ಆಳವಾದ ಕಮರಿಗೆ ಬಿದ್ದ ಬಸ್​: ಸ್ಥಳದಲ್ಲೇ 9 ಮಂದಿ ದುರ್ಮರಣ, 8 ಪ್ರಯಾಣಿಕರಿಗೆ ಗಂಭೀರ ಗಾಯ

Bus Accident
Published on

ಶ್ರೀನಗರ: ಚಾಲಕನ ನಿಯಂತ್ರಣ ತಪ್ಪಿ ಆಳವಾದ ಕಮರಿಗೆ ಬಸ್​ ಉರುಳಿಬಿದ್ದ ಪರಿಣಾಮ ಸ್ಥಳದಲ್ಲೇ 9 ಮಂದಿ ದುರಂತ ಸಾವಿಗೀಡಾಗಿ, 8 ಮಂದಿ ಗಂಭೀರ ಗಾಯಗೊಂಡಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಪೂಂಚ್​ ಜಿಲ್ಲೆಯಲ್ಲಿ ಇಂದು (ಸೆ.14) ನಡೆದಿದೆ.

ಬಸ್ ಸಾವ್ಜಿಯಾನ್​ನಿಂದ ಮಂಡಿಗೆ ತೆರಳುವಾಗ ಬರೇರಿ ನಲ್ಹಾ ಸಮೀಪದ ಕಮರಿಗೆ ಉರುಳಿಬಿದ್ದು ದುರ್ಘಟನೆ ಸಂಭವಿಸಿದೆ. ಘಟನೆಯ ಬೆನ್ನಲ್ಲೇ ಸ್ಥಳೀಯರ ಸಹಾಯದಿಂದ ಪೊಲೀಸರು ಮತ್ತು ಸೇನಾ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದು, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ.

ಮಾಹಿತಿ ತಿಳಿದ ಕೂಡಲೇ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಟ್ವೀಟ್‌ ಮಾಡಿದ್ದು, ಅಪಘಾತದಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿದ್ದಾರೆ. ಪೂಂಚ್​ನ ಸಾವ್ಜಿಯಾನ್‌ನಲ್ಲಿ ಸಂಭವಿಸಿದ ರಸ್ತೆ ಅಪಘಾತದಿಂದ ಪ್ರಯಾಣಿಕರು ಮೃತಪಟ್ಟಿದ್ದಾರೆಂಬ ಸುದ್ದಿ ಕೇಳಿ ತೀವ್ರ ದುಃಖವಾಗಿದೆ. ದುಃಖತಪ್ತ ಕುಟುಂಬಗಳಿಗೆ ಸಾಂತ್ವಾನ ಹೇಳಲು ಬಯಸುತ್ತೇನೆ. ಗಾಯಾಳುಗಳ ಶೀಘ್ರ ಚೇತರಿಕೆಗೆ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರವನ್ನು ಘೋಷಣೆ ಮಾಡಲಾಗಿದೆ. ಗಾಯಾಳುಗಳಿಗೆ ಉತ್ತಮ ನೆರವು ನೀಡುವಂತೆ ಪೊಲೀಸ್ ಮತ್ತು ಅಧಿಕಾರಿಗಳಿಗೆ ಲೆಫ್ಟಿನೆಂಟ್ ಗವರ್ನರ್ ನಿರ್ದೇಶನ ನೀಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net