ಇಡಿ ಅಧಿಕಾರಿಗಳ ಮಹಾ ಬೇಟೆ: ಸಚಿವರ ಆಪ್ತಳ ಮನೆಯಲ್ಲಿ 20 ಕೋಟಿ ರೂ. ನಗದು ಪತ್ತೆ!

Arpitha Mukharji
Published on

ನವದೆಹಲಿ: ಪಶ್ಚಿಮ ಬಂಗಾಳದ ಸಚಿವ ಪಾರ್ಥ ಚಟರ್ಜಿ ಅವರ ಆಪ್ತನ ಮನೆಯಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಬರೋಬ್ಬರಿ 20 ಕೋಟಿ ರೂಪಾಯಿ ನಗದು ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಗಾಳದಲ್ಲಿ ನಡೆದಿರುವ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಸಚಿವರ ಆಪ್ತ ಅರ್ಪಿತಾ ಮುಖರ್ಜಿ ಅವರ ನಿವಾಸದ ಮೇಲೆ ಇಡಿ ದಾಳಿ ಮಾಡಿದ ಸಂದರ್ಭದಲ್ಲಿ ಇಷ್ಟೊಂದು ಪ್ರಮಾಣದ ಹಣ ಪತ್ತೆಯಾಗಿದೆ.

ವಶಕ್ಕೆ ಪಡೆದಿರುವ ಭಾರೀ ಮೊತ್ತವು ಎಸ್‌ಎಸ್‌ಸಿ (ಸ್ಕೂಲ್​ ಸರ್ವೀಸ್​ ಕಮಿಷನ್​​) ಹಗರಣದದಿಂದ ಬಂದಿರುವ ಅಕ್ರಮ ಆದಾಯ ಎಂದು ಶಂಕಿಸಲಾಗಿದೆ. ಇಡಿ ತಂಡವು ಬ್ಯಾಂಕ್​ ಅಧಿಕಾರಿಗಳ ನೆರವು ಪಡೆದುಕೊಂಡು ವಶಕ್ಕೆ ಪಡೆದ ಹಣವನ್ನು ಕೌಂಟಿಂಗ್​ ಯಂತ್ರದ ಮೂಲಕ ಲೆಕ್ಕ ಹಾಕಿದ್ದಾರೆ. 2000 ಮತ್ತು 500 ಮುಖಬೆಲೆಯ ರಾಶಿ ರಾಶಿ ಹಣ ಪತ್ತೆಯಾಗಿದ್ದು, ಇದಕ್ಕೆ ಸಂಬಂಧಿಸಿದ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಇಡಿ ದಾಳಿ ವೇಳೆ ಹಣ ಮಾತ್ರವಲ್ಲದೆ, ಸುಮಾರು 20ಕ್ಕೂ ಹೆಚ್ಚು ಮೊಬೈಲ್​ಗಳನ್ನು ಅರ್ಪಿತಾ ಮುಖರ್ಜಿ ಮನೆಯ ಆವರಣದಲ್ಲಿ ವಶಕ್ಕೆ ಪಡೆಯಲಾಗಿದೆ. ಆ ಮೊಬೈಲ್​ಗಳನ್ನು ಯಾವ ಉದ್ದೇಶಕ್ಕಾಗಿ ಬಳಲಾಗುತ್ತಿತ್ತು ಎಂಬುದು ಖಚಿತವಾಗಿದೆ.

ಅರ್ಪಿತಾ ಮುಖರ್ಜಿ ಅಲ್ಲದೆ, ಬಂಗಾಳದ ಶಿಕ್ಷಣ ಸಚಿವ ಪರೇಶ್​ ಸಿ ಅಧಿಕಾರಿ ಮತ್ತು ಶಾಸಕ ಮಾಣಿಕ್​ ಭಟ್ಟಾಚಾರ್ಯ ಸೇರಿದಂತೆ ಇತರರ ಮನೆಗಳ ಮೇಲೂ ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಪ್ರಸ್ತುತ ಕೈಗಾರಿಕೆ ಮತ್ತು ವಾಣಿಜ್ಯ ಸಚಿವರಾಗಿರುವ ಪಾರ್ಥ ಚಟರ್ಜಿ ಅವರು ಶಿಕ್ಷಣ ಸಚಿವರಾಗಿದ್ದಾಗ ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗದಿಂದ (ಡಬ್ಲ್ಯುಬಿಎಸ್‌ಎಸ್‌ಸಿ) ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಅಕ್ರಮ ನೇಮಕಾತಿಗಳನ್ನು ನಡೆಸಿರುವ ಗಂಭೀರ ಆರೋಪ ಕೇಳಿಬಂದಿದೆ.

ಇಡಿ ದಾಳಿಯನ್ನು ಖಂಡಿಸಿರುವ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್​ (ಟಿಎಂಸಿ) ಕೇಂದ್ರದ ಬಿಜೆಪಿ ಸರ್ಕಾರವು ತನ್ನ ರಾಜಕೀಯ ಎದುರಾಳಿಗಳಿಗೆ "ಕಿರುಕುಳ" ನೀಡುವ "ಕುತಂತ್ರ" ಎಂದು ಬಣ್ಣಿಸಿದೆ. ಆದಾಗ್ಯೂ, ತೃಣಮೂಲವು ಅಧಿಕಾರಕ್ಕೆ ಬಂದ ನಂತರ ಪ್ರಾಥಮಿಕ, ಉನ್ನತ ಪ್ರಾಥಮಿಕ ಮತ್ತು ಮಾಧ್ಯಮಿಕ ಹಂತಗಳಲ್ಲಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ದೊಡ್ಡ ಪ್ರಮಾಣದ ಹಗರಣ ನಡೆದಿದೆ ಎಂದು ಎಂದು ಬಿಜೆಪಿ ಆರೋಪಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net