

ಡೆಹ್ರಾಡೂನ್: ಚಾಲಕನ ನಿಯಂತ್ರಣ ತಪ್ಪಿದ ಬಸ್ 500 ಮೀಟರ್ ಆಳದ ಕಮರಿಗೆ ಉರುಳಿಬಿದ್ದ ಪರಿಣಾಮ ಸುಮಾರು 25 ಮಂದಿ ದುರಂತ ಸಾವಿಗೀಡಾಗಿ, 20ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರಾಖಂಡದ ಕೊಟ್ದ್ವಾರ್ ಜಿಲ್ಲೆಯಲ್ಲಿ ಬುಧವಾರ (ಅ.5) ಬೆಳಗ್ಗೆ ನಡೆದಿದೆ.
ಬಸ್‌ನಲ್ಲಿ ಒಟ್ಟು 55 ಪ್ರಯಾಣಿಕರಿದ್ದರು ಎಂದು ತಿಳಿದುಬಂದಿದೆ. ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿರುವ ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್ಡಿಆರ್ಎಫ್) ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಿದೆ. ಈವರೆಗೂ 21 ಮಂದಿಯನ್ನು ರಕ್ಷಣೆ ಮಾಡಲಾಗಿದೆ.
ಪೌರಿ ಜಿಲ್ಲೆಯ ಧುಮಾಕೋಟ್ ಪೊಲೀಸ್ ಠಾಣಾ ವ್ಯಾಪ್ತಿಯ ರಿಖ್ನಿಖಾಲ್ ಬಿರೋನ್‌ಖಾಲ್ ಮೋಟಾರ್ ರಸ್ತೆಯ ಸಿಮ್ಡಿ ಗ್ರಾಮದ ಬಳಿ ಬಸ್ ಕಮರಿಗೆ ಬಿದ್ದಿದೆ. ದುರಂತಕ್ಕೆ ಒಳಗಾದ ಬಸ್‌ನಲ್ಲಿ ಹರಿದ್ವಾರದ ಲಾಲ್ ಧಾಂಗ್ ಪ್ರದೇಶದಿಂದ ಬಿರ್ಖಾಲ್ ಬ್ಲಾಕ್‌ಗೆ ಮದುವೆ ಮೆರವಣಿಗೆ ಹೊರಟಿತ್ತು ಎಂದು ತಿಳಿದುಬಂದಿದೆ.
ಘಟನೆ ವರದಿಯಾದ ಕೂಡಲೇ ಧುಮ್ಕೋಟ್ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ದುರಂತದ ಬಗ್ಗೆ ಮಾಹಿತಿ ಪಡೆದ ಕೂಡಲೇ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ರಾಜ್ಯ ವಿಪತ್ತು ನಿರ್ವಹಣಾ ತಂಡವನ್ನು ಸ್ಥಳಕ್ಕೆ ಕಳುಹಿಸಿಕೊಟ್ಟರು. ಅಲ್ಲದೆ, ಅಗತ್ಯ ನೆರವು ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದೆ. (ಏಜೆನ್ಸೀಸ್)