ಸಂಪಾದಕೀಯ | ಗುಣಮಟ್ಟದ ಶಿಕ್ಷಣ ಮುಖ್ಯ

Untitled design
Published on

ಶಿಕ್ಷಣ ರಂಗಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರ ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದೆ. ಒಂದನೇ ತರಗತಿಯಿಂದಲೇ ಕಂಪ್ಯೂಟರ್ ಶಿಕ್ಷಣ ನೀಡುವುದು, 800 ಕರ್ನಾಟಕ ಪಬ್ಲಿಕ್ ಸ್ಕೂಲ್ ಆರಂಭ, ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಗೆ ಉತ್ತೀರ್ಣತಾ ಅಂಕ 33ಕ್ಕೆ ನಿಗದಿ, ಒಂದರಿಂದ ಹತ್ತನೇ ತರಗತಿವರೆಗೆ ಮೌಲ್ಯ ಶಿಕ್ಷಣ ನೀಡುವುದು- ಮುಂತಾದವು ಇವುಗಳಲ್ಲಿ ಸೇರಿವೆ. ಮೇಲ್ನೋಟಕ್ಕೆ ಇವೆಲ್ಲ ಉತ್ತಮ ಉಪಕ್ರಮಗಳಂತೆ ಕಂಡರೂ, ಅನುಷ್ಠಾನ ಹೇಗಾಗುತ್ತದೆ ಎಂಬುದರ ಮೇಲೆ ಪರಿಣಾಮ ಗೋಚರಿಸಲಿದೆ. ಪ್ರಾಥಮಿಕ ತರಗತಿಯಿಂದಲೇ ಕಂಪ್ಯೂಟರ್ ಶಿಕ್ಷಣದ ರೂಪುರೇಷೆ ಹೇಗಿರುತ್ತದೆಯೆಂಬುದು ಮುಂದೆ ಗೊತ್ತಾಗಬೇಕಿದೆ.

ಕೆಪಿಎಸ್ ಶಾಲೆ ಪರಿಕಲ್ಪನೆ 2019ರಲ್ಲಿ ಜಾರಿಯಾಗಿದ್ದು, ಈವರೆಗೆ 300 ಶಾಲೆಗಳನ್ನು ತೆರೆಯಲಾಗಿದೆ. ಪೂರ್ವ ಪ್ರಾಥಮಿಕದಿಂದ ದ್ವಿತೀಯ ಪಿಯುವರೆಗೆ ಮಗು ಒಂದೇ ಕಡೆ ಇದ್ದುಕೊಂಡು ಕಲಿಯಬಹುದೆಂಬುದು ಈ ಶಾಲೆಯ ವಿಶೇಷತೆ. ಈಗ ಒಂದೇ ಸಲಕ್ಕೆ 800 ಶಾಲೆಗಳನ್ನು ಆರಂಭಿಸಲಿರುವುದು ವಿಶೇಷ. ಸರ್ಕಾರವೇನೋ ಈ ಕುರಿತು ನೀಲಿನಕ್ಷೆ ಇರುವುದಾಗಿ ಹೇಳಿದೆಯಾದರೂ, ಈ ಎಲ್ಲ ಶಾಲೆಗಳಿಗೆ ಮೂಲಸೌಕರ್ಯ ಹಾಗೂ ಇತರ ಸವಲತ್ತುಗಳನ್ನು ಒದಗಿಸುವುದು ದೊಡ್ಡ ಸವಾಲೇ ಸರಿ. ತರಬೇತಾದ ಶಿಕ್ಷಕರನ್ನು ನೇಮಿಸುವುದು ಮತ್ತೊಂದು ಸವಾಲು. ಏಕೆಂದರೆ, ಭೌತಿಕವಾಗಿ ಕಟ್ಟಡಗಳನ್ನು ನಿರ್ವಿುಸಿದರೂ, ಅದಕ್ಕೆ ಜೀವ ತುಂಬಬೇಕಾದವರು ಆಶಯಗಳನ್ನು ಅರಿತುಕೊಂಡು, ಬದ್ಧತೆಯಿಂದ ಕೆಲಸಮಾಡುವ ಶಿಕ್ಷಕರೇ. ರಾಜ್ಯದಲ್ಲಿ 18 ಸಾವಿರ ಶಿಕ್ಷಕರ ನೇಮಕಾತಿಗೆ ಶೀಘ್ರದಲ್ಲಿ ಅಧಿಸೂಚನೆ ಹೊರಡಿಸಲಾಗುತ್ತದೆಯೆಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ಪಾರದರ್ಶಕವಾಗಿ, ಕಾನೂನು ಸಮಸ್ಯೆ ಆಗದಂತೆ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ಶಾಲೆಗಳಿಗೆ ಶಿಕ್ಷಕರು ತೆರಳಿದಾಗಲೇ ಈ ಕಾರ್ಯ ರ್ತಾಕ ಅಂತ್ಯ ಕಂಡಂತೆ. ಇದರ ಜೊತೆಗೆ, ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲಾ ವಿದ್ಯಾರ್ಥಿಗಳಿಗೆ ‘ಮೌಲ್ಯ ಶಿಕ್ಷಣ’ ನೀಡಲು ಕೂಡ ಸರ್ಕಾರ ಮುಂದಾಗಿದೆ. ಒಂದರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ವಾರದಲ್ಲಿ ಒಂದು ಅಥವಾ ಎರಡು ಅವಧಿಯನ್ನು ಇದಕ್ಕಾಗಿ ಮೀಸಲಿಡಲಾಗುತ್ತದೆ. ಈ ಕುರಿತು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯು ಸಹಾನುಭೂತಿ, ದಯೆ, ಗೌರವ, ಪ್ರಾಮಾಣಿಕತೆ ಮತ್ತು ಬದ್ಧತೆ, ಸುರಕ್ಷತೆ, ಪರಿಸರ ಜಾಗೃತಿ ಇತ್ಯಾದಿಗೆ ಸಂಬಂಧಿಸಿದ ಚಟುವಟಿಕೆಗಳ ಪುಸ್ತಕವನ್ನು ಸಿದ್ಧಪಡಿಸಿದೆ. ಮೌಲ್ಯ ಶಿಕ್ಷಣ ಕುರಿತ ಚಟುವಟಿಕೆಗಳ ಪುಸ್ತಕಗಳ ಡಿಜಿಟಲ್ ಆವೃತ್ತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಕನ್ನಡ ರಾಜ್ಯೋತ್ಸವದಂದು ಬಿಡುಗಡೆ ಮಾಡಲಿದ್ದಾರೆ.

ಮೌಲ್ಯ ಶಿಕ್ಷಣ ಬೋಧಿಸಲು ಸಂಪನ್ಮೂಲ ವ್ಯಕ್ತಿಗಳಿಗೆ ಮತ್ತು ಶಿಕ್ಷಕರಿಗೆ ತರಬೇತಿ ನೀಡಲಾಗುತ್ತದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಇಂದಿನ ತಂತ್ರಜ್ಞಾನ ಯುಗದಲ್ಲಿ, ಬದಲಾದ ಸಾಮಾಜಿಕ-ಶೈಕ್ಷಣಿಕ ವಾತಾವರಣದಲ್ಲಿ, ಶಿಕ್ಷಣವೆಂಬುದು ವ್ಯಕ್ತಿತ್ವ ನಿರ್ವಣಕ್ಕಿಂತ ಹೆಚ್ಚಾಗಿ ನೌಕರಿ ಹಿಡಿಯುವ ಸಾಧನ ಎಂಬ ಮನಸ್ಥಿತಿಯೇ ದಟ್ಟವಾಗಿರುವಾಗ ಮೌಲ್ಯ ಶಿಕ್ಷಣ ಬೇಕೆಂಬುದರಲ್ಲಿ ಅನುಮಾನವಿಲ್ಲ. ಆದರೆ ಎಳೆಮನಸ್ಸಿಗೆ ನಾಟುವ ಹಾಗೆ, ಅವರಲ್ಲಿ ಮೌಲ್ಯಬಿತ್ತನೆ ಆಗುವ ಹಾಗೆ ಇದನ್ನು ಹೇಗೆ ಕಾರ್ಯಗತಗೊಳಿಸಲಾಗುತ್ತದೆ ಎಂಬುದು ಕಾದುನೋಡಬೇಕಾದ ಸಂಗತಿ. ಒಟ್ಟಿನಲ್ಲಿ, ಶಿಕ್ಷಣಕ್ಕೆ ಸಂಬಂಧಿಸಿದ ಯೋಜನೆಗಳು ಸರ್ಕಾರ ಮತ್ತು ಶಿಕ್ಷಕರು ಇಬ್ಬರಿಗೂ ಸತ್ವಪರೀಕ್ಷೆ. ಏಕೆಂದರೆ ಇಲ್ಲಿ ಮಕ್ಕಳ ಭವಿಷ್ಯದ ಪ್ರಶ್ನೆ ಅಡಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net