More

    ಉದ್ಯೋಗ ಸೃಷ್ಟಿಯತ್ತ ದೃಷ್ಟಿ; ಮೂರು ಪಟ್ಟು ಹೆಚ್ಚಳ ನಿರೀಕ್ಷೆ  

    ಬೆಂಗಳೂರು: ಕನ್ನಡಿಗರಿಗೆ ಉದ್ಯೋಗ ಕ್ಷೀಣಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಉದ್ದಿಮೆಗಳಲ್ಲಿ ಹೆಚ್ಚುವರಿ ಉದ್ಯೋಗ ಸೃಷ್ಟಿಗೆ ಹೆಜ್ಜೆ ಇಟ್ಟಿದೆ. 2022-23ನೇ ಸಾಲಿನ ಆಯವ್ಯಯದಲ್ಲಿ ನೀಡಿರುವ ಭರವಸೆಯಂತೆ, ಸರ್ಕಾರ ನೂತನ ಉದ್ಯೋಗ ನೀತಿ ಜಾರಿಗೆ ಮುಂದಾಗಿದೆ.

    ಉದ್ಯಮಗಳಲ್ಲಿ ಬಂಡವಾಳ ಹೂಡಿಕೆ ಆಧರಿಸಿ ಉದ್ಯೋಗ ಸೃಜನೆಗೆ ಅವಕಾಶ ಕಲ್ಪಿಸುವ ಹೊಸ ಉದ್ಯೋಗ ನೀತಿಗೆ ಶುಕ್ರವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆ ಸಮ್ಮತಿಸಿದೆ. ನೀತಿಯಲ್ಲಿ ಏನಿದೆ?: ಹಾಲಿ ಉದ್ಯಮಿಗಳು ಹೆಚ್ಚುವರಿ ಬಂಡವಾಳ ಹೂಡಿಕೆ ಮಾಡುವುದಾದರೆ ಅದಕ್ಕೆ ಪೂರಕವಾಗಿ ಹೆಚ್ಚುವರಿ ಉದ್ಯೋಗ ಸೃಷ್ಟಿಸುವುದು ಈ ನೀತಿಯ ಪ್ರಮುಖ ಉದ್ದೇಶ.

    ಈ ಉದ್ಯೋಗ ನೀತಿಯಿಂದ 2.5 ರಿಂದ 3 ಪಟ್ಟು ಉದ್ಯೋಗ ಸೃಜನೆಯಾಗಬಹುದೆಂದು ಸರ್ಕಾರ ನಿರೀಕ್ಷಿಸಿದೆ. 2022-23ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿರುವಂತೆ ಉದ್ಯೋಗ ಸೃಜನೆಗೆ ಒತ್ತು ನೀಡುವ ಸಮಗ್ರ ಉದ್ಯೋಗ ನೀತಿ ಇದಾಗಿದೆ. ರಾಜ್ಯದ ಜನರಿಗೆ ಹೆಚ್ಚಿನ ಉದ್ಯೋಗ ನೀಡುವ ಹಾಗೂ ಕೈಗಾರಿಕೆಗಳಿಗೆ ಹೆಚ್ಚುವರಿ ಪ್ರೋತ್ಸಾಹ ನೀಡಲು ಸರ್ಕಾರ ನಿರ್ಧರಿಸಿದೆ. ಅತಿ ಹೆಚ್ಚು ಉದ್ಯೋಗ ಸೃಷ್ಟಿಸುವ ಜವಳಿ, ಆಟಿಕೆ ತಯಾರಿಕೆ, ಎಫ್​ಎಂಸಿಜಿ, ಚರ್ಮ ಉತ್ಪನ್ನ, ಆಹಾರ ಸಂಸ್ಕರಣೆ, ಜುವೆಲ್ಲರಿ ಮೇಲೆ ಹೆಚ್ಚು ಒತ್ತು ನೀಡಿ ಹೂಡಿಕೆದಾರರನ್ನು ಆಕರ್ಷಿಸುವದು ಈ ನೀತಿಯ ಧ್ಯೇಯವಾಗಿದೆ.

    ಸ್ಥಳೀಯರಿಗೆ ಉದ್ಯೋಗ ಹೆಚ್ಚಳ: ಹೆಚ್ಚುವರಿ ಹೂಡಿಕೆ ಆಧರಿಸಿ ಹೆಚ್ಚು ಉದ್ಯೋಗ ಸೃಷ್ಟಿಸುವ ಸಂಬಂಧ ನೀತಿಯಲ್ಲಿ ಸ್ಪಷ್ಟಪಡಿಸಲಾಗಿದೆ. ಸ್ಥಳೀಯರಿಗೆ ಹೆಚ್ಚು ಉದ್ಯೋಗ ದೊರೆಯಬೇಕು. ನಿರುದ್ಯೋಗ ಸಮಸ್ಯೆ ನೀಗಬೇಕು. ಯುವಕರಿಗೆ ಕೆಲಸ ಸಿಗಬೇಕು ಎಂಬುದು ನಮ್ಮ ಉದ್ದೇಶ. ದುಡಿಯುವ ಬಂಡವಾಳ ಹೆಚ್ಚಾದಂತೆ ಉದ್ಯೋಗ ಸೃಷ್ಟಿಯನ್ನು ಹೆಚ್ಚಿಸಬೇಕು ಎಂಬ ನಿಬಂಧನೆಯನ್ನು ನೂತನ ಉದ್ಯೋಗ ನೀತಿಯಲ್ಲಿ ಅಳವಡಿಸಲಾಗಿದೆ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಸುದ್ದಿಗಾರರಿಗೆ ತಿಳಿಸಿದರು. ಈಗಾಗಲೇ ಉದ್ಯಮಗಳನ್ನು ಮಧ್ಯಮ, ಬೃಹತ್, ಮೆಗಾ, ಸೂಪರ್ ಮೆಗಾ, ಅಲ್ಟಾ›, ಸೂಪರ್ ಅಲ್ಟ್ರಾ ಎಂದು ವರ್ಗೀಕರಿಸಲಾಗಿದೆ. ಈ ವರ್ಗೀಕರಣದನ್ವಯ ಹೂಡಿಕೆ ಹೆಚ್ಚಾದಂತೆ ಉದ್ಯೋಗ ಸೃಷ್ಟಿಯೂ ಹೆಚ್ಚಾಗಲಿದೆ.

    ಎಲ್ಲ ಶ್ರೇಣಿಯಲ್ಲೂ ಅವಕಾಶ: ಉದ್ಯಮಗಳಲ್ಲಿ ಕನ್ನಡಿಗರಿಗೆ ಕೇವಲ ಸಿ ಮತ್ತು ಡಿ ಶ್ರೇಣಿಯ ಉದ್ಯೋಗಗಳನ್ನು ನೀಡಲಾಗುತ್ತಿದೆ ಎಂಬ ಆರೋಪವನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಹೊಸ ಉದ್ಯೋಗ ನೀತಿಯಲ್ಲಿ ಎಲ್ಲ ಶ್ರೇಣಿಯ ಹುದ್ದೆಗಳಲ್ಲೂ ಸ್ಥಳೀಯರಿಗೆ ಅವಕಾಶ ನೀಡಬೇಕು ಎಂಬ ಷರತ್ತು ವಿಧಿಸಿದೆ.

    ನೀತಿಯ ಸಮರ್ಥನೆ

    1.   ರಾಜ್ಯದಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಸುವ ಹೂಡಿಕೆದಾರರಿಗೆ ಪ್ರೋತ್ಸಾಹ ಒದಗಿಸುವ ಹಿನ್ನೆಲೆಯಲ್ಲಿ ಹೂಡಿಕೆದಾರರ ದೃಷ್ಟಿ ಉದ್ಯೋಗ ಒದಗಿಸುವುದರ ಮೇಲೆ ಮುಂದುವರಿಯಲಿದೆ.
    2.   ಹೆಚ್ಚು ಉದ್ಯೋಗ ಸೃಷ್ಟಿಸುವ ಜವಳಿ ಮತ್ತು ಗಾರ್ವೆಂಟ್ ನೀತಿ 2019-24ನ್ನು ತಿದ್ದುಪಡಿ ಮಾಡಿ ಪ್ರೋತ್ಸಾಹಗಳ ಮೇಲಿನ ಮಿತಿ ತೆಗೆದು ಹಾಕಲಾಗಿದೆ.
    3.   ಹೆಚ್ಚುವರಿ ವಹಿವಾಟಿಗೆ ಪೂರಕವಾಗಿ ಶೇ.0.75 ರಷ್ಟು ಸಹಾಯಧನ ನೀಡುವ ಬಂಡವಾಳ ಹೂಡಿಕೆಗೆ 3.5 ಪಟ್ಟು ಹೆಚ್ಚು ಉದ್ಯೋಗ ಕೊಡಬೇಕು.
    4.   ಹೆಚ್ಚುವರಿ ವಹಿವಾಟಿಗೆ ಪೂರಕವಾಗಿ ಶೆ.0.50 ರಷ್ಟು ಸಹಾಯಧನ ನೀಡುವ ಬಂಡವಾಳ ಹೂಡಿಕೆಗೆ 2.5 ಪಟ್ಟು ಹೆಚ್ಚು ಉದ್ಯೋಗ ಕೊಡಬೇಕು.
    5.   ಚರ್ಮ ಉತ್ಪನ್ನ ಹಾಗೂ ಆಹಾರ ಸಂಸ್ಕರಣೆ ಮತ್ತು ಜುವೆಲ್ಲರಿ ಉದ್ಯಮಗಳಿಗೆ ಪ್ರಸ್ತಾವನೆಗಳನ್ನು ಆಧರಿಸಿ ಹೆಚ್ಚುವರಿ ಪ್ರೋತ್ಸಾಹ ನೀಡಲಾಗುತ್ತದೆ.

    ಸಂಪುಟ ಸಭೆ ನಿರ್ಧಾರಗಳು

    •   ಕಸ್ತೂರಿರಂಗನ್ ವರದಿ ತಿರಸ್ಕಾರ
    •   ರಸಗೊಬ್ಬರ ದಾಸ್ತಾನಿಗೆ -ಠಿ;400 ಕೋಟಿಗಳಿಗೆ ಸರ್ಕಾರದ ಗ್ಯಾರಂಟಿ
    •   ಕಟ್ಟಡ ಮತ್ತು ಇತರೆ ಕಾರ್ವಿುಕರ ಸೌಲಭ್ಯ ಷರತ್ತಿಗೆ ವಿನಾಯ್ತಿ
    •   ಪದವಿ ಕಾಲೇಜುಗಳಿಗೆ ಡಿ ಗ್ರೂಪ್​ನ 1150 ಜನ ಹೊರಗುತ್ತಿಗೆ ಆಧಾರದಲ್ಲಿ ನೇಮಕ
    •   ಶಾಲಾ ಮಕ್ಕಳ ಶೂ, ಸಾಕ್ಸ್​ಗೆ 132 ಕೋಟಿ ರೂಪಾಯಿಗೆ ಅನುಮೋದನೆ
    •   ಜೀವಾವಧಿ ಕೈದಿಗಳ ಬಿಡುಗಡೆ ಮಾರ್ಗ ಸೂಚಿಗೆ ತಿದ್ದುಪಡಿ
    •   ವಸತಿ ಯೋಜನೆಗೆ ಹುಡ್ಕೋ ಸಾಲಕ್ಕೆ ಸರ್ಕಾರದ ಖಾತರಿ
    •   ಮೈಸೂರು ವಿಮಾನ ನಿಲ್ದಾಣಕ್ಕೆ ನಾಲ್ವಡಿ ಹೆಸರು
    •   ಅನಂತಕುಮಾರ್ ಪ್ರತಿಷ್ಠಾನಕ್ಕೆ 3.10 ಎಕರೆ ಭೂಮಿ
    •   ಜಲಜೀವನ ಮಿಷನ್ 1400 ಕೋಟಿ ರೂ. ಯೋಜನೆಗೆ ಅಸ್ತು
    •   6 ಏತ ನೀರಾವರಿ, ಒಂದು ಬ್ಯಾರೇಜು, ಕೆರೆ ಭರ್ತಿಗೆ -ಠಿ;812 ಕೋಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts