

ಹೈದರಾಬಾದ್: ಕಳೆದ ವಾರ 17 ವರ್ಷದ ಹುಡುಗಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಆರೋಪದ ಮೇಲೆ ಮೂವರು ಅಪ್ರಾಪ್ತರು ಸೇರಿದಂತೆ ಐವರ ವಿರುದ್ಧ ಹೈದರಾಬಾದ್ ಪೊಲೀಸರು ಪ್ರಕರಣ ದಾಖಲಿಸಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ. ಸಂತ್ರಸ್ತೆಯ ತಂದೆ ದೂರು ದಾಖಲಿಸಿದ ಬಳಿಕ ಈ ಘಟನೆ ಬೆಳಕಿಗೆ ಬಂದಿದ್ದು, ಹೈದರಾಬಾದ್ನಲ್ಲಿ ಆರೋಪಿಗಳ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ.
ಈ ಘಟನೆ ಮೇ 28ರಂದು ನಡೆದಿದೆ. ಸಂತ್ರಸ್ತ ಹುಡುಗಿ ಜುಬಿಲಿ ಹಿಲ್ಸ್ನಲ್ಲಿರುವ ಪಬ್ ಒಂದರಲ್ಲಿ ನಡೆಯುತ್ತಿದ್ದ ಪಾರ್ಟಿಯಲ್ಲಿ ಪಾಲ್ಗೊಳ್ಳಲು ಪಬ್ಗೆ ತೆರಳಿದ್ದಳು. ಪಾರ್ಟಿ ಮುಗಿದ ಬಳಿಕ ಮನೆಗೆ ಡ್ರಾಪ್ ಮಾಡುವುದಾಗಿ ಆರೋಪಿಗಳು ಆಕೆ ಆಫರ್ ಮಾಡಿದ್ದಾರೆ. ಅವರನ್ನು ನಂಬಿದ ಹುಡುಗಿ ಕಾರನ್ನೇರಿದ್ದಾಳೆ. ಬಳಿಕ ಒಂದು ಕಡೆ ಕಾರನ್ನು ಪಾರ್ಕ್ ಮಾಡಿ ಆರೋಪಿಗಳು ಹುಡುಗಿಯ ಮೇಲೆ ಕಾರಿನ ಒಳಗೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.
ಈ ಘಟನೆ ನಡೆದ ಒಂದು ವಾರದ ಬಳಿಕ ಸಂತ್ರಸ್ತೆಯ ತಂದೆ ದೂರು ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ದೂರು ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರಿಗೆ ಅತ್ಯಾಚಾರ ಎಸಗಲು ಬಳಸಿದ ಕಾರು ಶಾಸಕರೊಬ್ಬರಿಗೆ ಸೇರಿದ್ದು ಎಂದು ತಿಳಿದುಬಂದಿದೆ. ಶಾಸಕರ ಪುತ್ರನು ಕೂಡ ಈ ಪ್ರಕರಣದಲ್ಲಿ ಭಾಗಿಯಾಗಿರುವ ಮಾತುಗಳು ಕೇಳಿಬರುತ್ತಿವೆ. ಅಲ್ಲದೆ, ತೆಲಂಗಾಣದ ಗೃಹಸಚಿವ ಮಹ್ಮೂದ್ ಅಲಿ ಅವರ ಮೊಮ್ಮಗನ ವಿರುದ್ಧ ಆರೋಪ ಕೇಳಿಬಂದಿದೆ. ಆದರೆ, ಅವರಿಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಮೂವರು ಆರೋಪಿಗಳ ಅಪ್ರಾಪ್ತರು ಆಗಿರುವುದರಿಂದ ಅವರ ಹೆಸರನ್ನು ಬಹಿರಂಗಪಡಿಸಿಲ್ಲ. ಸೆಲೆಬ್ರಿಟಿಯೊಬ್ಬರ ಅಪ್ರಾಪ್ತ ಪುತ್ರನು ಕೂಡ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಕೇಳಿಬಂದಿದೆ. ಅವರ ಹೆಸರನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಡಿಸಿಪಿ ಹೇಳಿದ್ದಾರೆ. ಇನ್ನೊಬ್ಬ ಆರೋಪಿಯ ತಂದೆ ತೆಲಂಗಾಣ ವಕ್ಫ್ ಬೋರ್ಡ್ ಚೇರ್ಮನ್ ಆಗಿದ್ದಾರೆ. ಸದ್ಯ ಈ ಪ್ರಕರಣದಲ್ಲಿ ಈಗಾಗಲೇ ಬಂಧನವಾಗಿರುವ ಇಬ್ಬರು ವಯಸ್ಕರನ್ನು ಮಜೀದ್ ಮತ್ತು ಫಾರೂಕ್ ಎಂದು ಗುರುತಿಸಲಾಗಿದೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 354, 376 (ಗ್ಯಾಂಗ್ರೇಪ್) ಮತ್ತು ಪೊಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ.
ತಮ್ಮ ಮಗನ ವಿರುದ್ಧ ಕೇಳಿಬಂದಿರುವ ಆರೋಪವನ್ನು ಶಾಸಕರು ಅಲ್ಲಗೆಳೆದಿದ್ದಾರೆ. ಸಂತ್ರಸ್ತೆಯ ಮೇಲೆ ದೌರ್ಜನ್ಯ ನಡೆಯುವ ಸಮಯದಲ್ಲಿ ನನ್ನ ಮಗ ಕೆಫೆಯಲ್ಲಿ ಕುಳಿತಿದ್ದ. ಈ ಘಟನೆಗೂ ಆತನಿಗೆ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ. ಆದರೆ, ಪಬ್ನಿಂದ ಶಾಸಕರ ಪುತ್ರನ ಜತೆ ಸಂತ್ರಸ್ತೆ ನಡೆದುಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದ್ದು, ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. (ಏಜೆನ್ಸೀಸ್)