ಇಲ್ಲೊಮ್ಮೆ ನೋಡಿ... ಕ್ವಾರಂಟೈನ್​ ನಿಯಮ ಬದಲಾಯ್ತು, ಮೊದಲಿನಂತಿಲ್ಲ ಕರೊನಾ ಪರೀಕ್ಷೆ!

corona
Published on

ಬೆಂಗಳೂರು: ಹೊರ ರಾಜ್ಯಗಳಿಂದ ಕರ್ನಾಟಕಕ್ಕೆ ಬರುವವರಿಗೆ ಕರೊನಾ ತಪಾಸಣೆ ಹಾಗೂ ಕ್ವಾರಂಟೈನ್​ ನಿಯಮವನ್ನು ಮತ್ತೆ ಬದಲಿಸಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊಸ ಮಾರ್ಗಸೂಚಿ ಪ್ರಕಟಿಸಿದೆ.

ಯಾವುದೇ ರಾಜ್ಯಗಳಿಂದ ಬರುವ ಪ್ರತಿಯೊಬ್ಬ ಪ್ರಯಾಣಿಕರಿಗೂ ಸೇವಾ ಸಿಂಧು ವೆಬ್​ಸೈಟ್​ನಲ್ಲಿ ಹೆಸರು ನೋಂದಣಿ ಕಡ್ಡಾಯಗೊಳಿಸಿರುವ ಇಲಾಖೆ, ಕೆಲವರಿಗೆ ಕ್ವಾರಂಟೈನ್​ ವಿನಾಯಿತಿ ನೀಡಿದೆ. ಮಹಾರಾಷ್ಟ್ರದಿಂದ ಬರುವವರಿಗೆ ಮಾತ್ರ 7 ದಿನ ಸಾಂಸ್ಥಿಕ ಕ್ವಾರಂಟೈನ್​ ಮತ್ತು 7 ದಿನ ಹೋಂ ಕ್ವಾರಂಟೈನ್​ಗೆ ಸೂಚಿಸಿದ್ದು, ಇತರ ರಾಜ್ಯದಿಂದ ಬರುವವರಿಗೆ ಸಾಂಸ್ಥಿಕ ಕ್ವಾರಂಟೈನ್​ ಇರುವುದಿಲ್ಲ. ಅದರ ಡಿಟೇಲ್ಸ್ ಇಲ್ಲಿದೆ.

ಮಹಾರಾಷ್ಟ್ರ ಪ್ರಯಾಣಿಕರು: ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವ ಯಾವುದೇ ಪ್ರಯಾಣಿಕರನ್ನು ತಪ್ಪದೇ 7 ದಿನಗಳ ಸಂಸ್ಥಿಕ ಕ್ವಾರಂಟೈನ್​ ಹಾಗೂ 7 ದಿನ ಹೋಂ ಕ್ವಾರಂಟೈನ್​ಗೆ ಒಳಪಡಿಸಬೇಕು. ಈ ಅವಧಿಯಲ್ಲಿ ರೋಗ ಲಕ್ಷಣ ಕಂಡುಬಂದವರಿಗೆ ಪರೀಕ್ಷೆ ನಡೆಸಬೇಕು. 50 ವರ್ಷ ಮೇಲ್ಪಟ್ಟ ವ್ಯಕ್ತಿಗಳು ಹಾಗೂ ಯಾವುದೇ ಆರೋಗ್ಯ ಸಮಸ್ಯೆ (ಎಚ್​ಐವಿ, ಕ್ಷಯ, ಕ್ಯಾನ್ಸರ್​, ಪಾರ್ಶ್ವವಾಯು, ಡಯಾಲಿಸಿಸ್​, ಅಂಗಾಂಗ ಕಸಿ, ಮಧುಮೇಹ, ಅಧಿಕ ರಕ್ತದೊತ್ತಡ ಇತರ ಕಾಯಿಲೆ) ಹೊಂದಿರುವವರನ್ನು ಆಗಮಿಸಿದ 5ರಿಂದ 7ನೇ ದಿನದ ನಡುವೆ ಒಮ್ಮೆ ಪರೀಕ್ಷಿಸಬೇಕು.

ಕ್ವಾರಂಟೈನ್​ ವಿನಾಯಿತಿ: ಗರ್ಭಿಣಿಯರು, 10 ವರ್ಷದ ಒಳಗಿನ ಮಕ್ಕಳು, 60 ವರ್ಷ ಮೇಲ್ಪಟ್ಟ ಹಿರಿಯರು, ಗಂಭೀರ ಕಾಯಿಲೆ, ಮನೋರೋಗ ಹೊಂದಿರುವವರನ್ನ, ಐಸಿಎಂಆರ್​ ಅನುಮೋದಿತ ಯಾವುದೇ ಪ್ರಯೋಗಾಲಯದಿಂದ ಎರಡು ದಿನಗಳ ಹಿಂದಷ್ಟೇ ನೆಗೆಟಿವ್​ ಕೋವಿಡ್​ ಪರೀಕ್ಷಾ ವರದಿ ಹೊಂದಿರುವ ವ್ಯಕ್ತಿಗೆ ಸಾಂಸ್ಥಿಕ ಕ್ವಾರಂಟೈನ್​ನಿಂದ ವಿನಾಯಿತಿ ನೀಡಲಾಗಿದೆ. ಇವರು 14 ದಿನಗಳ ಹೋಂ ಕ್ವಾರಂಟೈನ್​ಗೆ ಒಳಪಡಬೇಕು.

ಇತರ ರಾಜ್ಯಗಳ ಪ್ರಯಾಣಿಕರು: ಮಹಾರಾಷ್ಟ್ರ ಹೊರತುಪಡಿಸಿ ಇತರ ರಾಜ್ಯಗಳಿಂದ ಬರುವವರಿಗೆ 14 ದಿನಗಳ ಹೋಂ ಕ್ವಾರಂಟೈನ್​ಗೆ ಒಳಪಡಿಸಲಾಗುವುದು. ಒಂದು ವೇಳೆ ದೊಡ್ಡ ಕುಟುಂಬವಿದ್ದು, ಮನೆ ಚಿಕ್ಕದಾಗಿದ್ದರೆ, ಕೊಳಗೇರಿ ಅಥವಾ ಕಿಕ್ಕಿರಿದ ಪ್ರದೇಶಗಳ ನಿವಾಸಿಯಾಗಿದ್ದು ಮನೆಯಲ್ಲಿ ಪ್ರತ್ಯೇಕ ಕ್ವಾರಂಟೈನ್​ ವ್ಯವಸ್ಥೆ ಸಾಧ್ಯವಾಗದವರನ್ನು ಮಾತ್ರ ಸಾಂಸ್ಥಿಕ ಕ್ವಾರಂಟೈನ್​ಗೆ ಸೂಚಿಸಬಹುದು.

ವ್ಯಾಪಾರಿಗಳಿಗೆ 7 ದಿನಗಳ ಅವಕಾಶ: ವ್ಯಾಪಾರ ಹಾಗೂ ವ್ಯವಹಾರ ಸಂಬಂಧ ಹೊರ ರಾಜ್ಯಗಳಿಂದ ಆಗಮಿಸುವ ಪ್ರಯಾಣಿಕರು ತಮ್ಮ ವಿಳಾಸದೊಂದಿಗೆ ತಾವು ಭೇಟಿ ಮಾಡುವವರ ಸಂಪೂರ್ಣ ಮಾಹಿತಿ ನೀಡಬೇಕು. ಜತೆಗೆ ಆಗಮನದ ದಿನಾಂಕದಿಂದ 7 ದಿನಗಳ ನಂತರ ಇರಲು ಅವಕಾಶವಿಲ್ಲ. ಹೀಗಾಗಿ ವಾಪಸ್​ ತೆರಳಲು ಮುಂಗಡ ಟಿಕೆಟ್​ ಸಹ ಹೊಂದಿರಬೇಕು. ಒಂದು ವೇಳೆ ವ್ಯಾಪಾರ ಸಂಬಂಧ ರಸ್ತೆ ಮಾರ್ಗವಾಗಿ ಬಂದಲ್ಲಿ ಸಂದರ್ಶಕರ ವಿಳಾಸ ಸೇರಿ ವಿವರವಾದ ಮಾಹಿತಿ ಒದಗಿಸಬೇಕು. ಕೇವಲ 48 ಗಂಟೆಗಳ ಅಲ್ಪಾವಧಿಗೆ ಬರುವವರಿಗೆ ಕೋವಿಡ್​ ಪರೀಕ್ಷೆ ಹಾಗೂ ತಪಾಸಣೆ ಎರಡೂ ಇರುವುದಿಲ್ಲ. ಬದಲಿಗೆ ಅವರು ಮಾಸ್ಕ್​, ಸ್ಯಾನಿಟೈಸರ್​ ಬಳಕೆ ಸೇರಿ ಶಿಷ್ಟಾಚಾರಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಒಂದು ವೇಳೆ 48 ಗಂಟೆಗೂ ಹೆಚ್ಚು ಕಾಲ ಉಳಿಯುವವರಿಗೆ ಕೋವಿಡ್​ ಪರೀಕ್ಷೆ ನಡೆಸಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net