

ಜಮ್ಮು: ಕರೊನಾ ಸೋಂಕಿತರು, ಶಂಕಿತರು ಹಲವು ದಿನಗಳ ಕಾಲ ಎಲ್ಲಿಯೂ ಹೊರ ಹೋಗದೇ ಒಂದೇ ಕಡೆ ಕುಳಿತಿರುವುದು ಎಂದರೆ ಹಲವರಿಗೆ ಇದು ನುಂಗಲಾಗದ ತುತ್ತು. ಆದರೂ ಸುರಕ್ಷತೆಯ ದೃಷ್ಟಿಯಿಂದ ಇದು ಅನಿವಾರ್ಯ.
ಅದೇ ಕಾರಣಕ್ಕೆ ಹಲವಾರು ಕಡೆಗಳಲ್ಲಿ ಕ್ವಾರಂಟೈನ್ ಕೇಂದ್ರಗಳಲ್ಲಿ ಹೊಸ ಹೊಸ ಬಗೆಯ ಆವಿಷ್ಕಾರಗಳು ನಡೆಯುತ್ತಲೇ ಇವೆ. ನೃತ್ಯ, ಸಂಗೀತ, ವಿವಿಧ ಬಗೆಯ ಆಟೋಟಗಳು ಮೂಲಕ ಕ್ವಾರಂಟೈನ್ ವಾಸಿಗಳು ಸಮಯ ಕಳೆಯುತ್ತಿದ್ದಾರೆ.
ಅಂಥದ್ದೇ ಒಂದು ಹೊಸ ಪ್ರಯೋಗ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಗಮನ ಸೆಳೆದಿದೆ. ಇದು ನಿಖರವಾಗಿ ಎಲ್ಲಿಯ ಕ್ವಾರಂಟೈನ್ ಸೆಂಟರ್ ಎಂಬ ಮಾಹಿತಿ ಇಲ್ಲವಾದರೂ, ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದ ಸಾಂಸ್ಥಿಕ ಕ್ವಾರಂಟೈನ್ ಕೇಂದ್ರ ಎಂದು ಹೇಳಲಾಗುತ್ತಿದೆ.
ಇಲ್ಲಿರುವ ವಾಸಿಗಳು ಕ್ರಿಕೆಟ್ ಆಡುತ್ತಿದ್ದು, ಅದೀಗ ಕ್ವಾರಂಟೈನ್ ಕ್ರಿಕೆಟ್ ಎಂದೇ ಪ್ರಸಿದ್ಧಿ ಪಡೆದಿದೆ.
ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮತ್ತು ನ್ಯಾಶನಲ್ ಕಾನ್ಫರೆನ್ಸ್ ಮುಖಂಡ ಓಮರ್ ಅಬ್ದುಲ್ಲಾ, ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್ ಸೇರಿದಂತೆ ಹಲವರು ಈ ವಿಡಿಯೊ ಶೇರ್ ಮಾಡಿಕೊಂಡಿರುವ ಕಾರಣ, ಇದು ಅಲ್ಲಿಯ ಕ್ವಾರಂಟೈನ್ ಕೇಂದ್ರದ್ದು ಎಂದು ಅಂದಾಜಿಸಲಾಗಿದೆ.