

ಬೆಂಗಳೂರು: ಕರೊನಾ ವೈರಸ್ ಕ್ಷಣಕ್ಷಣಕ್ಕೂ ಹೆಚ್ಚುತ್ತಿರುವ ಮಧ್ಯೆಯೇ ಕ್ವಾರಂಟೈನ್ ನಿಯಮ ಉಲ್ಲಂಘನೆ ಮಾಡುತ್ತಿರುವವರ ಸಂಖ್ಯೆಯೂ ಅದೇ ವೇಗದಲ್ಲಿ ಹೆಚ್ಚುತ್ತಲೇ ಸಾಗಿದೆ.
ಕರೊನಾ ಸೋಂಕು ಇರುವ ಶಂಕೆ ವ್ಯಕ್ತವಾದ ಸಂದರ್ಭದಿಂದ ಹಿಡಿದು, ಸೋಂಕು ಗುಣಮುಖರಾಗಿ ಮನೆಗೆ ಹೋದ ಮೇಲೆಯೂ 14 ದಿನಗಳ ಮಟ್ಟಿಗೆ ಕ್ವಾರಂಟೈನ್‌ನಲ್ಲಿ ಇರುವಂತೆ ಆರೋಗ್ಯ ಸಿಬ್ಬಂದಿ ಹೇಳುತ್ತಲೇ ಇರುತ್ತಾರೆ. ನಿಯಮದ ಪ್ರಕಾರ ಸೋಂಕು ಶಂಕಿತರು, ರೋಗಿಗಳ ಸಂಪರ್ಕ ಹೊಂದಿರುವವರು, ವಿದೇಶ ದಿಂದ ಬಂದವರು, ಅನ್ಯ ರಾಜ್ಯಗಳಿಗೆ ಪ್ರಯಾಣ ಮಾಡಿದ ಇತಿಹಾಸ ಹೊಂದಿದ್ದವರು, ಮನೆ ಆರೈಕೆಗೆ ಒಳಗಾದವರು ಹಾಗೂ ಗುಣಮುಖರಾಗಿ ಮನೆಗೆ ತೆರಳಿದವರು ಕಡ್ಡಾಯವಾಗಿ ಮನೆ ಕ್ವಾರಂಟೈನ್‌ಗೆ ಒಳಗಾಗಬೇಕು. ಆದರೆ ಇದರ ನಡುವೆಯೂ ಎಷ್ಟೋ ಮಂದಿ ತಮಗೂ ಅದಕ್ಕೂ ಸಂಬಂಧವಿಲ್ಲ ಎಂದುಕೊಂಡು ಎಲ್ಲೆಡೆ ಓಡಾಡುತ್ತ ಇತರರಿಗೂ ಆತಂಕ ಸೃಷ್ಟಿಸುತ್ತಾರೆ.
ಆರೋಗ್ಯ ಇಲಾಖೆಯ ಗಮನಕ್ಕೆ ಬಂದಿರುವಂತೆ ಇಲ್ಲಿಯವರೆಗೆ ಕರ್ನಾಟಕದಲ್ಲಿ 3,78,299 ಮಂದಿ ಹೋಂ ಕ್ವಾರಂಟೈನ್ ನಿಯಮ ಉಲ್ಲಂಘಿಸಿ, ಸಾರ್ವಜನಿಕ ಸ್ಥಳಗಳಲ್ಲಿ ಓಡಾಟ ನಡೆಸಿದ್ದಾರೆ.
ಹೋಂ ಕ್ವಾರಂಟೈನ್ ನಿಯಮ ಉಲ್ಲಂಘಿಸಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳುವ ಅವಕಾಶ ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಆರೋಗ್ಯ ಇಲಾಖೆಗೆ ನೀಡಲಾಗಿದೆ. ಏಕೆಂದರೆ ಈ ರೀತಿ ಓಡಾಟ ನಡೆಸಿದ್ದಲ್ಲಿ ಕರೊನಾ ವೈರಸ್ ಇತರರಿಗೂ ತಗುಲುವ ಸಾಧ್ಯತೆ ಹೆಚ್ಚು ಇರುವ ಕಾರಣ, ಇದು ಅತ್ಯಂತ ಅಪಾಯಕಾರಿಯಾದದ್ದು.
ಅಪಾಯದ ವರ್ಗದಲ್ಲಿರುವವರನ್ನು ಮಾತ್ರ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಿ, ಮನೆ ಕ್ವಾರಂಟೈನ್‌ಗೆ ಸೂಚಿಸಲಾಗುತ್ತದೆ. ಕೋವಿಡ್ ಒಬ್ಬರಿಂದ ಒಬ್ಬರಿಗೆ ಹರಡುವುದರಿಂದ ಕ್ವಾರಂಟೈನ್ ಅವಧಿಯಲ್ಲಿ ಮನೆಯಿಂದ ಹೊರಗಡೆ ಬರುವಂತಿಲ್ಲ. ಕುಟುಂಬದ ಸದಸ್ಯರಿಂದಲೂ ಅಂತರ ಕಾಯ್ದುಕೊಂಡು, ಪ್ರತ್ಯೇಕ ಕೊಠಡಿಯಲ್ಲಿ ವಾಸ ಮಾಡಬೇಕು.
ಇಷ್ಟೆಲ್ಲಾ ಹೇಳಿದ ಮೇಲೂ ಜನರು ಮಾತು ಕೇಳದ ಕಾರಣ, ಅವರ ಮೇಲೆ ನಿಗಾ ಇಡುವುದೇ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ನಡುವೆಯೇ ಪದೇ ಪದೇ ನಿಯಮಗಳನ್ನು ಉಲ್ಲಂಘಿಸಿದ 1,997 ಮಂದಿ ಮೇಲೆ ಎಫ್‌ಐಆರ್ ದಾಖಲು ಮಾಡಿಕೊಳ್ಳಲಾಗಿದೆ. ಕೆಲವರಿಗೆ ಎಚ್ಚರಿಕೆ ನೀಡಲಾಗಿದೆ.
ಕ್ವಾರಂಟೈನ್ ನಿಯಮ ಉಲ್ಲಂಘನೆಯಾಗಿರುವ ಟಾಪ್ 4 ಜಿಲ್ಲೆಗಳು
ಬಳ್ಳಾರಿ- 11,203
ರಾಯಚೂರು- 9598
ಬೆಳಗಾವಿ-9.203
ಕಲಬುರಗಿ-8,968
ಮೈಸೂರು- 7,648
ಎಫ್‌ಐಆರ್ ದಾಖಲಾಗಿರುವವರ ಅತ್ಯಧಿಕ ಸಂಖ್ಯೆ
ಬೆಂಗಳೂರು ಗ್ರಾಮಾಂತರ - 154
ಬೆಳಗಾವಿ - 131
ಕಲಬುರ್ಗಿ- 108
ವಿಜಯಪುರ- 104
ಬಾಗಲಕೋಟೆ- 102
ದಾವಣಗೆರೆ- 98
ಚಿತ್ರದುರ್ಗ- 82
ಬೀದರ್- 75,
ರಾಯಚೂರು- 73
ತುಮಕೂರು- 65