ಕಾಲೇಜು ವಿದ್ಯಾರ್ಥಿನಿಯರೇ ಟಾರ್ಗೆಟ್​: ಇನ್​ಸ್ಟಾಗ್ರಾಂನಲ್ಲಿ ಪರಿಚಯವಾದವನ ಕರಾಳ ಮುಖ ಲಾಡ್ಜ್​ನಲ್ಲಿ ಬಯಲು

Kerala Young Man
Published on

ತಿರುವನಂತಪುರ: ಇನ್​ಸ್ಟಾಗ್ರಾಂನಲ್ಲಿ ಕಾಲೇಜು ವಿದ್ಯಾರ್ಥಿಯರನ್ನು ಪರಿಚಯ ಮಾಡಿಕೊಂಡು ಪ್ರೀತಿಯ ಹೆಸರಲ್ಲಿ ಪುಸಲಾಯಿಸಿ, ಲಾಡ್ಜ್​ಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಆರೋಪಿಯನ್ನು ಕೇರಳದ ಥಂಪನೂರ್​ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ವಿನೀತ್​ (25) ಎಂದು ಗುರುತಿಸಲಾಗಿದೆ. ಈತ ಪ್ರಖ್ಯಾತ ಕೀಝಪೆರೂರ್​ ಕೃಷ್ಣ ದೇವಸ್ಥಾನದ ಸಮೀಪದ ಚಿರಾಯಿಂಕೀಜುವಿನ ವೆಲ್ಲಾಲೂರಿನ ನಿವಾಸಿ. ಕಳೆದ ತಿಂಗಳು ಪರವೂರಿನ ವಿದ್ಯಾರ್ಥಿನಿಯೊಬ್ಬಳನ್ನು ಥಂಪನೂರಿನ ಲಾಡ್ಜ್‌ಗೆ ಕರೆತಂದು ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.

ಆರೋಪಿ ವಿನೀತ್​, ಇನ್​ಸ್ಟಾಗ್ರಾನಲ್ಲಿ ತನ್ನನ್ನು ಫಾಲೋ ಮಾಡುವ ಹಾಗೂ ತಾನು ಫಾಲೋ ಮಾಡುವ ವಿದ್ಯಾರ್ಥಿನಿಯರನ್ನು ಪರಿಚಯ ಮಾಡಿಕೊಂಡು, ಫೇಸ್‌ಬುಕ್, ವಾಟ್ಸಾಪ್ ಸಂಪರ್ಕ ಬೆಳೆಸಿ, ಸ್ನೇಹ ಸಾಧಿಸುತ್ತಿದ್ದ. ಹೊಸ ಕಾರು ಖರೀದಿ ಮಾಡಿದ್ದೇನೆ. ಒಂದು ಡ್ರೈವ್​ ಹೋಗೋಣ ನನಗೆ ಕಂಪನಿ ಕೊಡಿ ಎಂದು ಆಹ್ವಾನಿಸುತ್ತಿದ್ದ.

ಆತನ ಆಹ್ವಾನವನ್ನು ನಂಬಿ ಆತನೊಂದಿಗೆ ಬರುತ್ತಿದ್ದ ವಿದ್ಯಾರ್ಥಿನಿಯರನ್ನು ತಿರುವನಂತಪುರದಲ್ಲಿರುವ ಲಾಡ್ಜ್​ಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸುಗುತ್ತಿದ್ದ. ವಿದ್ಯಾರ್ಥಿನಿಯೊಬ್ಬಳು ನಡೆದ ಘಟನೆಯನ್ನು ತನ್ನ ಸ್ನೇಹಿತೆಯೊಬ್ಬಳಿಗೆ ಹೇಳಿದ ಬಳಿಕ ಆಕೆ ದೂರು ದಾಖಲಿಸಿದಳು. ತಕ್ಷಣ ತನಿಖೆ ಆರಂಭಿಸಿದ ಪೊಲೀಸರು ವಿನೀತ್​ನನ್ನು ಬಂಧಿಸಿ, ಆತನ ಮೊಬೈಲ್​ ವಶಕ್ಕೆ ಪಡೆದಿದ್ದಾರೆ.

ಆರೋಪಿಯನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಸಹಾಯಕ ಕಮಿಷನರ್ ಶಾಜಿ ನೇತೃತ್ವದಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ಪ್ರಕಾಶ್, ಸಬ್ ಇನ್ಸ್‌ಪೆಕ್ಟರ್ ಸುಬಿನ್, ಎಎಸ್‌ಐ ಗೋಪಕುಮಾರ್ ಮತ್ತು ಪೊಲೀಸರಾದ ಸಾಜು, ಅಜಯಕುಮಾರ್, ಸುನೀಲ್ ಮತ್ತು ಅನಿಲ್ ಅವರನ್ನೊಳಗೊಂಡ ತಂಡ ಆರೋಪಿಯನ್ನು ಬಂಧಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net