

ರಾಮನಗರ: ಎರಡು ಪಕ್ಷಗಳ ಕಾರ್ಯಕರ್ತರ ಮಧ್ಯೆ ಗಲಾಟೆಯಾಗಿ ಮಾಜಿ ಶಾಸಕರೊಬ್ಬರ ಕಾರಿನ ಮೇಲೆ ಕಲ್ಲು ತೂರಾಟವಾದ ಪ್ರಸಂಗವೂ ನಡೆದಿದೆ. ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ಉದ್ಘಾಟನೆ ವಿಚಾರವಾಗಿ ಈ ಗಲಾಟೆ ನಡೆದಿದೆ.
ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಕಾಮಸಾಗರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಅವರು ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ಉದ್ಘಾಟನೆಗೆ ಬಂದಾಗ ಜೆಡಿಎಸ್ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದರು.
ಹೀಗೆ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ಉದ್ಘಾಟನೆ ವಿಚಾರವಾಗಿ ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದೆ. ಜೆಡಿಎಸ್ ಕಾರ್ಯಕರ್ತರ ವಿರೋಧದ ನಡುವೆ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿದ್ದರು.
ಶಾಸಕ ಮಂಜುನಾಥ ಹೆಸರು ಕೊನೆಯಲ್ಲಿ ಹಾಕಿದ್ದಾರೆ, ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಪಾಲಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದ ಜೆಡಿಎಸ್ ಕಾರ್ಯಕರ್ತರು ಮಾಜಿ ಶಾಸಕ ಬಾಲಕೃಷ್ಣ ಕಾರ್ಯಕ್ರಮ ಮುಗಿಸಿ ಹೋಗುವಾಗ ಕಾರಿನ ಮೇಲೆ ಕಲ್ಲೆಸೆದಿದ್ದರು. ಪರಿಣಾಮವಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿದ್ದು, ಸ್ಥಳಕ್ಕೆ ಕೂದುರು ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.