ನಾವು ಕಡಿಮೆ ಮಾಡಿದ್ದೀವಲ್ಲ ನಿಮ್ಮ ಸರ್ಕಾರಗಳನ್ನು ಕೇಳಿ ಅಂದ್ರು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​

nirmala sitharaman
Published on

ನವದೆಹಲಿ: ರಾಜ್ಯದ ಪಾಲಿನ ತೆರಿಗೆ ಕಡಿತಗೊಳಿಸಿ, ಇಂಧನ ದರ ಕಡಿಮೆ ಮಾಡದ ರಾಜ್ಯ ಸರ್ಕಾರಗಳನ್ನು ಮತ ನೀಡಿದ ಜನಸಾಮಾನ್ಯರು ಪ್ರಶ್ನಿಸಬೇಕೆಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಹೇಳಿದರು.

ಸೋಮವಾರ ರಾತ್ರಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ನಿರ್ಮಲಾ ಸೀತಾರಾಮನ್​, ಪೆಟ್ರೋಲ್​ ಮತ್ತು ಡೀಸೆಲ್​ ಮೇಲಿನ ಅಬಕಾರಿ ಸುಂಕವನ್ನು ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಕಡಿತಗೊಳಿಸಿದರೂ ಕೆಲವವು ರಾಜ್ಯಗಳೇಕೆ ಇನ್ನೂ ಮೌಲ್ಯವರ್ಧಿತ ತೆರಿಗೆ (ವ್ಯಾಟ್​)ಯನ್ನು ಕಡಿಮೆ ಮಾಡಿಲ್ಲ ಎಂದು ಪ್ರಶ್ನಿಸಿದರು.

ಈಗಾಗಲೇ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ತೆರಿಗೆ ಕಡಿತಗೊಳಿಸುವಂತೆ ಮನವಿ ಮಾಡಿದೆ ಎಂದು ಸ್ಪಷ್ಟನೆ ನೀಡಿದರು. ಜಿಎಸ್​ಟಿ ವ್ಯಾಪ್ತಿಗೆ ಇಂಧನ ದರ ಸೇರ್ಪಡೆಗೆ ಜಿಎಸ್​ಟಿ ಕೌನ್ಸಿಲ್ ದರವನ್ನು ನಿಗದಿಪಡಿಸುವವರೆಗೆ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಸರಕು ಮತ್ತು ಸೇವಾ ತೆರಿಗೆಯಲ್ಲಿ (GST) ಸೇರಿಸಲಾಗುವುದಿಲ್ಲ ಎಂದು ಇದೇ ಸಂದರ್ಭದಲ್ಲಿ ನಿರ್ಮಲಾ ಸೀತಾರಾಮನ್​ ಹೇಳಿದರು.

ಕೋವಿಡ್​ನಿಂದ ಕುಸಿದಿರುವ ಆರ್ಥಿಕತೆಗೆ ಬಲವಾಗಿ ಚೇತರಿಕೆ ನೀಡುವ ನಿಟ್ಟಿನಲ್ಲಿ ದೇಶದಲ್ಲಿ ಹೂಡಿಕೆಯ ವಾತಾವರಣವನ್ನು ಹೆಚ್ಚಿಸುವ ದೃಷ್ಟಿಯಿಂದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಹಣಕಾಸು ಮಂತ್ರಿಗಳೊಂದಿಗೆ ನಡೆದ ಸಂವಾದದ ಬಳಿಕ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು.

ನಿರಂತರ ಇಂಧನ ದರ ಏರಿಕೆಯಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿ ದೇಶಾದ್ಯಂತ ತೀವ್ರ ಆಕ್ರೋಶ ಕೇಳಿಬಂದ ಬೆನ್ನಲ್ಲೇ ಕೇಂದ್ರ ಸರ್ಕಾರ ಪೆಟ್ರೋಲ್​ ಮೇಲೆ 5 ರೂ. ಹಾಗೂ ಡೀಸೆಲ್​ ಮೇಲೆ 10 ರೂ. ಅಬಕಾರಿ ಸುಂಕವನ್ನು ಇಳಿಸುವ ಕುರಿತ ನವೆಂಬರ್​ 3ರಂದು ನಿರ್ಧಾರ ಮಾಡಿತು. ಇದಾದ ಕೆಲವೇ ನಿಮಿಷಗಳಲ್ಲಿ ಕರ್ನಾಟಕ ಸರ್ಕಾರ ಕೂಡ ಪೆಟ್ರೊಲ್​-ಡೀಸೆಲ್​ ಬೆಲೆ ಇಳಿಸಲಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅದರಂತೆ ರಾಜ್ಯದಲ್ಲಿ ಪೆಟ್ರೋಲ್​-ಡೀಸೆಲ್​ ಮೇಲೆ ತಲಾ 7 ರೂ. ತೆರಿಗೆ ಇಳಿದಿದೆ.

ಈ ಹಿಂದೆ ಅಬಕಾರಿ ಸುಂಕವನ್ನು ಗಣನೀಯವಾಗಿ ಹೆಚ್ಚಿಸಿದ ನಂತರ ಮೋದಿ ಸರ್ಕಾರವು ಸ್ವಲ್ಪಮಟ್ಟಿಗೆ ಕಡಿಮೆ ಮಾಡಿದೆ ಎಂದು ವಿರೋಧ ಪಕ್ಷಗಳು ವಾದಿಸಿವೆ. ರಾಜ್ಯ ಸರ್ಕಾರಗಳು ವ್ಯಾಟ್ ಅನ್ನು ಹೆಚ್ಚಿಸಿಲ್ಲ ಆದ್ದರಿಂದ ಅದನ್ನು ಕಡಿಮೆ ಮಾಡುವ ಪ್ರಶ್ನೆಯೇ ಇಲ್ಲ ಮತ್ತು ಕೇಂದ್ರವು ತನ್ನ ಅಬಕಾರಿ ಸುಂಕ ಹೆಚ್ಚಳವನ್ನು ಹಿಂತೆಗೆದುಕೊಂಡರೆ ಬೆಲೆಗಳು ಸ್ವಯಂಚಾಲಿತವಾಗಿ ಇಳಿಯುತ್ತವೆ ಎಂದು ವಿರೋಧ ಪಕ್ಷಗಳು ಹೇಳಿದ್ದವು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net