ಬರ್ತಡೇ ಪಾರ್ಟಿಗೆ ಆಹ್ವಾನ: ನಂಬಿ ಹೋದ ಮಹಿಳಾ ಪೇದೆಯ​ ಮೇಲೆ ಮೂವರು ಕಾಮುಕರಿಂದ ಗ್ಯಾಂಗ್​ರೇಪ್

Woman Police
Published on

ಭೋಪಾಲ್​: ಮಹಿಳಾ ಕಾನ್ಸ್​ಟೇಬಲ್​ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಮಧ್ಯಪ್ರದೇಶದ ನೀಮುಚ್​ ಜಿಲ್ಲೆಯಲ್ಲಿ ನಡೆದಿದೆ ಎನ್ನಲಾಗಿದೆ. ಮೂವರು ಕಾಮುಕರು ಮಹಿಳಾ ಪೇದೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಅದನ್ನು ವಿಡಿಯೋ ಮಾಡಿ, ಕೊಲೆ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ. ಈ ಘಟನೆ ಶನಿವಾರ ವರದಿಯಾಗಿದೆ.

ಪೊಲೀಸರ ಪ್ರಕಾರ ಈ ಘಟನೆ ಈ ತಿಂಗಳ ಆರಂಭದಲ್ಲಿ ನಡೆದಿದೆ. ಆದರೆ, 30 ವರ್ಷದ ಸಂತ್ರಸ್ತೆ ಸೆಪ್ಟೆಂಬರ್​ 13 ರಂದು ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಒಟ್ಟು ಐವರ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಮುಖ ಆರೋಪಿಯ ತಾಯಿಯ ಮೇಲೆಯೂ ದೂರು ದಾಖಲಾಗಿದೆ.

ಪ್ರಮುಖ ಆರೋಪಿ, ಆತನ ಸಹೋದರ ಮತ್ತು ಇನ್ನೊಬ್ಬ ವ್ಯಕ್ತಿ ಸೇರಿ ಒಟ್ಟು ಮೂವರು ಬರ್ತಡೇ ಪಾರ್ಟಿ ವೇಳೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆಂದು ಸಂತ್ರಸ್ತ ಮಹಿಳಾ ಪೇದೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪ್ರಮುಖ ಆರೋಪಿಯ ತಾಯಿ ಬೆದರಿಕೆ ಹಾಕಿದ್ದಾರೆ ಮತ್ತು ಅವರ ಸಂಬಂಧಿಯೊಬ್ಬರು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಹಣ ವಸೂಲಿ ಮಾಡಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ.

ಆರೋಪಿ ಫೇಸ್​ಬುಕ್​ ಮೂಲಕ ಸಂತ್ರಸ್ತ ಮಹಿಳಾ ಪೇದೆಯನ್ನು ಪರಿಚಯ ಮಾಡಿಕೊಂಡಿದ್ದ. ಬಳಿಕ ಕಳೆದ ಏಪ್ರಿಲ್​ನಿಂದ ವಾಟ್ಸ್​ಆ್ಯಪ್​ ಮೂಲಕ ಸಂದೇಶ ವಿನಿಮಯ ನಡೆಯುತ್ತಿತ್ತು. ತಮ್ಮನ ಬರ್ತಡೇ ಆಚರಿಸುತ್ತಿದ್ದೇವೆ ಪಾರ್ಟಿಗೆ ಬನ್ನಿ ಎಂದು ಪ್ರಮುಖ ಆರೋಪಿ ಮಹಿಳಾ ಪೇದೆಯನ್ನು ಆಹ್ವಾನಿಸಿದ್ದ. ಆಹ್ವಾನದ ಮೇರೆಗೆ ಪಾರ್ಟಿಗೆ ಹೋದ ಪೇದೆಯ ಮೇಲೆ ಮೂವರು ಸೇರಿ ಗ್ಯಾಂಗ್​ರೇಪ್​ ಮಾಡಿದ್ದಾರೆ ಎಂದು ನೀಮುಚ್​ ಮಹಿಳಾ ಪೊಲೀಸ್​ ಉಸ್ತುವಾರಿ ಅನುರಾಧ ಗಿರ್ವಾಲ್​ ಹೇಳಿದ್ದಾರೆ.

ಸಂತ್ರಸ್ತ ಮಹಿಳಾ ಪೇದೆಯನ್ನು ಈ ಮೊದಲು ನೀಮುಚ್​ ಜಿಲ್ಲೆಗೆ ಪೋಸ್ಟಿಂಗ್​ ಮಾಡಲಾಗಿತ್ತು. ಪ್ರಸ್ತುತ ಇಂದೋರ್​ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದು, ಸದ್ಯ ಪ್ರಕರಣದ ಪ್ರಮುಖ ಆರೋಪಿ ಮತ್ತು ಆತನ ತಾಯಿಯನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಯುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net