

Mahua Moitra: ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ವಿರುದ್ಧದ ಪ್ರಶ್ನೆ ಕೇಳಲು ಹಣ ಮತ್ತು ಉಡುಗೊರೆ ಪಡೆದು, ಲೋಕಸಭಾ ಸಂಸದ ಲಾಗಿನ್ ಐಡಿ ದುರುಪಯೋಗ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಸಿ ಸಿಬಿಐ ಅಧಿಕಾರಿಗಳು ಸೋಮವಾರ ಲೋಕಪಾಲ್ಗೆ ವರದಿ ಸಲ್ಲಿಸಿದ್ದಾರೆ.
ಲೋಕಪಾಲರ ಉಲ್ಲೇಖದ ಮೇರೆಗೆ ಭ್ರಷ್ಟಾಚಾರ ತಡೆ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಸಂಸದೀಯ ಸವಲತ್ತುಗಳಲ್ಲಿ ರಾಜಿ ಮಾಡಿಕೊಂಡಿದ್ದಕ್ಕಾಗಿ ಮೊಯಿತ್ರಾ ಮತ್ತು ದುಬೈ ಮೂಲದ ಉದ್ಯಮಿ ಹಿರಾನಂದಾನಿ ವಿರುದ್ಧ ಕಳೆದ ವರ್ಷ 2024 ಮಾರ್ಚ್ 21 ರಂದು ಎಫ್ಐಆರ್ ದಾಖಲಿಸಲಾಗಿತ್ತು.
ಪ್ರಕರಣ ಸಂಬಂಧ ಒಂದು ವರ್ಷಗಳ ಕಾಲ ತನಿಖೆ ನಡೆದು ಇಂದು ಲೋಕಪಾಲಕ್ಕೆ ವರದಿ ಸಲ್ಲಿಸಲಾಗಿದೆ. ಮುಂದಿನ ಕ್ರಮದ ಬಗ್ಗೆ ವರದಿ ಬಗ್ಗೆ ಲೋಕಪಾಲ ನಿರ್ಧರಿಸುತ್ತದೆ ಎಂದು ಸಿಬಿಐ ಅಧಿಕಾರಿಗಳು ಹೇಳಿದ್ದಾರೆ.
ಪ್ರಕರಣದ ಹಿನ್ನೆಲೆ
ಮಹುವಾ ಮೊಯಿತ್ರಾ ಸಂಸತ್ನಲ್ಲಿ ಪ್ರಶ್ನೆಗಳನ್ನು ಕೇಳಲು ನಗದು ಹಣ ಮತ್ತು ಬೆಲೆ ಬಾಳುವ ಉಡುಗೊರೆಯನ್ನ ಪಡೆದಿದ್ದಾರೆ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಲೋಕಸಭೆಯಲ್ಲಿ ಆರೋಪಿಸಿದ್ದರು. ಜೊತೆಗೆ ಮಹುವಾ ವಿರುದ್ಧ ಕ್ರಮಕೈಗೊಳ್ಳುವಂತೆ ಸ್ಪೀಕರ್ ಓಂ ಬಿರ್ಲಾಗೆ ದೂರು ನೀಡಿದ್ದರು.
ನಿಶಿಕಾಂತ್ ದುಬೆ ಆರೋಪಕ್ಕೆ ಸಂಬಂಧಿಸಿದಂತೆ, ಪ್ರಧಾನಿ ಮೋದಿಗೆ ಇರಿಸು ಮುರಿಸು ಉಂಟು ಮಾಡಲು, ಮಹುವಾ ಉದ್ಯಮಿ ಗೌತಮ್ ಅದಾನಿಯನ್ನು ಗುರಿಯಾಗಿಸಿ ದಾಳಿ ಮಾಡಿದ್ದರು. ಮಹುವಾ ನೀಡಿದ್ದ ಸಂಸತ್ ಇ-ಮೇಲ್ ಐಡಿ ತಾವು ಕಳುಹಿಸುತ್ತಿದ್ದ ಪ್ರಶ್ನೆಗಳನ್ನು ಕೇಳುತ್ತಿದ್ದರೆಂದು ಆರೋಪಿಸಿ ಹಿರಾನಂದನಿ ಪ್ರಮಾಣ ಪತ್ರ ಸಲ್ಲಿಕೆ ಮಾಡಿದ್ದರು.
ಪ್ರಕರಣಕ್ಕೆ ಸಂಬಂಪಟ್ಟಂತೆ 2024ರಲ್ಲಿ ಸ್ಪೀಕರ್, ಸಂಸದೀಯ ನೀತಿ ಸಮಿತಿ ರಚಿಸಿ ಪ್ರಕರಣ ಸಂಬಂಧ ವಿಚಾರಣೆ ನಡೆಸಿ ವರದಿ ನೀಡುವಂತೆ ಹೇಳಿದ್ದರು. ವಿಚಾರಣೆ ವೇಳೆ ಮಹುವಾ ಮತ್ತು ಸಮಿತಿ ಸದಸ್ಯರ ನಡುವೆ ಹೈಡ್ರಾಮ ನಡೆದು ಮುಂದೆ ಮಹುವಾರನ್ನ ಲೋಕಸಭೆಯಿಂದ ಉಚ್ಛಾಟನೆ ಮಾಡಿ, ಈ ಬಗ್ಗೆ ಸಿಬಿಐ ತನಿಖೆಗೆ ಸಮಿತಿ ಶಿಫಾರಸು ಮಾಡಿತ್ತು. ಆ ವರದಿ ಶಿಫಾರಸು ಆಧರಿಸಿ ಮಹುವಾ ಮೊಯಿತ್ರಾರನ್ನು ಲೋಕಸಭೆಯಿಂದ ಉಚ್ಛಾಟಿಸಲಾಗಿತ್ತು. ಈ ಉಚ್ಛಾಟನೆಯನ್ನು ಮಹುವಾ ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸಿದ್ದು ವಿಚಾರಣೆ ನಡೆಯುತ್ತಿದೆ. 2024ರ ಲೋಕಸಭೆ ಚುನಾವಣೆಯಲ್ಲಿ ಕೃಷ್ಣನಗರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಮಹುವಾ ಮೊಯಿತ್ರಾ ಮತ್ತೆ ಗೆಲುವು ಸಾಧಿಸಿದ್ದಾರೆ. (ಏಜೆನ್ಸೀಸ್)