

ಭದ್ರಾವತಿ: ಸಂವಿಧಾನ ಜಾರಿಯಾದಾಗಿನಿಂದ ಹಲವು ಬಾರಿ ತಿದ್ದುಪಡಿ ಮಾಡಲಾಗಿದೆ. ಬಿಜೆಪಿ ದೇಶದ ಹಿತಕ್ಕಾಗಿ ಮಾಡಿದ್ದರೆ, ಕಾಂಗ್ರೆಸ್ ಸರ್ಕಾರ ತನ್ನ ಸ್ವಾರ್ಥಕ್ಕಾಗಿ ತಿದ್ದುಪಡಿ ಮಾಡಿದೆ ಎಂದು ಸಿಟಿಜನ್ ಫಾರ್ ಸೋಶಿಯಲ್ ಜಸ್ಟೀಸ್ ವೇದಿಕೆ ಜಿಲ್ಲಾ ಕಾರ್ಯದರ್ಶಿ ಮಂಗಳಾ ನಾಗೇಂದ್ರ ಹೇಳಿದರು.
ಹಳೇನಗರದ ಬನಶಂಕರಿ ಸಮುದಾಯ ಭವನದಲ್ಲಿ ಭಾನುವಾರ ಸಿಟಿಜನ್ ಫಾರ್ ಸೋಶಿಯಲ್ ಜಸ್ಟೀಸ್ ವೇದಿಕೆಯು ಸಂವಿಧಾನ ಸನ್ಮಾನ ಅಭಿಯಾನ ಕಾರ್ಯಕ್ರಮದಡಿ ಬಿ.ಇಡಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ರಸಪ್ರಶ್ನೆ, ಪ್ರಬಂಧ ಹಾಗೂ ವೇಷಭೂಷಣ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನ ವಿತರಿಸಿ ಮಾತನಾಡಿದರು.
ಭಾರತೀಯರಾದ ನಾವು ರಾಮಾಯಣ, ಮಹಾಭಾರತ ಮುಂತಾದ ಪವಿತ್ರ ಗ್ರಂಥಗಳಿಗೆ ನೀಡುವ ಗೌರವವನ್ನು ಅಂಬೇಡ್ಕರ್ ರಚಿಸಿರುವ ಸಂವಿಧಾನಕ್ಕೂ ನೀಡಬೇಕು. ಅದು ಮನೆಮನೆಯ ಮಾತಾಗಬೇಕು. ಪ್ರತಿಯೊಬ್ಬರಿಗೂ ಅದರ ಆಶಯಗಳನ್ನು ತಿಳಿಯಬೇಕು ಎಂದರು.
ಸಂಘಟನೆಯ ತಾಲೂಕು ಸಂಚಾಲಕ ಕೆ.ಎನ್.ಶ್ರೀಹರ್ಷ ಮಾತನಾಡಿ, ಭಾರತದ ಸಂಸ್ಕೃತಿ ಕರ್ಮಯೋಗ ಸಿದ್ಧಾಂತವನ್ನು ಪ್ರತಿಪಾದಿಸುತ್ತದೆ. ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಭಾರತದ ಸಂವಿಧಾನವನ್ನು ಭಾರತದ ಸರ್ವಾಂಗೀಣ ಅಭಿವೃದ್ಧಿಗಾಗಿ ರಚಿಸಿದರು. ಅಂಬೇಡ್ಕರ್ ಹೆಸರನ್ನು ಬಳಸಿಕೊಂಡು ರಾಜಕಾರಣ ಮಾಡುತ್ತ ಬಂದಿರುವ ಕಾಂಗ್ರೆಸ್ ಸಂವಿಧಾನದ ನೈಜ ಚಿತ್ರಣವನ್ನು ಜನರಿಗೆ ತಿಳಿಸುವ ಕೆಲಸ ಮಾಡಲಿಲ್ಲ. ಅಂಬೇಡ್ಕರ್ ಕೇವಲ ಮೀಸಲಾತಿ ನೀಡಬೇಕೆಂದು ಪ್ರತಿಪಾದಿಸಲಿಲ್ಲ. ಕೇವಲ ಹಣವಂತರ ಕೈಯಲ್ಲಿದ್ದಂತಹ ಮತದಾನದ ಹಕ್ಕನ್ನು ದೇಶದ ಪ್ರತಿಯೊಬ್ಬ ವಯಸ್ಕನಿಗೂ ದೊರಕುವಂತೆ ಮಾಡಿದರು ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ಮರಣೋತ್ತರ ಭಾರತರತ್ನ ಪ್ರಶಸ್ತಿ ನೀಡಿ ಗೌರವಿಸಿತು. ಜತೆಗೆ ಅಂಬೇಡ್ಕರ್ ಜನ್ಮಸ್ಥಳ, ಲಂಡನ್‌ನಲ್ಲಿ ವಿದ್ಯಾಭ್ಯಾಸ ಮಾಡಿದ ಕೊಠಡಿ, ಅವರು ಅಂತಿಮವಾಗಿ ಜೀವನಯಾತ್ರೆ ಮುಗಿಸಿದ ಸ್ಥಳ ಹಾಗೂ ಬೌದ್ಧ ಧರ್ಮಸ್ವೀಕರಿಸಿದ ಸ್ಥಳ ಎಲ್ಲವನ್ನೂ ಗುರುತಿಸಿ ಅವುಗಳಿಗೆ ವಿಶ್ವಮಾನ್ಯತೆ ದೊರಕಿಸುವ ಕೆಲಸ ಮಾಡಿತು ಎಂದು ತಿಳಿಸಿದರು.
ಬಿಜೆಪಿ ಮುಖಂಡ ತೀರ್ಥಯ್ಯ, ನಗರಸಭಾ ಸದಸ್ಯೆ ಅನುಪಮಾ ಚನ್ನೇಶ್, ಪ್ರಧಾನ ಕಾರ್ಯದರ್ಶಿ ಅಣ್ಣಪ್ಪ, ಚನ್ನೇಶ್, ರಾಜಶೇಖರ್ ಉಪಸ್ಥಿತರಿದ್ದರು.