More

    ಬದಲಾಗಬೇಕಾಗಿರುವುದು ನಾವು, ಪ್ರಪಂಚವಲ್ಲ…; ವಿಜಯವಾಣಿ ಸೆಲೆಬ್ರಿಟಿ ಕಾರ್ನರ್​ನಲ್ಲಿ ನಟ ಶ್ರೀನಾಥ್

    ಬದಲಾಗಬೇಕಾಗಿರುವುದು ನಾವು, ಪ್ರಪಂಚವಲ್ಲ...; ವಿಜಯವಾಣಿ ಸೆಲೆಬ್ರಿಟಿ ಕಾರ್ನರ್​ನಲ್ಲಿ ನಟ ಶ್ರೀನಾಥ್ನಾನು ಚಿತ್ರರಂಗಕ್ಕೆ ಬಂದು 54 ವರ್ಷಗಳಾಗಿವೆ. ಚಿತ್ರರಂಗ ನನ್ನನ್ನು ಬಹಳ ಚೆನ್ನಾಗಿ ನಡೆಸಿಕೊಂಡಿದೆ. ಗೌರವ ಕೊಟ್ಟಿದೆ. ‘ಅವರು ನಮ್ಮನ್ನು ತುಳಿದರು, ಇವರು ಅನ್ಯಾಯ ಮಾಡಿದರು…’ ಎಂಬ ಮಾತುಗಳನ್ನು ಆಗಾಗ ಕೇಳುತ್ತಿರುತ್ತೇವೆ. ಆದರೆ, ನನ್ನ ದೃಷ್ಟಿಯಲ್ಲಿ ಚಿತ್ರರಂಗದಲ್ಲಿ ಯಾರೊಬ್ಬರನ್ನೂ ತುಳಿಯುವುದಕ್ಕೆ ಪ್ರಯತ್ನಿಸುವುದಿಲ್ಲ.

    ಬಹಳ ವರ್ಷಗಳ ಹಿಂದಿನ ಮಾತು. ಮಿಡಲ್ ಸ್ಕೂಲ್​ನಲ್ಲಿದ್ದೆ. ಶಾಲೆಗೆ ಹೋಗುವಾಗ, ಗಾಂಧಿಬಜಾರ್ ಸರ್ಕಲ್ ಬಳಿ ಗೋಡೆಗೆ ಯಾರೋ ಪೋಸ್ಟರ್ ಅಂಟಿಸುತ್ತಿದ್ದರು. ಹೋಗಿ ‘ಅದೇನು?’ ಎಂದು ಕೇಳಿದೆ. ‘ತೋರಿಸ್ತೀನಿ ತಡಿ’ ಎಂದು ಅವನು ಪೋಸ್ಟರ್ ಅಂಟಿಸಿದ. ಅದೇನೆಂದು ಕೇಳಿದೆ. ‘ಅದು ಸಿನಿಮಾ’ ಎಂದ. ‘ಯಾರದು?’ ಎಂದು ಕೇಳಿದೆ. ಹೀರೋ ಎಂದ. ನನಗೆ ಏನೇನಿಸಿತೋ ಗೊತ್ತಿಲ್ಲ. ನನ್ನದೂ ಒಂದು ದಿನ ಹೀಗೆ ಪೋಸ್ಟರ್ ಬರುತ್ತದೆ ಎಂದೆ. ಏಣಿ ಇಳಿದು ಬಂದು ಪಟ್ ಅಂತ ಹೊಡೆದ. ಸ್ಕೂಲ್​ಗೆ ಹೋಗು ಎಂದು ಗದರಿದ. ಅದಾಗಿ ಕೆಲವು ವರ್ಷಗಳ ನಂತರ, ನನ್ನ ಮೊದಲ ಚಿತ್ರ ‘ಮಧುರ ಮಿಲನ’ದ ಪೋಸ್ಟರನ್ನು ಸ್ನೇಹಿತರು ಅದೇ ಗೋಡೆಯ ಮೇಲೆ ಅಂಟಿಸಿದ್ದರು. ನಾನು ನೋಡ್ತಾ ಇದ್ದೆ. ಪೋಸ್ಟರ್ ಅಂಟಿಸಿ ಬಂದ ಸ್ನೇಹಿತರ ಕಣ್ಣಲ್ಲಿ ಆನಂದಬಾಷ್ಪ.

    ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂದರೆ ಮೊದಲು ಸಕಾರಾತ್ಮಕ ಚಿಂತನೆ ಇರಬೇಕು. ಅಂದುಕೊಂಡಿದ್ದನ್ನು ಸಾಧಿಸುವ ಛಲ ಮತ್ತು ವಿಶ್ವಾಸ ಇರಬೇಕು. ನಾನು ಚಿಕ್ಕವನಿದ್ದಾಗ, ನಮ್ಮ ತಾತ ‘ವಿಶ್ವವ್ಯವಸ್ಥೆ’ ಎಂಬ ನಾಟಕ ಮಾಡಿಸಿದರು. ನಮ್ಮ ವಠಾರದ ಹುಡುಗರನ್ನೇ ಇಟ್ಟುಕೊಂಡು ಬೆಂಗಳೂರಿನ ಸನ್ನಿಧಿ ರಸ್ತೆಯ ಮಲ್ಲಿಕಾರ್ಜುನ ದೇವಸ್ಥಾನದ ಜಗಲಿ ಮೇಲೆ ನಾಟಕ ಆಡಿಸಿದರು. ಅದರಲ್ಲಿ ನನ್ನದು ಈಶ್ವರನ ಪಾತ್ರ. ನಾಟಕ ಮಾಡುವ ಸಂದರ್ಭದಲ್ಲಿ ಒಂದು ಸಂಭಾಷಣೆ ಮರೆತೆ. ಸೈಡ್​ವಿಂಗ್​ನಲ್ಲಿದ್ದ ತಾತ ಕರೆದರು. ಪಕ್ಕಕ್ಕೆ ನೋಡಿ, ‘ಏನ್ ತಾತ’ ಎಂದು ಕೇಳಿದೆ. ಅವರು ಸಂಭಾಷಣೆ ನೆನಪಿಸಿದರು. ಅವರು ನೆನಪಿಸಿದ ಸಂಭಾಷಣೆ ಹೇಳಿದೆ. ನನಗೆ ಅದು ನಾಟಕ ಅಂತ ಗೊತ್ತಿಲ್ಲ, ನಾಟಕದಲ್ಲಿ ಹೇಗಿರಬೇಕು ಅಂತ ಗೊತ್ತಿಲ್ಲ. ತಾತ ಕರೆದರು ಎಂಬ ಕಾರಣಕ್ಕೆ, ಅವರತ್ತ ತಿರುಗಿ ‘ಏನ್ ತಾತ?’ ಎಂದು ಕೇಳಿದ್ದೆ. ಇದು ಜನರಲ್ಲಿ ನಗೆ ಉಕ್ಕಿಸಿತು. ಅವರು ಚಪ್ಪಾಳೆ ತಟ್ಟಿದರು. ಬಹುಶಃ ಈ ಚಪ್ಪಾಳೆ ಮತ್ತು ಪ್ರೋತ್ಸಾಹಗಳೇ ನನ್ನಲ್ಲಿ ಅಭಿನಯ ಮಾಡಬೇಕು ಎಂಬ ಆಸೆಯನ್ನು ಚಿಗುರಿಸಿತೇನೋ… ಆ ನಂತರ ಅಭಿನಯದಲ್ಲಿ ಆಸಕ್ತಿ ತೀವ್ರವಾಯಿತು. ಅಭಿನಯಿಸಬೇಕು ಎಂಬ ಆಸೆಯಿಂದ ಒಮ್ಮೆ ಮುಂಬೈಗೆ ಓಡಿ ಹೋಗಿದ್ದೂ ಆಯಿತು. ವಾಪಸ್ಸು ಬಂದ ಮೇಲೆ ಒಮ್ಮೆ ನನ್ನ ತಂದೆ, ‘ನೀನೇನಾಗಬೇಕು ಅಂತಿದ್ದೀಯ’ ಎಂದು ಕೇಳಿದರು. ಮರುಯೋಚನೆಯೇ ಇಲ್ಲದೆ, ‘ಸಿನಿಮಾನಟ’ ಎಂದೆ.

    ನಾವು ಮಧ್ಯಮವರ್ಗದ ಜನ. ನಮ್ಮ ಕುಟುಂಬದಲ್ಲಿ ವಕೀಲ ವೃತ್ತಿಯಲ್ಲಿದ್ದವರೇ ಹೆಚ್ಚು. ನಾನು ವಕೀಲ ಅಥವಾ ಬೇರೆ ಇನ್ಯಾವುದೋ ವೃತ್ತಿಯನ್ನೇ ಮಾಡಬೇಕೆಂದು ತಂದೆ ಪಟ್ಟು ಹಿಡಿದಿದ್ದರೆ, ನಾನು ಏನಾಗುತ್ತಿದ್ದೆನೋ ಗೊತ್ತಿಲ್ಲ. ಆದರೆ, ಅವರು ಪ್ರೋತ್ಸಾಹಿಸಿದರು. ಶ್ರೀ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್​ಗೆ ಸೇರಿಸಿದರು. ಅಭಿನಯವಿಲ್ಲದಿದ್ದರೂ ಬೇರೆ ಏನಾದರೂ ಮಾಡಬಹುದು, ಚಿತ್ರರಂಗ ಬಿಡುವ ಅನಿವಾರ್ಯತೆ ಇರುವುದಿಲ್ಲ ಎಂದು ಅರ್ಥ ಮಾಡಿಸಿದರು. ನಮ್ಮಪ್ಪನಿಗೆ ನಾನೇನಾಗಬೇಕು ಎಂಬ ಆಸೆ ಇತ್ತೋ ಗೊತ್ತಿಲ್ಲ. ಆದರೆ, ಅವರು ಅದ್ಯಾವುದನ್ನೂ ಹೇಳದೆ ನಮ್ಮನ್ನು ನಮ್ಮ ಪಾಡಿಗೆ ಬಿಟ್ಟು ಜೀವನದಲ್ಲಿ ಯಶಸ್ಸು ನೋಡುವಂತೆ ಮಾಡಿದರು. ನಾನು ಸಹ ಅದನ್ನೇ ಮುಂದುವರಿಸಿದೆ. ನನ್ನ ಮಗ, ಮಗಳಿಗೆ ಮುಂದೆ ಏನು ಮಾಡುತ್ತೀರಾ ಎಂದು ಕೇಳಲಿಲ್ಲ. ಅವರಿಗೆ ಇಷ್ಟವಾದುದನ್ನು ಮಾಡುವುದಕ್ಕೆ ಬಿಟ್ಟೆ. ಇದಕ್ಕೆ ಕಾರಣ, ತಂದೆ ನನ್ನಲ್ಲಿ ಬಿತ್ತಿದ್ದ ಸಕಾರಾತ್ಮಕ ಯೋಚನೆ.

    ನಾನು ಚಿತ್ರರಂಗಕ್ಕೆ ಬಂದು 54 ವರ್ಷಗಳಾಗಿವೆ. ಆಗಿನಿಂದ ಈಗಿನವರೆಗೂ ಚಿತ್ರರಂಗ ನನ್ನನ್ನು ಬಹಳ ಚೆನ್ನಾಗಿ ನಡೆಸಿಕೊಂಡಿದೆ. ಗೌರವ ಕೊಟ್ಟಿದೆ. ‘ಅವರು ನಮ್ಮನ್ನು ತುಳಿದರು, ಇವರು ಅನ್ಯಾಯ ಮಾಡಿದರು…’ ಎಂಬ ಮಾತುಗಳನ್ನು ಆಗಾಗ ಕೇಳುತ್ತಿರುತ್ತೇವೆ. ಆದರೆ, ನನ್ನ ದೃಷ್ಟಿಯಲ್ಲಿ ಚಿತ್ರರಂಗದಲ್ಲಿ ಯಾರೊಬ್ಬರನ್ನೂ ತುಳಿಯುವುದಕ್ಕೆ ಪ್ರಯತ್ನಿಸುವುದಿಲ್ಲ. ಇಲ್ಲಿ ನಾವು ಹೇಗೆ ನಡೆದುಕೊಳ್ಳುತ್ತೇವೆ ಎನ್ನುವುದು ಬಹಳ ಮುಖ್ಯ. ಯಾವತ್ತೂ ಇನ್ನೊಬ್ಬರನ್ನು ನೋಯಿಸದೆ, ನಮಗೆ ಸಿಕ್ಕಿದ್ದನ್ನು ನೋಡಿಕೊಂಡು ಹೋಗಬೇಕು. ಯಾರಿಗೇ ಆಗಲೀ ಜೀವನದಲ್ಲಿ ಏನು ಬೇಕು? ಪ್ರೀತಿ, ವಿಶ್ವಾಸ, ಸ್ನೇಹ ಮತ್ತು ಗೌರವ ಅಷ್ಟೇ. ಅಷ್ಟನ್ನೂ ಈ ಚಿತ್ರರಂಗ ಕೊಟ್ಟಿದೆ. ಯಾವತ್ತೂ ಅಷ್ಟೇ. ನಮ್ಮ ವಿಧಿ, ಹಣೆಬರಹ, ಯಶಸ್ಸು, ನಡವಳಿಕೆ, ಸಾಮರ್ಥ್ಯದ ಮೇಲೆ ಬದುಕು ರೂಪಿತವಾಗುತ್ತದೆಯೇ ಹೊರತು, ಯಾರೋ ಏನೋ ಮಾಡುವುದಕ್ಕೆ ಸಾಧ್ಯವಿಲ್ಲ.

    ಯಶಸ್ಸು, ಸೋಲು ಎಲ್ಲವನ್ನೂ ನೋಡಿದ್ದೇನೆ. ನಾನು ಬಿದ್ದಾಗ ಮೇಲೆ ನೋಡಲಿಲ್ಲ, ಎದ್ದಾಗ ಕೆಳಗೆ ನೋಡಲಿಲ್ಲ. ನೇರದೃಷ್ಟಿಯಲ್ಲಿ ನೋಡಿದೆ. ನನ್ನ ಜತೆಗಿದ್ದವರ ಜೀವನ ಹೇಗಿತ್ತೋ ಗೊತ್ತಿಲ್ಲ. ನನ್ನನ್ನಂತೂ ಬಹಳ ಚೆನ್ನಾಗಿ ನೋಡಿಕೊಂಡಿದ್ದಾರೆ, ನಡೆಸಿಕೊಂಡಿದ್ದಾರೆ. ನೆಗೆಟಿವ್ ಯೋಚನೆ ಬರದಂತೆ ಕಾಪಾಡಿದ್ದಾರೆ. ನಕಾರಾತ್ಮಕ ಚಿಂತನೆಗಳು ಬರಬಾರದು ಎಂದಲ್ಲ. ಅದು ಸಹಜ. ಆದರೆ, ಹೆಚ್ಚು ಅದರ ಬಗ್ಗೆಯೇ ಯೋಚಿಸಿದರೆ, ಕಳೆದುಹೋಗುತ್ತೇವೆ. ಬದುಕು ಮುಂದಕ್ಕೆ ಹೋಗುವುದಿಲ್ಲ. ಅಲ್ಲೇ ನಿಂತುಬಿಡುತ್ತದೆ ಮತ್ತು ಅಲ್ಲಿಂದ ಕೆಳಗೆ ಇಳಿಯುತ್ತದೆ.

    ನನ್ನ ಬದುಕಲ್ಲೂ ನೆಗೆಟಿವ್ ಆಗಿ ಯೋಚಿಸಿದವರು ಬಂದಿದ್ದಾರೆ. ಹಾಗೆಯೇ ಹೊರಟು ಹೋಗಿದ್ದಾರೆ. ಅವರನ್ನು ನಾನು ಕಳಿಸಿಲ್ಲ. ಅವರು ತಾವಾಗಿಯೇ ತಮಗೆ ತಪ್ಪಿನ ಅರಿವಾದಾಗ, ಮತ್ತೆ ಇವರ ಹತ್ತಿರ ಹೇಗೆ ಹೋಗುವುದು ಎಂಬ ಅಂಜಿಕೆಯಿಂದ ದೂರವಾಗಿದ್ದಾರೆ. ಬಹುಶಃ ಅವರು ನನ್ನ ಹತ್ತಿರ ಬಂದಿದ್ದರೆ, ನಾನಂತೂ ಖಂಡಿತ ದೂರ ಮಾಡುತ್ತಿರಲಿಲ್ಲ.

    ಕೋವಿಡ್ ಕಾಲದಲ್ಲಿ ಮನೆಯಲ್ಲೇ ಇದ್ದೆ. ಈ ಸಂದರ್ಭದಲ್ಲಿ ಸಾಕಷ್ಟು ಯೋಚಿಸಿದೆ. ಹಳೆಯ ದಿನಳನ್ನೆಲ್ಲ ಮೆಲುಕು ಹಾಕಿದೆ. ಈ ಸಂದರ್ಭದಲ್ಲಿ ರಾಜಣ್ಣ ಮಾತಾಡಿದ್ದು, ಉದಯ್ ಕುಮಾರ್, ಕಲ್ಯಾಣ್ ಕುಮಾರ್, ವಜ್ರಮುನಿ, ಕಲ್ಪನಾ, ಮಂಜುಳಾ ಮುಂತಾದವರು ಮಾತಾಡಿದ್ದು ನೆನಪಾಯಿತು. ಅವರವರ ಜೀವನದಲ್ಲಿ ನಡೆದ ಘಟನೆಗಳನ್ನು ಮೆಟ್ಟಿ ನಿಂತು ತಮ್ಮ ಜೀವನವನ್ನು ರೂಪಿಸಿಕೊಂಡಿದ್ದರ ಬಗ್ಗೆ ಹೇಳಿದ್ದರು. ಅವರೆಲ್ಲ ನನಗೇ ಯಾಕೆ ಹೇಳಿದರು? ತಮ್ಮ ಮನಸ್ಸಿನಲ್ಲಿ ಇರುವುದನ್ನು ಇವನಿಗೆ ಹೇಳಿದರೆ, ಆಚೆ ಹೋಗುವುದಿಲ್ಲ ಎಂಬ ಕಾರಣಕ್ಕೆ ಹೇಳಿರುತ್ತಾರೆ. ಅವರು ಇಟ್ಟ ನಂಬಿಕೆಯನ್ನು ಉಳಿಸಿಕೊಳ್ಳಬೇಕು. ಅದು ಬಹಳ ಮುಖ್ಯ.

    ನಾನು ಹುಟ್ಟಿದ ಕೆಲವೇ ತಿಂಗಳುಗಳಲ್ಲಿ ತಾಯಿಯನ್ನು ಕಳೆದುಕೊಂಡೆ. ಅಮ್ಮನ ಬದಲಾಗಿ ಅಪ್ಪ ಸಿಕ್ಕರು. ಸಕಾರಾತ್ಮಕ ಚಿಂತನೆಗಳನ್ನು ನನಗೆ ಗೊತ್ತಿಲ್ಲದೆಯೇ ಹೇಳಿಕೊಟ್ಟರು. ನಮ್ಮಣ್ಣ (ಸಿ.ಆರ್. ಸಿಂಹ), ಹೆಂಡತಿ, ಸ್ನೇಹಿತರು, ಗುರುಗಳಾದ ಪುಟ್ಟಣ್ಣ ಎಲ್ಲರೂ ಪಾಸಿಟಿವ್ ಆಗಿರಬೇಕು ಎಂದು ಕಲಿಸಿದರು. ಅದರಲ್ಲೂ ನನ್ನ ಹೆಂಡತಿಯ ಪಾತ್ರ ದೊಡ್ಡದು. ನಾನು ಕೆಲವು ಸಮಯ ಉತ್ತರ ಕರ್ನಾಟಕದ ನಾಟಕ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದೆ. ಈ ಸಂದರ್ಭದಲ್ಲಿ ಹೆಂಡತಿ ಗೀತಾ ಜತೆಗೆ ಬರುತ್ತಿದ್ದಳು. ಬೆಳಗಿನ ಜಾವ ನಾಟಕ ಮುಗಿಯುವವರೆಗೂ ಎದ್ದು ಕೂರುತಿದ್ದಳು. ನಾಟಕ ಮುಗಿದು, ನಾಲ್ಕು ಮಾತಾಡಬೇಕು ಮತ್ತು ಚಿತ್ರಗೀತೆ ಹಾಡಬೇಕು ಎಂಬ ಕೂಗು ಕೇಳಿ ಬಂದರೆ, ಜತೆಗೆ ಹಾಡುತ್ತಿದ್ದಳು. ಎಲ್ಲಕ್ಕಿಂತ ಹೆಚ್ಚಾಗಿ, ಏನೇ ಕಷ್ಟ ಬಂದರೂ, ‘ಹೆದರಬೇಡ, ನೀನು ಮಾಡುತ್ತೀಯ, ನಿನ್ನಿಂದ ಆಗುತ್ತದೆ …’ ಎಂದು ಧೈರ್ಯ ತುಂಬುತ್ತಿದ್ದಳು. ಇವರೆಲ್ಲರಿಂದ ಹಲವು ವಿಷಯ ಕಲಿತಿದ್ದೇನೆ. ಬದಲಾಗಬೇಕಾಗಿರುವುದು ನಾವು, ಪ್ರಪಂಚವಲ್ಲ ಎಂದು ಎಲ್ಲರೂ ಹೇಳಿಕೊಟ್ಟರು. ಇದನ್ನು ಅರ್ಥ ಮಾಡಿಕೊಂಡರೆ, ನಾವು ಸಂತೋಷವಾಗಿರಬಹುದು.

    ನಾನು ಯೋಚನೆ ಮಾಡಿದ್ದೇ ಸರಿ ಅಂತ ಯಾವತ್ತೂ ಹೇಳುವುದಿಲ್ಲ. ಬದುಕಲ್ಲಿ ನಾನು ಸಂತೋಷವಾಗಿದ್ದೇನಾ? ಖಂಡಿತ ಇದ್ದೇನೆ. ಸಂಪಾದನೆ ಏನು? ಸ್ನೇಹ, ಪ್ರೀತಿ, ವಿಶ್ವಾಸ, ಗೌರವ ಮಾತ್ರ. ನೆಮ್ಮದಿಯಾಗಿದ್ದೇನಾ? ನಿದ್ದೆ ಬರುತ್ತಾ ಎನ್ನುವುದು ಅಷ್ಟೇ ಮುಖ್ಯ. ನಾನು ಹೇಳೋದು ಇಷ್ಟೇ.

    ಎಲ್ಲ ಸಂದರ್ಭಗಳಲ್ಲೂ ತಕ್ಷಣ ಪಾಸಿಟಿವ್ ಭಾವನೆ ಬರದಿರಬಹುದು. ಏನೋ ಸಮಸ್ಯೆಯಾಗಿ, ಮನಸ್ಸಿಗೆ ನೋವಾಗಬಹುದು. ಸ್ವಲ್ಪ ಹೊತ್ತು ನೀವೇ ಕೂತು ಯೋಚಿಸಿದಾಗ, ನಿಮ್ಮದೂ ಅದರಲ್ಲಿ ಪಾತ್ರ ಇರುತ್ತದೆ ಎಂಬುದು ಅರಿವಿಗೆ ಬರುತ್ತದೆ. ಸೋಲಿನ ಹಿಂದೆ ನಿಮ್ಮದೂ ಕಾರಣವಿರಬಹುದು. ಅದನ್ನು ಅರ್ಥ ಮಾಡಿಕೊಂಡು, ಬದುಕನ್ನು ಸುಂದರ ಮಾಡಿಕೊಳ್ಳಿ. ಏಕಾಯ್ತು, ಹೇಗಾಯ್ತು, ಏನಾಯ್ತು ಅಂತ ಸದಾ ಯೋಚಿಸುತ್ತಿದ್ದರೆ, ಬದುಕು ಸಕಾರಾತ್ಮಕವಾಗಿರುತ್ತದೆ.

    ಮನಸ್ಸಿನ ಭಾವನೆಗಳನ್ನು ಹೇಗೆ ಬದಲಾಯಿಸಿಕೊಳ್ಳಬಹುದು ಎಂದು ಅರ್ಥ ಮಾಡಿಕೊಂಡರೆ ಸಂತೋಷವಾಗಿರುತ್ತೇವೆ.

    (ಲೇಖಕರು ಖ್ಯಾತ ನಟ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts