

ಬೆಂಗಳೂರು: ಈಗಾಗಲೇ ರಾಜ್ಯ ಸರ್ಕಾರ ಆಗಸ್ಟ್ 27ರಂದು ನಿಗದಿಪಡಿಸಿರುವ ಕೆಎಎಸ್ ಪೂರ್ವಭಾವಿ ಪರೀಕ್ಷೆಯನ್ನು ಮುಂದೂಡುವಂತೆ ವಿದ್ಯಾರ್ಥಿಗಳ ಸಂಘ ಪ್ರತಿಭಟನೆ ನಡೆಸುತ್ತಿದ್ದು, ಎಕ್ಸಾಂ ಮುಂದೂಡಿ ಅಥವಾ ದಯಾಮರಣಕ್ಕೆ ಅವಕಾಶ ಕೊಡಿ ಎಂದು ಆಕಾಂಕ್ಷಿಯೊಬ್ಬರು ಹೇಳಿದ್ದಾರೆ. ಆದ್ರೆ, ಸದ್ಯ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ತಿಳಿಸಿದೆ. ಇನ್ನು ಈ ವಿಷಯಕ್ಕೆ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಆರ್. ಅಶೋಕ, ಸರಕಾರದ ವಿರುದ್ಧ ತೀವ್ರ ಕಿಡಿಕಾರಿದ್ದಾರೆ.
"ಕೆಎಎಸ್ ಪೂರ್ವಭಾವಿ ಪರೀಕ್ಷೆಯನ್ನು ಮುಂದೂಡುವಂತೆ ವಿದ್ಯಾರ್ಥಿಗಳು ನಡೆಸುತ್ತಿರುವ ಹೋರಾಟವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದು, ಶಾಂತಿಯುತ ಪ್ರತಿಭಟನೆ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಬಂಧಿಸುವ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದೆ" ಎಂದರು.
"ಸರ್ಕಾರದ ಪ್ರತಿನಿಧಿಗಳು ಈ ಕೂಡಲೇ ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಪ್ರತಿಭಟನೆ ನಿಲ್ಲಿಸುವಂತೆ ಮನವಿ ಮನವೊಲಿಸಬೇಕು. ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಿ ವಿಶ್ವಾಸ ತುಂಬಬೇಕು" ಎಂದರು.