

ಬೆಂಗಳೂರು: ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಎಂಎಲ್ಸಿ ನಾರಾಯಣಸ್ವಾಮಿ ಮತ್ತು ಮನೋಹರ್ ನಡುವೆ ಶುಕ್ರವಾರ ಮಧ್ಯಾಹ್ನ ಗಲಾಟೆ ನಡೆದಿದ್ದು, ಉಭಯ ನಾಯಕರು ಕೈ-ಕೈ ಮಿಲಾಯಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ
ಕಾರ್ಯಾಧ್ಯಕ್ಷರುಗಳ ಸಮ್ಮುಖದಲ್ಲಿಯೇ ಈ ಗಲಾಟೆ ನಡೆದಿದ್ದು, ಮಾಧ್ಯಮದವರು ಸ್ಥಳಕ್ಕೆ ಹೋಗುತ್ತಿದ್ದಂತೆ ಕಚೇರಿಯ ಬಾಗಿಲನ್ನು ಕಾಂಗ್ರೆಸ್ ಮುಖಂಡರು ಬಂದ್ ಮಾಡಿಕೊಂಡರು. ಕೆಲ ಸಮಯದ ಬಳಿಕ ವಿಧಾನ ಪರಿಷತ್ ಸದಸ್ಯ ನಾರಾಯಣಸ್ವಾಮಿ ಅವರು ಕೆಪಿಸಿಸಿ ಕಚೇರಿಯಿಂದ ಹೊರನಡೆದರು. ಇದನ್ನೂ ಓದಿರಿ ಶಿವಮೊಗ್ಗದಲ್ಲಿ ಶವಗಳ ಮೇಲೆಯೇ ಓಡಾಡಿದ ಜನ… ಬೆಚ್ಚಿಬೀಳಿಸುತ್ತೆ ಸ್ಫೋಟದ ಭೀಕರತೆ
ಈ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಯಾವುದೇ ಗಲಾಟೆ ನಡೆದಿಲ್ಲ. ಇಂದು ಬೆಳಗ್ಗೆ ಪಂಚಾಯಿತಿ ಸದಸ್ಯರಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಬಿಜೆಪಿ ಅವರು ನಮ್ಮ ಸದಸ್ಯರನ್ನ ಸೆಳೆಯುವ ಕೆಲಸ ಮಾಡಿದ್ದರು. ಆ ವಿಚಾರವಾಗಿ ಜೋರುಜೋರು ಮಾತು ನಡೆಯಿತು. ಆದರೆ ಯಾರೂ ಯಾರ ಮೇಲೂ ಹಲ್ಲೆ ಮಾಡಿಲ್ಲ. ನಾವು ಬಾಗಿಲು ಹಾಕಿ ಪಕ್ಷದ ವಿಚಾರ ಚರ್ಚೆ ಮಾಡಿದ್ದೇವೆ. ಚರ್ಚೆಯನ್ನ ಹೊರತುಪಡಿಸಿ ಬೇರೆ ಏನು ಆಗಿಲ್ಲ ಎನ್ನುವ ಮೂಲಕ ಘಟನೆಯನ್ನ ಮುಚ್ಚಿಹಾಕಲು ಯತ್ನಿಸಿದರು.