ಸ್ವತಂತ್ರ ಭಾರತದ ಅಮೃತ ಘಳಿಗೆಯು ದೇಶದ ಜನರಲ್ಲಿ ಹೊಸ ಶಕ್ತಿ ತುಂಬಲಿ: ಪ್ರಧಾನಿ ಮೋದಿ ಶುಭಾಶಯ

PM modi
Published on

ನವದೆಹಲಿ: ಪರಕೀಯರ ಕಪಿಮುಷ್ಠಿಯಲ್ಲಿದ್ದ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ ಇಂದಿಗೆ 75 ವರ್ಷಗಳಾಗಿದ್ದು, ರಾಷ್ಟ್ರಾದ್ಯಂತ ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್​ ಮೂಲಕ ದೇಶದ ಜನರಿಗೆ ಶುಭಕೋರಿದ್ದಾರೆ.

ಎಲ್ಲರಿಗೂ 75ನೇ ಸ್ವಾತಂತ್ರ್ಯ ದಿನದ ಶುಭಾಶಯಗಳು ಎಂದಿರುವ ಪ್ರಧಾನಿ ಮೋದಿ, ಈ ವರ್ಷ ಅಮೃತ ಹಬ್ಬದ ಸ್ವಾತಂತ್ರ್ಯೋತ್ಸವವು ದೇಶದ ಜನರಲ್ಲಿ ಹೊಸ ಶಕ್ತಿ ಮತ್ತು ನವಚೈತನ್ಯವನ್ನು ತುಂಬಲಿ ಎಂದು ಶುಭ ಹಾರೈಸಿದ್ದಾರೆ.

75ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಕೆಂಪು ಕೋಟೆಯಿಂದ ರಾಷ್ಟ್ರವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಇದು ಅವರ ಸತತ ಎಂಟನೇ ಸ್ವಾತಂತ್ರ್ಯೋತ್ಸವದ ಭಾಷಣವಾಗಿದೆ. ಮೋದಿ ಅವರು ಕೆಂಪು ಕೋಟೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದ ಬಳಿಕ ಇಂದು ಬೆಳಿಗ್ಗೆ 7.30ರ ಸುಮಾರಿಗೆ ಭಾಷಣ ಆರಂಭಿಸಲಿದ್ದಾರೆ.

ಪ್ರಧಾನಿ ಮೋದಿಯವರ ಭಾಷಣವನ್ನು ರಾಷ್ಟ್ರೀಯ ಸಾರ್ವಜನಿಕ ಪ್ರಸಾರಕ ದೂರದರ್ಶನ ನೇರಪ್ರಸಾರ ಮಾಡಲಿದ್ದು, ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ (ಪಿಐಬಿ) ಕೂಡ ತನ್ನ ಯೂಟ್ಯೂಬ್ ಚಾನೆಲ್​ನಲ್ಲಿ ಹಾಗೂ ಅದರ ಟ್ವಿಟರ್ ಹ್ಯಾಂಡಲ್ ನಲ್ಲಿ ಭಾಷಣವನ್ನು ನೇರ ಪ್ರಸಾರ ಮಾಡಲಿದೆ. ಪ್ರಧಾನ ಮಂತ್ರಿ ಕಚೇರಿಯ (ಪಿಎಂಒ) ಅಧಿಕೃತ ಯೂಟ್ಯೂಬ್ ಚಾನೆಲ್ ಕೂಡ ಪ್ರಧಾನಿ ಭಾಷಣವನ್ನು ಪ್ರಸಾರ ಮಾಡಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net