ಅಭಿವೃದ್ಧಿ ಯೋಜನೆ ಪಟ್ಟಿ ಸಿದ್ದ: ಭಾರತೀಯ ವೈದ್ಯಕೀಯ ಸಂಘದ ಮಾಜಿ ಅಧ್ಯಕ್ಷ ರವೀಂದ್ರ ಮಾಹಿತಿ

Progressive organization meeting Mandya
Published on

ಮಂಡ್ಯ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಜು.5ರಂದು ನಗರದಲ್ಲಿ ಜನತಾದರ್ಶನ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಯೋಜನೆ ಪಟ್ಟಿ ಸಿದ್ದಪಡಿಸಲಾಗಿದೆ. ಕೃಷಿ ಆಧಾರಿತ ಕೈಗಾರಿಕೆ, ಉದ್ಯೋಗ ಸೃಷ್ಟಿ ಬಗ್ಗೆ ಸಚಿವರ ಗಮನ ಸೆಳೆಯಲಾಗುವುದು ಎಂದು ಭಾರತೀಯ ವೈದ್ಯಕೀಯ ಸಂಘದ ಮಾಜಿ ಅಧ್ಯಕ್ಷ ಡಾ.ಎಚ್.ಎನ್.ರವೀಂದ್ರ ಹೇಳಿದರು.

ಜನತಾದರ್ಶನ ಹಿನ್ನೆಲೆಯಲ್ಲಿ ನಗರದ ಪ್ರವಾಸಿ ಮಂದಿರದಲ್ಲಿ ಪ್ರಗತಿಪರ ಸಂಘಟನೆಗಳೊಂದಿಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಧಿಕಾರದ ರಾಜಕಾರಣ ಮಾಡಿಕೊಂಡು ಜಿಲ್ಲೆಯ ಅಭಿವೃದ್ಧಿ ಕುಂಠಿತವಾಗಿದೆ. ನಾಲೆ ಆಧುನೀಕರಣದ ಕಾಮಗಾರಿ ಹೆಸರಲ್ಲಿ ನಾಲೆಗೆ ನೀರು ಹರಿಸಿಲ್ಲ. ಇದಲ್ಲದೆ ಕೃಷಿ ಚಟುವಟಿಕೆಗೆ ಹೆಚ್ಚುವರಿಯಾಗಿ 4 ಗಂಟೆ ತ್ರಿಫೇಸ್ ವಿದ್ಯುತ್ ಕೊಡಬೇಕು. ಇದನ್ನ ಬಿಟ್ಟು ಏರ್‌ಪೋರ್ಟ್ ಬಗ್ಗೆ ಚರ್ಚೆ ಮಾಡುತ್ತಾರೆ ಎಂದು ಕಾಂಗ್ರೆಸ್ ನಾಯಕರನ್ನು ಟೀಕಿಸಿದರು.

ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಕುಮಾರಸ್ವಾಮಿ ಅವರ ಗಮನಕ್ಕೆ ತರುತ್ತೇವೆ. ಜಿಲ್ಲೆಯ ಜನರಿಗೆ ಉದ್ಯೋಗ ಸೃಷ್ಟಿ ಮಾಡಬೇಕು. ಭಾರೀ ಕೈಗಾರಿಕೆ, ಇಎಸ್‌ಐ ಆಸ್ಪತ್ರೆ ತರಬೇಕು. ಫ್ಯಾಕ್ಟರಿ ತರಬೇಕು. ಈ ಬಗ್ಗೆ ವಿಶೇಷ ಕಾಳಜಿ ಕುಮಾರಸ್ವಾಮಿ ಅವರಿಗಿದೆ. ವಿಶೇಷವಾಗಿ ಅಭಿವೃದ್ಧಿ ಮಾಡುತ್ತಾರೆ. ಜಿಲ್ಲೆಯ ಮೇಲೆ ಪ್ರೀತಿ ಇದ್ದು, ದೊಡ್ಡ ಕೊಡುಗೆ ನೀಡುತ್ತಾರೆ ಎನ್ನುವ ವಿಶ್ವಾಸ ಇದೆ ಎಂದರು.

ಕೆಆರ್‌ಎಸ್ ವ್ಯಾಪ್ತಿಯಲ್ಲಿ ಟ್ರಯಲ್ ಬ್ಲಾಸ್ಟ್ ನಡೆಯುವಾಗಲೇ ಡ್ಯಾಂ ಒಡೆದು ಹೋದರೆ ಏನು ಮಾಡುವುದು. ಡ್ಯಾಂನ 20 ಕಿ.ಮೀ ವ್ಯಾಪ್ತಿ ಗಣಿಗಾರಿಕೆ ಮಾಡಬಾರದು ಎಂಬುದು ಜಿಲ್ಲೆಯ ಜನರ ಅಭಿಪ್ರಾಯ. ಟ್ರಯಲ್ ಬ್ಲಾಸ್ಟ್ ಮಾಡುವ ಅವಶ್ಯಕತೆಯೂ ಇಲ್ಲ. ಬಾಂಬ್‌ನ ತೀವ್ರತೆ ಬಗ್ಗೆ ಗೊತ್ತಿದೆ. ಆದರೂ ಸಹ ಟ್ರಯಲ್ ಬ್ಲಾಸ್ಟ್ ಎಂಬುದು ಸರಿಯಲ್ಲ. ಬೇರೆ ಕಡೆ ಬೇಕಾದರೆ ಪ್ರಯೋಗ ಮಾಡಲಿ. ಒಂದು ವೇಳೆ ಮಾಡಿದರೆ ನಾವು ಪ್ರತಿಭಟನೆ ಮಾಡುತ್ತೇವೆ. ಜತೆಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಗಮನಕ್ಕೂ ತರುತ್ತೇನೆಂದು ಹೇಳಿದರು.

ವಿವಿಧ ಸಂಘಟನೆಗಳ ಶಂಭೂನಹಳ್ಳಿ ಕೃಷ್ಣ, ಎಂ.ಬಿ.ನಾಗಣ್ಣಗೌಡ, ಪ್ರೊ.ಜಿ.ಟಿ.ವೀರಪ್ಪ, ಮಹೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net