

ಕೋಲ್ಕತಾ: ಜನವರಿ 26ರಂದು ನವದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪರೇಡ್ಗೆ ಹಲವು ರಾಜ್ಯಗಳ ಸ್ತಬ್ಧಚಿತ್ರಗಳನ್ನು ತಿರಸ್ಕರಿಸಲಾಗಿದೆ. ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಹರಿಯಾಣ, ಉತ್ತರಾಖಂಡ, ಬಿಹಾರ, ತ್ರಿಪುರಾ ಮತ್ತು ಅರುಣಾಚಲ ಪ್ರದೇಶಗಳು ಕಳಿಸಿದ್ದ ಸ್ತಬ್ಧಚಿತ್ರಗಳ ಪ್ರಸ್ತಾವನೆ ತಿರಸ್ಕೃತಗೊಂಡಿವೆ ಎನ್ನಲಾಗಿದೆ. ಈ ಕ್ರಮ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿದೆ.
ತಜ್ಞರ ಸಮಿತಿ ರಾಜ್ಯ, ಕೇಂದ್ರಾಡಳಿತ ಪ್ರದೇಶ ಹಾಗೂ ವಿವಿಧ ಇಲಾಖೆಗಳ ಟ್ಯಾಬ್ಲೋ ಪ್ರಸ್ತಾಪನೆಗಳನ್ನು ಪರಿಶೀಲಿಸಿ ಪ್ರದರ್ಶನದಲ್ಲಿ ಪಾಲ್ಗೊಳ್ಳುವ ಸ್ತಬ್ಧಚಿತ್ರಗಳನ್ನು ಅಂತಿಮಗೊಳಿಸುತ್ತದೆ. ಇದೇ ಪ್ರಕ್ರಿಯೆ ಮೂಲಕ 2019ರ ಪರೇಡ್ಗೆ ಬಂಗಾಳದ ಟ್ಯಾಬ್ಲೋ ಆಯ್ಕೆಯಾಗಿತ್ತು. ಆದರೆ ಈ ಬಾರಿ ಇದಕ್ಕೆ ರಾಜಕೀಯ ಬಣ್ಣ ನೀಡುವ ಪ್ರಯತ್ನ ನಡೆದಿದೆ.
‘ಗಣರಾಜ್ಯೋತ್ಸವ ಪರೇಡ್ಗೆ ಪಶ್ಚಿಮ ಬಂಗಾಳದ ಸ್ತಬ್ಧ ಚಿತ್ರಕ್ಕೆ ಅವಕಾಶ ನಿರಾಕರಿಸಿರುವುದು ತಾರತಮ್ಯದ ಕ್ರಮವಾಗಿದೆ’ ಎಂದು ತೃಣಮೂಲ ಕಾಂಗ್ರೆಸ್ ಸಂಸದ ಸೌಗತ ರಾಯ್ ಹೇಳಿದ್ದಾರೆ. ಕೇಂದ್ರದ ಪೌರತ್ವ ತಿದ್ದುಪಡಿ ಕಾನೂನು (ಸಿಎಎ) ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ಸಿ) ಯೋಜನೆಗೆ ಪಶ್ಚಿಮ ಬಂಗಾಳ ವಿರೋಧಿಸುತ್ತಿರುವುದೇ ಇದಕ್ಕೆ ಕಾರಣ ಎಂದು ಅವರು ಟೀಕಿಸಿದ್ದಾರೆ. ಪಶ್ಚಿಮ ಬಂಗಾಳ ಸರ್ಕಾರ ಸಲ್ಲಿಸಿದ್ದ ಪ್ರಸ್ತಾಪನೆಯನ್ನು ಎರಡು ಸಭೆಗಳಲ್ಲಿ ಪರಿಶೀಲಿಸಲಾಗಿತ್ತು. ಆ ನಂತರ ಈ ವಿಚಾರವನ್ನು ಮುಂದಕ್ಕೊಯ್ದಿಲ್ಲ ಎಂದು ರಕ್ಷಣಾ ಸಚಿವಾಲಯ ಹೇಳಿದೆ.
ಬಿಜೆಪಿ ರಾಜ್ಯಗಳದ್ದೂ ತಿರಸ್ಕೃತ: ರಾಜಕೀಯ ಕಾರಣಕ್ಕೆ ತಮ್ಮ ಸ್ತಬ್ಧಚಿತ್ರ ಪ್ರಸ್ತಾಪನೆ ತಿರಸ್ಕರಿಸಲಾಗಿದೆ ಎಂಬ ಪಶ್ಚಿಮ ಬಂಗಾಳ ಹಾಗೂ ಮಹಾರಾಷ್ಟ್ರದ ಆರೋಪವನ್ನು ಕೇಂದ್ರ ಸರ್ಕಾರ ಖಂಡಿಸಿದೆ. ಬಿಜೆಪಿ ಆಡಳಿತವಿರುವ ನಾಲ್ಕು ರಾಜ್ಯಗಳ ಟ್ಯಾಬ್ಲೋಗಳನ್ನು ಕೂಡ ತಿರಸ್ಕರಿಸಲಾಗಿದೆ. ಹರಿಯಾಣ, ಉತ್ತರಾಖಂಡ, ತ್ರಿಪುರಾ ಮತ್ತು ಅರುಣಾಚಲ ಪ್ರದೇಶಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಆದರೂ ಅವುಗಳ ಟ್ಯಾಬ್ಲೋಗಳಿಗೆ ಈ ಬಾರಿ ಅವಕಾಶ ನೀಡಿಲ್ಲ. ತಮ್ಮ ರಾಜ್ಯಗಳಲ್ಲಿನ ಆಡಳಿತ ವೈಫಲ್ಯದಿಂದ ಗಮನ ಬೇರೆಡೆ ಸೆಳೆಯಲು ಪ್ರತಿಪಕ್ಷಗಳು ಇಂಥ ಆರೋಪ ಮಾಡುತ್ತಿವೆ. ಹುಸಿ ಕಾರಣವೊಂದನ್ನು ಕಂಡುಕೊಂಡಿವೆ ಎಂದು ಸರ್ಕಾರ ಹೇಳಿದೆ. ಪಶ್ಚಿಮ ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಪರಿಸ್ಥಿತಿ ಸಂಪೂರ್ಣ ಕುಸಿದಿದೆ. ಮಹಾರಾಷ್ಟ್ರದಲ್ಲಿ ಖಾತೆ ಹಂಚಿಕೆಗೆ ತಿಕ್ಕಾಟ ಉಂಟಾಗಿದೆ ಎಂದು ಹೇಳಿದೆ.
2020ರ ಗಣರಾಜ್ಯೋತ್ಸವ ಪರೇಡ್ನಲ್ಲಿ ಭಾಗವಹಿಸಲು ರಾಜ್ಯಗಳಿಂದ 32 ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ 24 ಪ್ರವೇಶಗಳು ಬಂದಿದ್ದವು. ಆ ಪೈಕಿ ಒಟ್ಟು 22 ಪ್ರಸ್ತಾಪನೆಗಳನ್ನು ಅಂತಿಮ ಮಾಡಲಾಗಿದೆ. ಐದು ಸರಣಿ ಸಭೆಗಳ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ. ಕರ್ನಾಟಕದ ಟ್ಯಾಬ್ಲೋ ಈಗಾಗಲೇ ಅಂಗೀಕಾರವಾಗಿದೆ.
ಯಾಕೆ ನಿರಾಕರಣೆ?
ತಜ್ಞರ ಸಮಿತಿಯ ಆಕ್ಷೇಪಣೆ ನಂತರ ಪ್ರಸ್ತಾಪನೆಯನ್ನು ತಿರಸ್ಕರಿಸಲಾಗಿದೆ ಎಂದು ರಕ್ಷಣಾ ಖಾತೆ ಹೇಳಿದೆ. ಬಂಗಾಳ ಸರ್ಕಾರ ಕನ್ಯಾಶ್ರೀ, ಹಸಿರು ರಕ್ಷಣೆ -ಸ್ವಚ್ಛ ಪರಿಸರ ಹಾಗೂ ಜಲ ಧಾರೆ ಪರಿಕಲ್ಪನೆಯ ಪ್ರಸ್ತಾಪನೆಗಳನ್ನು ಸಲ್ಲಿಸಿತ್ತು. ವಿಶಿಷ್ಟ ಪರಿಕಲ್ಪನೆ ಟ್ಯಾಬ್ಲೋ ಆಯ್ಕೆಗೆ ಪ್ರಧಾನ ಮಾನದಂಡ. ಈ ಮೂರರಲ್ಲಿ ಯಾವುದೂ ವಿಶಿಷ್ಟವಲ್ಲ. ಕೇಂದ್ರ ಸರ್ಕಾರದ ಬೇಟಿ ಬಚಾವೋ-ಬೇಟಿ ಪಡಾವೋ, ರಾಷ್ಟ್ರೀಯ ಶುದ್ಧ ವಾಯು ಕಾರ್ಯಕ್ರಮ ಹಾಗೂ ಅಟಲ್ ಜಲ ಯೋಜನಾಗಳನ್ನು ಹೋಲುವಂಥದ್ದೇ ಆಗಿರುವುದರಿಂದ ರಾಜ್ಯದ ಪ್ರಸ್ತಾಪನೆಯನ್ನು ತಿರಸ್ಕರಿಸಲಾಗಿದೆ ಎನ್ನಲಾಗಿದೆ.