

ಅಹಮದಾಬಾದ್: ಮದುವೆಯಾದ 8 ವರ್ಷದ ಬಳಿಕ ಗುಜರಾತಿನ ವಡೋದರಾ ಮೂಲದ 40 ವರ್ಷದ ವಿವಾಹಿತೆಗೆ ತನ್ನ ಪತಿ ಈ ಹಿಂದೆ ಮಹಿಳೆಯಾಗಿದ್ದ ಮತ್ತು ಲಿಂಗ ಪುನರ್ವಿತರಣೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಶಾಕಿಂಗ್ ಸಂಗತಿ ಬಯಲಾಗಿದೆ.
ಗೋತ್ರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಾಥಮಿಕ ಮಾಹಿತಿ ವರದಿ (ಎಫ್ಐಆರ್) ಪ್ರಕಾರ ಶೀತಲ್ ಎಂಬಾಕೆ, ವಿರಾಜ್ ವರ್ಧನ್ (ಈ ಹಿಂದೆ ವಿಜಯತಾ) ವಿರುದ್ಧ ಅಸ್ವಾಭಾವಿಕ ಲೈಂಗಿಕ ಕ್ರಿಯೆ ಮತ್ತು ವಂಚನೆ ಪ್ರಕರಣವನ್ನು ದಾಖಲಿಸಿದ್ದಾರೆ. ಅಲ್ಲದೆ, ಎಫ್ಐಆರ್ನಲ್ಲಿ ವಿರಾಟ್ ವರ್ಧನ್ ಕುಟುಂಬದ ಸದಸ್ಯರ ಹೆಸರನ್ನು ಸಹ ಉಲ್ಲೇಖಿಸಿದ್ದಾರೆ.
ಮಾಧ್ಯಮಗಳ ಮುಂದೆ ಮಾತನಾಡಿರುವ ಸಂತ್ರಸ್ತೆ ಶೀತಲ್, 9 ವರ್ಷಗಳ ಹಿಂದೆ ಮ್ಯಾಟ್ರಿಮೋನಿಯಲ್ ವೆಬ್ಸೈಟ್ನಲ್ಲಿ ವಿರಾಜ್ ವರ್ಧನ್ ಭೇಟಿಯಾಗಿದ್ದಾಗಿ ತಿಳಿಸಿದ್ದಾರೆ. ನನ್ನ ಮಾಜಿ ಪತಿ ಅಪಘಾತದಲ್ಲಿ ತೀರಿಹೋದರು. 14 ವರ್ಷದ ಮಗಳು ಹಾಗೂ ನನ್ನನ್ನು ಅಗಲಿದರು. ಇದಾದ ಬಳಿಕ ವಿರಾಜ್ ವರ್ಧನ್ ಪರಿಚಯವಾಗಿ ಇಬ್ಬರು ಮದುವೆಯಾದೆವು ಎಂದು ಹೇಳಿದ್ದಾರೆ.
ಕುಟುಂಬಸ್ಥರ ಸಮ್ಮುಖದಲ್ಲಿ 2014ರಲ್ಲಿ ಇಬ್ಬರು ಔಪಚಾರಿಕವಾಗಿ ಮದುವೆ ಆದೆವು. ಇದಾದ ಬಳಿಕ ಕಾಶ್ಮೀರಕ್ಕೆ ಹನಿಮೂನ್ಗೂ ಹೋದೆವು. ಆದಾಗ್ಯೂ, ಆ ಮನುಷ್ಯ ಮದುವೆಯನ್ನು ಪರಿಪೂರ್ಣ ಮಾಡಲೇ ಇಲ್ಲ. ಹನಿಮೂನ್ ವ್ಯರ್ಥವಾಯಿತು. ಪ್ರಶ್ನಿಸಿದ್ದಕ್ಕೆ ಕ್ಷಮೆ ಒಂದನ್ನು ಬಿಟ್ಟರೆ, ಬೇರೇನು ಕೇಳುತ್ತಿರಲಿಲ್ಲ. ಮನವೊಲಿಸಲು ಮುಂದಾದಾಗ, ಕೆಲವು ವರ್ಷಗಳ ಹಿಂದೆ ರಷ್ಯಾದಲ್ಲಿ ಇರುವಾಗ ನಡೆದ ಅಪಘಾತದಿಂದ ಲೈಂಗಿಕ ಸಾಮರ್ಥ್ಯವನ್ನು ಕಳೆದುಕೊಂಡಿದ್ದಾಗಿ ಹೇಳಿದ ಎಂದು ಶೀತಲ್ ಎಫ್ಐಆರ್ನಲ್ಲಿ ತಿಳಿಸಿದ್ದಾರೆ.
ಸಣ್ಣ ಶಸ್ತ್ರಚಿಕಿತ್ಸೆಯ ನಂತರ ಸಂಪೂರ್ಣ ಚೇತರಿಸಿಕೊಳ್ಳುವುದಾಗಿ ಭರವಸೆ ನೀಡಿದರು. ಜನವರಿ 2020ರಲ್ಲಿ ಸ್ಥೂಲಕಾಯತೆಗೆ ಶಸ್ತ್ರಚಿಕಿತ್ಸೆ ಮಾಡಿಸಬೇಕೆಂದು ಹೇಳಿದರು. ಆದರೆ, ದೂರದಲ್ಲಿದ್ದುಕೊಂಡು ಲಿಂಗ ಪುನರ್ವಿತರಣೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾಗಿ ತುಂಬಾ ದಿನಗಳ ನಂತರ ನನಗೆ ಹೇಳಿದರು ಎಂದು ಶೀತಲ್ ಬಹಿರಂಗಪಡಿಸಿದ್ದಾರೆ.
ಇದಾದ ಬಳಿಕ ಶೀತಲ್ ಜೊತೆ ಬಲವಂತವಾಗಿ "ಅಸ್ವಾಭಾವಿಕ ಲೈಂಗಿಕತೆ" ಪ್ರಾರಂಭಿಸಿದ ವಿರಾಜ್, ಸತ್ಯವನ್ನು ಯಾರಿಗಾದರೂ ಬಹಿರಂಗಪಡಿಸಿದರೆ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾಗಿ ಮಾಧ್ಯಮಗಳ ಮುಂದೆ ಶೀತಲ್ ಬಿಚ್ಚಿಟ್ಟಿದ್ದಾರೆ.
ದೆಹಲಿಯ ನಿವಾಸಿಯಾಗಿರುವ ಆರೋಪಿಯನ್ನು ವಡೋದರಾಕ್ಕೆ ಕರೆತರಲಾಗಿದೆ ಎಂದು ಗೋತ್ರಿ ಪೊಲೀಸ್ ಇನ್ಸ್ಪೆಕ್ಟರ್ ಎಂಕೆ ಗುರ್ಜರ್ ತಿಳಿಸಿದ್ದಾರೆ. (ಏಜೆನ್ಸೀಸ್)