ಥೂ, ಛೀ ಅನ್ನಿಸಿಕೊಳ್ಳುವ ಮಟ್ಟಕ್ಕೆ ಇಳಿದ ಸರ್ಕಾರ: ಆರ್​. ಅಶೋಕ ವ್ಯಂಗ್ಯ

WhatsApp Image 2024-03-03 at 5.41.40 PM
Published on

ಬೆಂಗಳೂರು: "ಸಮಾಜಘಾತುಕ ಶಕ್ತಿಗಳು ಹಾಗೂ ಉಗ್ರಗಾಮಿ ಸಂಘಟನೆಗಳು ನಡೆಸುತ್ತಿರುವ ದುಷ್ಕೃತ್ಯಗಳ ಬಗ್ಗೆ ರಾಜ್ಯದ ಕಾಂಗ್ರೆಸ್‌ ಸರಕಾರ ಸಹಾನುಭೂತಿ ಮನೋಭಾವ ಪ್ರದರ್ಶಿಸುತ್ತಿರುವುದು ರಾಜ್ಯದ ಪಾಲಿಗೆ ಆಘಾತಕಾರಿ ಬೆಳವಣಿಗೆಯಾಗಿದೆ. ಲೋಕಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು, ವೋಟ್‌ ಬ್ಯಾಂಕ್‌ ರಾಜಕಾರಣಕ್ಕಾಗಿ ದೇಶದ್ರೋಹ ಕೆಲಸ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಮುಂದುವರೆಯುವ ನೈತಿಕತೆ ಕಳೆದುಕೊಂಡಿದ್ದು, ರಾಜ್ಯ ಸರಕಾರವನ್ನು ವಜಾ ಮಾಡುವಂತೆ ರಾಜ್ಯಪಾಲರಿಗೂ ಮನವಿ ಸಲ್ಲಿಸಲಾಗಿದೆ" ಎಂದು ವಿಪಕ್ಷ ನಾಯಕ ಆರ್​. ಅಶೋಕ ಹೇಳಿದರು.

"ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಮತ್ತು ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟ ಪ್ರಕರಣಗಳಲ್ಲಿ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿ ಕಳವಳಕಾರಿಯಾಗಿದೆ. ದೇಶ ವಿದ್ರೋಹಿ ಶಕ್ತಿಗಳನ್ನೇ ಸಮರ್ಥನೆ ಮಾಡುವ, ದುಷ್ಕೃತ್ಯಗಳನ್ನು ಮುಚ್ಚಿಹಾಕುವ ಷಡ್ಯಂತ್ರ ನಡೆಸುತ್ತಿರುವ ಕಾಂಗ್ರೆಸ್ ಇಂತಹ ಘಟನೆಗಳಲ್ಲೂ ಕೀಳು ಮನೋಭಾವ ಪ್ರದರ್ಶಿಸುತ್ತಿರುವುದು ರಾಜ್ಯದ ಜನತೆಯಲ್ಲಿ ಆಘಾತವುಂಟು ಮಾಡಿದೆ" ಎಂದು ಹೇಳಿದರು.

"ರಾಜ್ಯದ ಏಳೂವರೆ ಕೋಟಿ ಕನ್ನಡಿಗರ ಅಸ್ಮಿತೆಯಂತಿರುವ ವಿಧಾನಸೌಧದಲ್ಲಿ ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ ಕೂಗಿದ ಘಟನೆ ನಡೆದು ಒಂದು ವಾರ ಆಗುತ್ತಾ ಬಂತು ಆದರೂ ಇದುವರೆಗೂ ಒಬ್ಬ ಆರೋಪಿಯನ್ನೂ ಬಂಧಿಸಿಲ್ಲ. 25 ಮಂದಿ ವಿಧಾನ ಸೌಧ ಪ್ರವೇಶಕ್ಕೆ ಪಾಸ್ ಪಡೆದಿದ್ದರೂ ನೂರಕ್ಕೂ ಹೆಚ್ಚು ಮಂದಿ ಒಳ ಪ್ರವೇಶಿಸಿದ್ದರು. ಇದಕ್ಕೆ ಅವಕಾಶ ನೀಡಿದ್ದು ಯಾರು? ಪೊಲೀಸರು ಇವರಿಗೆ ಅವಕಾಶ ಮಾಡಿಕೊಟ್ಟಿದ್ದು ಹೇಗೆ? ಸ್ಥಳದಲ್ಲಿ ಹಿರಿಯ ಅಧಿಕಾರಿ ಆದಿಯಾಗಿ ಇದ್ದ ಅನೇಕ ಪೊಲೀಸರು ಪಾಕ್‌ ಪರ ಘೋಷಣೆ ಕೂಗಿದಾಗ ಮೌನವಾಗಿದ್ದು ಅವರಿಗೆ ಹೊರ ಹೋಗಲು ಅವಕಾಶ ನೀಡಿದ್ದು ಯಾಕೆ?" ಎಂದರು.

"ವಿಧಾನಸೌಧದಲ್ಲಿರುವ ಸಿಸಿಟಿವಿ ಮತ್ತು ಮಾಧ್ಯಮಗಳ ಬಳಿ ಇಡೀ ಘಟನೆಯ ವಿಡಿಯೋ ಚಿತ್ರೀಕರಣ ಇದ್ದರೂ ಆರೋಪಿಗಳನ್ನು ಆರು ದಿನ ಆದರೂ ಬಂಧಿಸದೆ ಇರುವುದಕ್ಕೆ ಕಾರಣ ಏನು? ಈಗಾಗಲೇ ಎಫ್‌ಎಸ್‌ಎಲ್‌ ನವರು ಪೊಲೀಸರು ನೀಡಿದ್ದ ವಿಡಿಯೋದಲ್ಲಿ ಪಾಕ್‌ ಪರ ಘೋಷಣೆ ಕೂಗಿರುವುದು ಸತ್ಯ ಎಂದು ವರದಿ ನೀಡಿದ್ದಾರೆ. ಇದನ್ನು ಕೆಲ ಅಧಿಕಾರಿಗಳು ನನಗೂ ಹೇಳಿದ್ದಾರೆ ಮತ್ತು ಮಾಧ್ಯಮಗಳು ಅದನ್ನು ವರದಿ ಮಾಡಿವೆ. ಆದರೂ ಇನ್ನೂ ವರದಿ ಕೈ ಸೇರಿಲ್ಲ ಎಂದು ಸತ್ಯವನ್ನು ಮರೆ ಮಾಚುವ ಕೆಲಸ ಮಾಡಲಾಗುತ್ತಿದೆ. ಇದುವರೆಗೆ ಕೇವಲ ಏಳು ಮಂದಿಯನ್ನು ಕರೆದು ವಿಚಾರಣೆ ನಡೆಸುವ ಶಾಸ್ತ್ರ ಮಾಡಿ ತಿಪ್ಪೇ ಸಾರಿಸಲಾಗಿದೆ. ಎಫ್‌ಎಸ್‌ಎಲ್‌ ವರದಿ ಬಿಡುಗಡೆಗೆ ಅಡ್ಡಿ ಮಾಡುತ್ತಿರುವ ಕಾಣದ 'ಕೈ'ಗಳು ಯಾವುದು?" ಎಂದು ಪ್ರಶ್ನಿಸಿದರು.

"ಈ ಘಟನೆಯ ಪ್ರತಿ ಹಂತದಲ್ಲೂ ಸರಕಾರದ ನಡೆ ಅನುಮಾನಾಸ್ಪದವಾಗಿದೆ. ಎಫ್‌ಐಆರ್‌ನಲ್ಲೂ ಐಪಿಸಿ 505 ಮತ್ತು 153 ಸೆಕ್ಷನ್‌ಗಳನ್ನು ಹಾಕಲಾಗಿದೆ. ವಾಸ್ತವವಾಗಿ ಐಪಿಸಿ ಕಲಂ 124 ಎ ಅನ್ವಯ ದೇಶದ್ರೋಹದಡಿ ಪ್ರಕರಣ ದಾಖಲಿಸಬೇಕಾಗಿತ್ತು. ಆ ಕೆಲಸ ಮಾಡದೆ ತಪ್ಪಿತಸ್ಥರು ಸುಲಭವಾಗಿ ಪಾರಾಗುವ ಮಾರ್ಗವನ್ನು ಸರಕಾರವೇ ತೋರಿಸಿಕೊಟ್ಟಿದೆ" ಎಂದರು.

"ಈ ಘಟನೆಗೆ ಸಂಬಂಧಿಸಿದಂತೆ ಸಿಎಂ ಆದಿಯಾಗಿ ಒಬ್ಬೊಬ್ಬ ಸಚಿವರು ಒಂದೊಂದು ರೀತಿ ಹೇಳಿಕೆ ನೀಡುತ್ತಿದ್ದಾರೆ. ಇವರ ನಡುವೆಯೇ ಸಮನ್ವಯ ಇಲ್ಲ. ಇದು ಮಾಧ್ಯಮಗಳ ಸೃಷ್ಟಿ ಎಂದು ಪ್ರಿಯಾಂಕ ಖರ್ಗೆ ಹೇಳಿದರೆ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರು ಆ ರೀತಿ ಘೋಷಣೆಯನ್ನೇ ಕೂಗಿಲ್ಲ ಎಂದು ತನಿಖೆಗೆ ಮೊದಲೇ ತೀರ್ಪು ನೀಡಿದ್ದಾರೆ. ಇವರು ವರದಿ ಬಹಿರಂಗಪಡಿಸಲು ತಡೆಯುತ್ತಿರುವ ಶಕ್ತಿಗಳು ಯಾವುದು? ಇನ್ನೇಷ್ಟು ದಿನ ಈ ರೀತಿ ಮುಚ್ಚಿಟ್ಟು ನಾಟಕ ಆಡುತ್ತಾರೆ?" ಎಂದರು.

"ರಾಮೇಶ್ವರಂ ಕೆಫೆ ಕೃತ್ಯವು ಮಂಗಳೂರಿನ ಕುಕ್ಕರ್‌ಬಾಂಬ್‌ ಕೃತ್ಯಕ್ಕೆ ಸಾಮ್ಯತೆ ಹೊಂದಿದೆ. ಇದು ಭಯೋತ್ಪಾದಕರ ಕೃತ್ಯ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ಮತ್ತು ಎನ್ ಐಎ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಆದರೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರು ಸಿಲೆಂಡರ್‌ ಅಥವಾ ಇನ್ಯಾವುದೇ ಕಾರಣದಿಂದ ಸ್ಫೋಟ ಸಂಭವಿಸಿದೆ ಎಂಬುದನ್ನು ನೋಡಬೇಕಿದೆ ಅನ್ನುತ್ತಾರೆ, ಬ್ಯುಸಿನೆಸ್‌ ರೈವಲರಿ ಕೂಡ ಇರಬಹುದು ಅನ್ನುತ್ತಾರೆ. ಇದು ಭಯೋತ್ಪಾದನೆ ಕೃತ್ಯ ಎಂಬುದನ್ನು ಒಪ್ಪಿಕೊಳ್ಳಲು ಸಿದ್ಧರಿದ್ದಂತಿಲ್ಲ. ಎನ್‌ಐಎ, ಪೊಲೀಸ್‌ ಮತ್ತು ತಜ್ಞರ ಅಭಿಪ್ರಾಯಕ್ಕೆ ತದ್ವಿರುದ್ಧ ಅಭಿಪ್ರಾಯ ನೀಡುತ್ತಿರುವ ಹಿಂದಿನ ಕಾರಣ ಓಲೈಕೆ ರಾಜಕಾರಣವೇ ಹೊರತು ಇನ್ನೇನು ಇಲ್ಲ" ಎಂದು ಹೇಳಿದರು.

"ರಾಜ್ಯದಲ್ಲಿ ಅಲ್ಪಸಂಖ್ಯಾತರ ಮನಸ್ಸನ್ನು ಕಲ್ಮಶಗೊಳಿಸಲಾಗಿದೆ. ನೀವು ಏನೇ ಮಾಡಿದರೂ ರಕ್ಷಿಸುತ್ತೇವೆ, ನಿಮ್ಮ ಜತೆ ನಾವಿದ್ದೇವೆ. ಬಹು ಸಂಖ್ಯಾತರನ್ನು ಬಗ್ಗುಬಡಿಯುತ್ತೇವೆ ಎಂಬ ಕಾಂಗ್ರೆಸ್‌ ಮನಸ್ಥಿತಿಯನ್ನು ಅಲ್ಪಸಂಖ್ಯಾತರಲ್ಲಿ ತುಂಬಿಸಲಾಗಿದೆ. ಈ ಕಾರಣದಿಂದಲೇ ಡಿಜೆ ಹಳ್ಳಿ, ಕೆಜೆ ಹಳ್ಳಿ ಘಟನೆಗಳು ನಡೆದವು. ಮೈಸೂರಿನಲ್ಲಿ ಕೆಎಫ್‌ಡಿ ಕಾರ್ಯಕರ್ತ ಶಾಸಕ ತನ್ವಿರ್‌ ಸೇಠ್‌ ಅವರನ್ನೇ ಹತ್ಯೆ ಮಾಡುವ ಯತ್ನ ನಡೆಸಿದೆ" ಎಂದರು.

"ಬಿಜೆಪಿ ಸರ್ಕಾರದ ಅವಧಿಯಲ್ಲಿ ಇಲಿಯಂತೆ ಬಾಲ ಮುದರಿ ಬಿಲ ಸೇರದ್ದವರು ಇಂದು ಹುಲಿಗಳಂತೆ ಬಿಲದಿಂದ ಆಚೆ ಬಂದು ದುಷ್ಕೃತ್ಯ ನಡೆಸುತ್ತಿದ್ದಾರೆ. ಕಾಂಗ್ರೆಸ್‌ ಸರಕಾರದ ಮನಸ್ಥಿತಿ ಇದಕ್ಕೆ ಕಾರಣ. ಉಗ್ರರು ಮತ್ತು ದೇಶದ್ರೋಹಿಗಳ ಪರ ಸಹಾನುಭೂತಿ ಹೊಂದಿರುವ ಕಾಂಗ್ರೆಸ್‌ ಮನಸ್ಥಿತಿ ದೇಶಕ್ಕೆ ಗಂಡಾಂತರ ತರಲಿದೆ. ಕೇವಲ 9 ತಿಂಗಳಲ್ಲೇ ಸರ್ಕಾರ ಥೂ ಛೀ ಅನ್ನಿಸಿಕೊಳ್ಳುವ ಮಟ್ಟಕ್ಕೆ ಇಳಿದಿದೆ. ರಾಜ್ಯದ ಇತಿಹಾಸದಲ್ಲೇ ಇಂತಹ ದರಿದ್ರ, ದೇಶದ್ರೋಹಿ ಸರ್ಕಾರವನ್ನ ಜನತೆ ಕಂಡಿರಲಿಲ್ಲ" ಎಂದು ಹೇಳಿದರು.

"ಸರಕಾರ ಸತ್ತಂತಿದೆ. ಈ ರೀತಿ ಆಡಳಿತ ನಡೆಸುವುದಕ್ಕಿಂತ ರಾಜೀನಾಮೆ ನೀಡಿ ಮನೆಗೆ ಹೋಗುವುದು ಎಷ್ಟೋ ಮೇಲು. ಬ್ರಾಂಡ್‌ ಬೆಂಗಳೂರನ್ನು ಬಾಂಬ್‌ ಬೆಂಗಳೂರು ಮಾಡಬೇಡಿ ಅನ್ನುವ ಹೇಳಿಕೆಗೆ ಡಿಕೆಶಿ ಕಾಮಾನ್‌ಸೆನ್ಸ್‌ ಇಲ್ಲ ಎಂದು ಪ್ರತಿಕ್ರಿಯೆ ನೀಡಿರುವುದನ್ನು ಗಮನಿಸಿದ್ದೇನೆ, ಬಾಂಬ್‌ ಹಾಕಿರುವುದು ಬೆಂಗಳೂರಿನಲ್ಲೋ, ಮುಂಬಾಯಿಯಲ್ಲೊ? ಮೊದಲು ಶಾಂತಿ, ಕಾನೂನು, ಸುವ್ಯವಸ್ಥೆ ಸಮರ್ಪಕವಾಗಿ ನಿರ್ವಹಿಸಿ, ನಂತರ ಬ್ರಾಂಡ್‌ ಬೆಂಗಳೂರು ಬಗ್ಗೆ ಮಾತನಾಡಬೇಕು. ಆದರೆ ಸಾಮಾನ್ಯ ಜನರಿಗೆ ಈ ಕಾಂಗ್ರೆಸ್ ಸರ್ಕಾರ ಯಾವ ಬ್ರ್ಯಾಂಡ್ ಬೆಂಗಳೂರು ನಿರ್ಮಿಸಲಿದೆ?" ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net