ಆಫ್ಘಾನ್​ನ ಕಂದಹಾರ್​ ಮಸೀದಿಯಲ್ಲಿ ಭೀಕರ ಸ್ಫೋಟ: 32 ಸಾವು, 53 ಮಂದಿ ಸ್ಥಿತಿ ಗಂಭೀರ

Blast
Published on

ಕಂದಹಾರ್​: ಅಫ್ಘಾನಿಸ್ತಾನದ ಕಂದಹಾರ್​ನ ಮಸೀದಿಯಲ್ಲಿ ಶುಕ್ರವಾರ ಸಂಭವಿಸಿದ ಸ್ಫೋಟದಲ್ಲಿ 32 ಮಂದಿ ದುರ್ಮರಣಕ್ಕೀಡಾಗಿದ್ದು, 53 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಇಲ್ಲಿಯವರೆಗೆ ಕಂದಹಾರ್​ನ ಕೇಂದ್ರೀಯ ಆಸ್ಪತ್ರೆಗೆ 32 ಮೃತದೇಹಗಳು ಮತ್ತು 53 ಗಾಯಾಳುಗಳನ್ನು ರವಾನಿಸಲಾಗಿದೆ. ಸ್ಫೋಟಕ್ಕೆ ಕಾರಣ ಏನೆಂಬುದನ್ನು ಇನ್ನು ಸ್ಪಷ್ಟವಾಗಿಲ್ಲ. ಆದರೆ, ಕಳೆದ ವಾರ ಇಸ್ಲಾಮಿಕ್​ ಸ್ಟೇಟ್​ ಉಗ್ರ ಸಂಘಟನೆ ಕುಂದ್ಜ್​ ನಗರದ ಮಸೀದಿ ಮೇಲೆ ಆತ್ಮಾಗುತಿ ಬಾಂಬ್​ ದಾಳಿ ನಡೆಸಿದ ಒಂದು ವಾರದ ಬೆನ್ನಲ್ಲೇ ಈ ಘಟನೆ ನಡೆದಿದೆ.

ಒಟ್ಟು ಮೂರು ಬಾರಿ ಸ್ಫೋಟ ಸಂಭವಿಸಿದೆ. ಮೊದಲ ಬಾರಿ ಮಸೀದಿಯ ಮುಖ್ಯ ದ್ವಾರದಲ್ಲಿ ಸ್ಫೋಟ ಸಂಭವಿಸಿದೆ. ಮತ್ತೊಂದು ಸ್ಫೋಟ ದಕ್ಷಿಣ ಏರಿಯಾದಲ್ಲೂ ಮತ್ತು ಮೂರನೇ ಸ್ಫೋಟ ಪ್ರಾರ್ಥನೆ ಸಲ್ಲಿಸುವುದಕ್ಕೂ ಮುನ್ನ ಜನರು ಸ್ವಚ್ಛತೆ ಮಾಡಿಕೊಳ್ಳುವಾಗ ಸಂಭವಿಸಿದೆ. ಶುಕ್ರವಾರ ಹಿನ್ನೆಲೆಯಲ್ಲಿ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದ ಸಮಯದಲ್ಲೇ ಭೀಕರ ಸ್ಫೋಟ ಸಂಭವಿಸಿದೆ.

ಕಂದಹಾರ್ ನಗರದ ಮೊದಲ ಜಿಲ್ಲೆಯ ಶಿಯಾ ಬಂಧುಗಳ ಮಸೀದಿಯಲ್ಲಿ ಸ್ಫೋಟ ಸಂಭವಿಸಿರುವುದನ್ನು ತಿಳಿದು ನಾವು ದುಃಖಿತರಾಗಿದ್ದೇವೆ. ಇದರಲ್ಲಿ ನಮ್ಮ ಹಲವಾರು ದೇಶವಾಸಿಗಳು ಹುತಾತ್ಮರಾಗಿದ್ದಾರೆ ಮತ್ತು ಗಾಯಗೊಂಡಿದ್ದಾರೆ ಎಂದು ತಾಲಿಬಾನ್ ಚಳುವಳಿಯ ಆಂತರಿಕ ಸಚಿವಾಲಯದ ವಕ್ತಾರ ಕರಿ ಸೈಯದ್ ಖೋಸ್ತಿ ಟ್ವೀಟ್ ಮಾಡಿದ್ದಾರೆ.

ಘಟನೆಯ ಸ್ವರೂಪವನ್ನು ನಿರ್ಧರಿಸಲು ಮತ್ತು ಅಪರಾಧಿಗಳ ಪತ್ತೆಗಾಗಿ ಇಸ್ಲಾಮಿಕ್ ಎಮಿರೇಟ್‌ನ ವಿಶೇಷ ಪಡೆಗಳು ಘಟನಾ ಪ್ರದೇಶವನ್ನು ಪರಿಶೀಲನೆ ನಡೆಸುತ್ತಿವೆ. ಪ್ರತ್ಯಕ್ಷದರ್ಶಿಗಳ ಪ್ರಕಾರ ಸ್ಫೋಟದ ಸಮಯದಲ್ಲಿ ಮಸೀದಿ ಜನರಿಂದ ತುಂಬಿತ್ತು. ಸ್ಫೋಟದ ಬೆನ್ನಲ್ಲೇ 15 ಆಂಬುಲೆನ್ಸ್​ಗಳು ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿವೆ.

ಶಿಯಾಗಳು ಅಫ್ಘಾನ್ ಜನಸಂಖ್ಯೆಯ ಸರಿಸುಮಾರು 10 ಪ್ರತಿಶತದಷ್ಟಿದ್ದಾರೆ. ಅವರಲ್ಲಿ ಹಲವರು ಹಜಾರ, ಅಫ್ಘಾನಿಸ್ತಾನದಲ್ಲಿ ದಶಕಗಳಿಂದ ಕಿರುಕುಳಕ್ಕೊಳಗಾದ ಜನಾಂಗೀಯ ಗುಂಪು ಕೂಡ ಇದೆ. ಅಕ್ಟೋಬರ್ 2017 ರಲ್ಲಿ, ಐಎಸ್ ಆತ್ಮಾಹುತಿ ದಾಳಿಕೋರ ಕಾಬೂಲ್‌ನ ಪಶ್ಚಿಮದಲ್ಲಿರುವ ಶಿಯಾ ಮಸೀದಿಯನ್ನು ಸ್ಫೋಟಿಸಿ 56 ಜನರನ್ನು ಕೊಂದು 55 ಜನರನ್ನು ಗಾಯಗೊಳಿಸಿದ್ದ. ಇದೀಗ ತಾಲಿಬಾನ್​ ಆಫ್ಘಾನ್​ ವಶಕ್ಕೆ ಪಡೆದುಕೊಂಡಿದ್ದು, ಬಾಂಬ್​ ದಾಳಿಗಳು ಸಾಮಾನ್ಯವಾಗಿರುವುದರಿಂದ ಜನರಲ್ಲಿ ಆತಂಕದಲ್ಲಿ ದಿನ ದೂಡುವಂತಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net