

ಬೆಂಗಳೂರು: ಮುಖ್ಯಮಂತ್ರಿ ತವರು ಜಿಲ್ಲೆಯಲ್ಲೇ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದ್ದು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ಕೋಟ್ಯಂತರ ರೂ. ಹಗರಣ ನಡೆದಿರುವುದು ಇದೀಗ ಬೆಳಕಿಗೆ ಬಂದಿದೆ. 50:50ರ ಅನುಪಾತ, ಪ್ರೋತ್ಸಾಹದಾಯಕ ನಿವೇಶನ (ಇನ್ಸೆಂಟಿವ್) ಬದಲಿ ನಿವೇಶನ ಹಂಚಿಕೆಯಲ್ಲಿ ಭಾರಿ ಗೋಲ್ಮಾಲ್ ನಡೆದಿದ್ದು, ಒಟ್ಟಾರೆ 4,500 ರಿಂದ 5000 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಇದರಿಂದ ಮುಡಾಕ್ಕೆ ಅಂದಾಜು 4000 ಕೋಟಿ ರೂ. ನಷ್ಟ ಉಂಟಾಗಿರುವ ಆರೋಪ ಕೇಳಿ ಬಂದಿದೆ. ಈ ಕುರಿತು ವಿಪಕ್ಷ ನಾಯಕ ಆರ್. ಅಶೋಕ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ರಾಜ್ಯದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಹಗರಣವಿದು ಎಂದು ಗುಡುಗಿದ್ದಾರೆ.
"ಕರ್ನಾಟಕದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಹಗರಣವಾದ 4,000 ಕೋಟಿ ರೂ. ಮೌಲ್ಯದ ಮುಡಾ ಹಗರಣದಲ್ಲಿ ದಿನಕ್ಕೊಂದು ಕರ್ಮಕಾಂಡ ಬಯಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಗೆ ಮಂಜೂರಾಗಿರುವ 35 ಕೋಟಿ ರೂಪಾಯಿ ಮೌಲ್ಯದ 14 ನಿವೇಶನಗಳಿಗೆ ಸಂಬಂಧಪಟ್ಟ ಕಡತಗಳನ್ನು ತಿರುಚುವ ಉದ್ದೇಶದಿಂದ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ಕಡತಗಳನ್ನು ಬೆಂಗಳೂರಿಗೆ ತಂದಿರುವ ಗುಮಾನಿ ಇದೆ" ಎಂದಿದ್ದಾರೆ.
"ಈ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರ ಈ ಕೂಡಲೇ ಸಂಬಂಧಪಟ್ಟ ಕಡತಗಳನ್ನು ಬಹಿರಂಗಪಡಿಸಿ, ಸಾರ್ವಜನಿಕರ ಮುಂದಿಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ನಾನು ಈ ಮೂಲಕ ಒತ್ತಾಯಿಸುತ್ತೇನೆ" ಎಂದು ತಿಳಿಸಿದ್ದಾರೆ.