆಸ್ನ ಭ್ರಷ್ಟಾಚಾರದ ಬಣ್ಣ ಬಯಲಾಗುತ್ತದೆ ಎಂದರು.
ನಮ್ಮ ಸರ್ಕಾರದಲ್ಲಿ ಯಾರಿಗೂ ಭಯ ಇಲ್ಲ. ನಮ್ಮ ಸರ್ಕಾರದಿಂದ ಕಾನೂನು ಬಾಹಿರ ದಂಧೆ ಮಾಡೋರಿಗೆ, ಡ್ರಗ್ ದಂಧೆ ಮಾಡೋರಿಗೆ ಭಯ ಹುಟ್ಟಿದೆ. ಅಲ್ಲದೆ, ಕಾಂಗ್ರೆಸ್ನವರಿಗೂ ಭಯ ಹುಟ್ಟಿದೆ. ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಆಗಲೇ ಅರ್ಧ ಮುಳಗಿರುವ ಹಡಗಾಗಿದೆ. ಪಾಪ ರಾಹುಲ್ ಗಾಂಧಿಗೆ ಸಿದ್ದರಾಮಯ್ಯ-ಡಿಕೆಶಿಯನ್ನು ಜೋಡೋ ಮಾಡೋದೇ ಆಗಿದೆ. ಇನ್ನೂ ಎಲ್ಲಿ ಭಾರತ ಜೋಡೋ ಮಾಡ್ತೀರಾ ನೀವು ಎಂದು ವ್ಯಂಗ್ಯವಾಡಿದರು.
ಸಾರ್ವಕರ್ ಬಗ್ಗೆ ಮಾತನಾಡ್ತಾರೆ. ದೇಶವನ್ನು ವಿಭಜನೆ ಮಾಡಿದ್ದು ಕಾಂಗ್ರೆಸ್. ಕಾಂಗ್ರೆಸ್ ಪಕ್ಷವನ್ನು ವಿಭಜನೆ ಮಾಡಿ ಅಂತಾ ಗಾಂಧೀಜಿ ಹೇಳಿದ್ದರು. ಆದರೆ, ನಿಮ್ಮ ಅಧಿಕಾರಕಕ್ಕಾಗಿ ಕಾಂಗ್ರೆಸ್ ಪಕ್ಷ ಉಳಿಸಿಕೊಂಡ್ರಿ. 11 ರಾಜ್ಯಗಳಲ್ಲಿ ನಕ್ಸಲರು ಕೊಲೆ ಮಾಡುತ್ತಿರುವುದು ನಿಮ್ಮ ನೀತಿಯಿಂದ ಎಂದು ಕಿಡಿಕಾರಿದರು. (ದಿಗ್ವಿಜಯ ನ್ಯೂಸ್)