ಅಭಿವೃದ್ಧಿ ಕ್ರೆಡಿಟ್‌ಗಾಗಿ ಜಟಾಪಟಿ; ಡಾ.ಸಿಎನ್‌ಎ ಮಾತಿಗೆ ಶಾಸಕಿ ಅನಿತಾ ಆಕ್ಷೇಪ

21 harohalli - new taluk - Anitha and DR CNA
Published on

ಹಾರೋಹಳ್ಳಿ: ರಾಮನಗರ ಜಿಲ್ಲೆಯ ಹಾರೋಹಳ್ಳಿ ನೂತನ ತಾಲೂಕು ಕೇಂದ್ರ ಉದ್ಘಾಟನಾ ಸಮಾರಂಭದ ವೇದಿಕೆಯಲ್ಲೇ ಉಸ್ತುವಾರಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಹಾಗೂ ಶಾಸಕಿ ಅನಿತಾ ಕುಮಾರಸ್ವಾಮಿ ನಡುವೆ ಅಭಿವೃದ್ಧಿ ವಿಚಾರವಾಗಿ ಜಟಾಪಟಿ ನಡೆದ ಪ್ರಸಂಗ ನಡೆಯಿತು.

ಸಚಿವ ಅಶ್ವತ್ಥನಾರಾಯಣ ಭಾಷಣ ಮಾಡುತ್ತ ಹಾರೋಹಳ್ಳಿ ನೂತನ ತಾಲೂಕು ಮಾಡಿದ್ದು ನಾವು ಎನ್ನುತ್ತಿದ್ದಂತೆ ವೇದಿಕೆಯಲ್ಲಿದ್ದ ಅನಿತಾ ಸಿಡಿಮಿಡಿಗೊಂಡು ಆಕ್ಷೇಪ ವ್ಯಕ್ತಪಡಿಸಿದರಲ್ಲದೆ, ಅವೆಲ್ಲವೂ ಕುಮಾರಸ್ವಾಮಿ ಕಾಲದಲ್ಲಿಯೇ ಆಗಿ ಹೋಗಿತ್ತು ಎಂದರು. ಮೇಡಂ ನೀವು ಹೇಳಬೇಕಿರುವುದನ್ನೆಲ್ಲ ಭಾಷಣದಲ್ಲಿ ಹೇಳಿ ಎಂದು ಸಚಿವರು ಸಮಾಧಾನಪಡಿಸಿದರು.

ಶಾಸಕಿ ಅನಿತಾ ಕುಮಾರಸ್ವಾಮಿ ಮಾತನಾಡಿ, ಕ್ಷೇತ್ರದ ಶಾಸಕಿಯಾಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಬೇಕಾಗಿದ್ದ ನನ್ನನ್ನು ಕಚೇರಿ ಉದ್ಘಾಟನೆ ಮಾಡಿ, ಟೇಪ್ ಕಟ್ ಮಾಡಿ ಆದ ಮೇಲೆ ಕಾಟಾಚಾರಕ್ಕೆ ಎನ್ನುವಂತೆ ಕರೆದಿದ್ದಾರೆ ಅನ್ನಿಸುತ್ತೆ. ಈ ರೀತಿ ಆಗುತ್ತೆ ಎಂದು ಮೊದಲೇ ಗೊತ್ತಿತ್ತು ಎಂದು ಕೋಪದಿಂದಲೇ ಹೇಳಿದರು.

ಹಾರೋಹಳ್ಳಿ ತಾಲೂಕು ಆಗುವಲ್ಲಿ ನನ್ನ ಶ್ರಮ ಹೆಚ್ಚಿದೆ. ಕುಮಾರಸ್ವಾಮಿ ಅವರ ಕಾಲದಲ್ಲಿ ಆದೇಶ ಆಗಿತ್ತು. ನಂತರ ನಾನು ಫಾಲೋಅಪ್ ಮಾಡಿ, ಅಶೋಕ್ ಅವರಿಗೆ ಸದನದಲ್ಲಿ ಪ್ರಶ್ನೆ ಮಾಡಿದೆ. ಅದಾದ ನಂತರ ಫೈನಲ್ ಆಗಿ ಅಧಿಸೂಚನೆ ಹೊರಡಿಸಲಾಯಿತು ಎಂದು ಅನಿತಾ ತಿರುಗೇಟು ನೀಡಿದರು.

ಅಭಿವೃದ್ಧಿಗೆ ಎಚ್‌ಡಿಕೆ ಕಾರಣ: ಕುಮಾರಸ್ವಾಮಿ ಅವರು ಶಾಸಕರಾದ ನಂತರವೇ ಇಲ್ಲಿ ಅಭಿವೃದ್ಧಿ ಆಗಿದೆ. ರಾಮನಗರ ಸಿಟಿಗೆ ಕುಡಿಯುವ ನೀರಿನ ಯೋಜನೆ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಪ್ರಸ್ತಾಪ ಮಾಡಿದರು. ಆದರೆ, ಅಶ್ವತ್ಥನಾರಾಯಣ ಅವರ ಸರ್ಕಾರ ಬರುವ ಮೊದಲೇ ಮುಕ್ಕಾಲು ಭಾಗ ಕೆಲಸ ಆಗಿಯಾಗಿತ್ತು. ಇಂದಿನ ಸಮಾರಂಭಕ್ಕೆ ಎಚ್‌ಡಿಕೆ ಬರಬೇಕಿತ್ತು. ನಾನೂ ಬರುವಂತೆ ಒತ್ತಾಯ ಮಾಡಿದ್ದೆ. ಆದರೆ, ಅವರು ಬರಲಿಲ್ಲ. ಅವರೇನಾದರೂ ಬಂದಿದ್ದರೆ ಇಲ್ಲಿ ಯಾರೂ ಹೆಚ್ಚು ಮಾತನಾಡಲು ಅವಕಾಶವೇ ಇರುತ್ತಿರಲಿಲ್ಲ ಎಂದು ಅನಿತಾ ಹೇಳಿದರು.

ಪ್ರಚಾರ ನಮಗೆ ಬೇಕಿಲ್ಲ: ಅಭಿವೃದ್ಧಿಯಲ್ಲಿ ಪ್ರಚಾರ ಪಡೆಯುವುದು ನಮಗೆ ಬೇಕಿಲ್ಲ. ಜನರಿಗೆ ಎಲ್ಲವೂ ಗೊತ್ತಿದೆ. ಈ ಹಿಂದೆ ರಾಮನಗರ ಹೇಗಿತ್ತು, ಈಗ ಹೇಗಿದೆ? ಸರ್ಕಾರಿ ಬಿಲ್ಡಿಂಗ್‌ಗಳು ತಾವೇ ಎದ್ದುಬಿಟ್ಟವಾ? ಇದೆಲ್ಲವನ್ನೂ ಮಾಡಿದ್ದು ಕುಮಾರಸ್ವಾಮಿ ಅವರಲ್ಲವೇ? ಸಚಿವ ಅಶ್ವತ್ಥನಾರಾಯಣ ಅವರು ಮೊದಲು ಮಲ್ಲೇಶ್ವರಕ್ಕೆ ಹೋಗಿ ಅಭಿವೃದ್ಧಿ ಮಾಡಲಿ. ಕಾಡುಮಲ್ಲೇಶ್ವರ ದೇವಾಲಯವನ್ನು ಅಭಿವೃದ್ಧಿಪಡಿಸಲಿ. ಆ ಮೇಲೆ ರಾಮನಗರದಲ್ಲಿ ರಾಮಮಂದಿರ ನಿರ್ಮಾಣ ಮಾಡಲಿ. ಮುಂದಿನ ಚುನಾವಣೆಯಲ್ಲಿ ನಿಮ್ಮ ಸರ್ಕಾರ ಬರುತ್ತದಾ ಮೊದಲು ನೋಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ನನ್ನ ಭಾಷಣದ ವೇಳೆ ಸಚಿವರು ಇರಬೇಕಿತ್ತು, ಅವರಿಗೆ ಭಯ ಕಾಡಿರಬೇಕು. ಅದಕ್ಕೆ ಅರ್ಧಕ್ಕೆ ಎದ್ದು ಹೋದರು ಎಂದು ಅನಿತಾ ಕುಟುಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net