

ಅರಕಲಗೂಡು : ಅಡಿಕೆಬೊಮ್ಮನಹಳ್ಳಿ ಏತನೀರಾವರಿ ಯೋಜನೆಗೆ ಭೂಸ್ವಾಧೀನವಾಗಿರುವ 359 ಎಕರೆ ಪ್ರದೇಶ ಪೈಕಿ ಈಗಾಗಲೇ 169 ಎಕರೆಗೆ 1.41 ಕೋಟಿ ರೂ ಪರಿಹಾರ ನೀಡಿದ್ದು, ಬಾಕಿ 120 ಎಕರೆಯ 34 ಕೋಟಿ ರೂ. ಬಾಕಿಯನ್ನು ಸರ್ಕಾರದ ಜತೆ ಮಾತುಕತೆ ನಡೆಸಿ ಪರಿಹಾರ ಕೊಡಿಸುವ ಕೆಲಸ ಮಾಡಲಾಗುವುದು ಎಂದು ಶಾಸಕ ಎ.ಮಂಜು ತಿಳಿಸಿದರು.
ತಾಲೂಕಿನ ಅಡಿಕೆಬೊಮ್ಮನಹಳ್ಳಿ ಏತನೀರಾವರಿ ಕಾಲುವೆಗೆ ಶನಿವಾರ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈ ಯೋಜನೆ ವ್ಯಾಪ್ತಿಯಲ್ಲಿನ ಬಾಕಿ 23 ಗ್ರಾಮಗಳ ವಿಸ್ತೀರ್ಣ 120 ಎಕರೆ ಪ್ರದೇಶಕ್ಕೆ ಅನುದಾನ ಬಿಡುಗಡೆಯಾಗಬೇಕಿದೆ. 51ಎಕರೆ ವಿಸ್ತೀರ್ಣಕ್ಕೆ 24.80 ಕೋಟಿ ರೂ. ಬಿಡುಗಡೆಯಾದರೆ 8 ಗ್ರಾಮಗಳ ಇಂಡಿಕರಣವಾಗುತ್ತದೆ ಎಂದರು.
ಈ ಯೋಜನೆ ವ್ಯಾಪ್ತಿಯಲ್ಲಿ ಬರುವ 8,500 ಎಕರೆ ಅಚ್ಚುಕಟ್ಟು ನಿಗದಿಯಾಗಿದ್ದು, ಈ ಪೈಕಿ 6,987 ಎಕರೆ ಪ್ರದೇಶಕ್ಕೆ ನೀರು ಹರಿಯಲಿದೆ. 20 ಕಿಮೀ ನಾಲಾ ವ್ಯಾಪ್ತಿ ಇದ್ದು, ಬಾಕಿ 5.5 ಕಿ.ಮೀ. ಕಾಮಗಾರಿ ಆಗಬೇಕಿದೆ.ಪ್ರದೇಶದಲ್ಲಿ ರೈತರು ಅರೆನೀರಾವರಿ ಬೆಳೆಗಳನ್ನು ಕೈಗೊಳ್ಳುವುದು ಸೂಕ್ತವಾಗಿದೆ. ಭತ್ತ ಬೆಳೆಯಿಂದ ಹೆಚ್ಚಿನ ಆರ್ಥಿಕ ಲಾಭಗಳಿಸಲು ಸಾಧ್ಯವಿಲ್ಲ. ಬದಲಾಗಿ ಕಡಿಮೆ ನೀರು ಬಳಕೆ, ವೆಚ್ಚದಲ್ಲಿ ಕೈಗೊಳ್ಳುವ ಬೆಳೆಗಳನ್ನು ಮಾಡಿ ಸಬಲರಾಗಬೇಕಿದೆ ಎಂದು ಸಲಹೆ ಮಾಡಿದರು.
ಸರ್ಕಾರ ನಿಗದಿಯ ಯೋಜನೆಗಳಿಗೆ ಸೀಮಿತಗೊಂಡಿದ್ದ ಅನುದಾನವನ್ನು ಇತರ ಕಾರ್ಯಕ್ರಮಗಳಿಗೆ ಬಳಕೆ ಮಾಡಿಕೊಳ್ಳುತ್ತಿರುವ ಪರಿಣಾಮ ಬಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಆಗುತ್ತಿಲ್ಲ. ಇತ್ತೀಚೆಗೆ ಅನುದಾನ ಕೊಡುವ ಕೆಲಸ ಆರಂಭಗೊಳ್ಳುತ್ತಿದ್ದು, ಕಾವೇರಿ ನೀರಾವರಿ ನಿಗಮ ವ್ಯವಸ್ಥಾಪಕ ನಿರ್ದೇಶಕರ ಬಳಿ ಮಾತನಾಡಿ, ಬಾಕಿ ಪರಿಹಾರದ ಹಣವನ್ನು ಹಂತ ಹಂತವಾಗಿ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಇದುವರೆಗೂ ಪರಿಹಾರ ಸಿಗದ ರೈತರು ನಾಲೆಯ ನೀರನ್ನು ತಡೆಯುವ ಕೆಲಸವನ್ನು ಮಾಡಬಾರದು. ತಡವಾದರೂ ಹಣ ಬಂದೇ ಬರುತ್ತದೆ. ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಈ ಬಾರಿ ಉತ್ತಮ ಮಳೆಯಾಗುತ್ತಿರುವ ಪರಿಣಾಮ ಈ ಅಚ್ಚುಕಟ್ಟು ವ್ಯಾಪ್ತಿಯಲ್ಲಿನ ಕೆರೆಗಳಿಗೆ ನೀರು ಸಂಗ್ರಹವಾಗಿದೆ. ರೈತರ ಕೃಷಿ ಜಮೀನಿನಲ್ಲಿ ಸಾಗಿರುವ ನಾಲೆಯಲ್ಲಿ ಗಿಡಗಂಟಿಗಳು ಬೆಳೆದಿದ್ದು, ಸ್ವಚ್ಛಗೊಳಿಸಿ ನೀರು ಸರಾಗವಾಗಿ ಮುಂದೆ ಸಾಗುವಂತೆ ಎಚ್ಚರಿಕೆ ವಹಿಸಬೇಕೆಂದು ನೀರಾವರಿ ಇಲಾಖೆ ಇಂಜಿನಿಯರ್‌ಗಳಿಗೆ ಶಾಸಕರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ತಾಪಂ ಮಾಜಿ ಅಧ್ಯಕ್ಷ ನರಸೇಗೌಡ, ಮುಖಂಡರಾದ ಕೃಷ್ಣೇಗೌಡ, ಹಿರಿಯಣ್ಣ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪುಟ್ಟರಾಜು ಇತರರಿದ್ದರು.