ರ್ಯಾಂಕ್ ಮಾನದಂಡ ಬದಲು; ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಗುಣಾತ್ಮಕತೆಗೂ ಆದ್ಯತೆ

nation-3
Published on

ದೇವರಾಜ್ ಎಲ್. ಬೆಂಗಳೂರು

ಈ ಬಾರಿಯ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಅಂಕಗಳ ಸಾಧನೆ ಮಾತ್ರವಲ್ಲ ಗುಣಾತ್ಮಕತೆ (ಕ್ವಾಲಿಟೇಟೀವ್) ಸಮೀಕರಿಸಿ ಜಿಲ್ಲಾ ರ್ಯಾಂಕ್ ಪಟ್ಟಿ ರೂಪಿಸಲು ಶಿಕ್ಷಣ ಇಲಾಖೆ ಮುಂದಾಗಿದೆ. ಇದರಿಂದ ವಿದ್ಯಾರ್ಥಿಗಳ ಪರಿಮಾಣಾತ್ಮಕವಾಗಿ (ಕ್ವಾಂಟಿಟೇಟಿವ್) ಮಾತ್ರವಲ್ಲ ಗುಣಾತ್ಮಕತೆಗೆ (ಕ್ವಾಲಿಟೇಟೀವ್) ಮೌಲ್ಯ ದೊರೆಯಲಿದೆ. ಸರಳವಾಗಿ ಹೇಳಬೇಕಾದರೆ ಒಂದು ಜಿಲ್ಲೆಯಲ್ಲಿ 25 ವಿದ್ಯಾರ್ಥಿಗಳಿದ್ದು, ಎಲ್ಲರೂ ಉತ್ತೀರ್ಣರಾದರೆ ಅಲ್ಲಿ ಶೇ.100 ಫಲಿತಾಂಶ ಎಂದು ಪರಿಗಣಿಸಲಾಗುತ್ತದೆ. ಅಲ್ಲಿ ಜಸ್ಟ್​ಪಾಸ್ ಅಂಕ ಪಡೆದಿರುವ ಸಂಖ್ಯೆಯೇ ಹೆಚ್ಚಿರಬಹುದು. ಇನ್ನೂ ಬೇರೆ ಜಿಲ್ಲೆಯಲ್ಲಿ 300 ವಿದ್ಯಾರ್ಥಿಗಳಿದ್ದು, ಇದರಲ್ಲಿ 250 ಮಕ್ಕಳು ಹೆಚ್ಚಿನ ಅಂಕಗಳಿಸಿ ಪಾಸ್ ಆಗಿದ್ದರೂ ಉಳಿದ 50 ವಿದ್ಯಾರ್ಥಿಗಳು ಅನುತ್ತೀರ್ಣರಾದರೂ ಎಂಬ ಕಾರಣಕ್ಕೆ ಆ ಜಿಲ್ಲೆಯ ಉತ್ತೀರ್ಣದ ಪ್ರಮಾಣವನ್ನು ಕಡಿಮೆ ಮಾಡಲಾಗುತ್ತಿದೆ. ಆ ಮಾನದಂಡ ತಪ್ಪು ಎಂದು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಇದಕ್ಕಾಗಿ ಗುಣಾತ್ಮಕತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲು ತೀಮಾನಿಸಿದೆ.

ಲೆಕ್ಕಾಚಾರ ಹೇಗೆ?: ಜಿಲ್ಲಾ ಸಾಧನೆ ಲೆಕ್ಕಾಚಾರ ಮಾಡುವಾಗ ಉತ್ತೀರ್ಣ ಪ್ರಮಾಣ ಶೇ.40, ಜಿಲ್ಲೆಯ ಎಲ್ಲ ವಿದ್ಯಾರ್ಥಿಗಳ ಸರಾಸರಿ ಅಂಕ ಶೇ.40 ಮತ್ತು ಪ್ರಥಮ ದರ್ಜೆ ಅತ್ಯುನ್ನತ ದರ್ಜೆ ಉತ್ತೀರ್ಣ ಪ್ರಮಾಣ ಶೇ.20 ಪರಿಗಣಿಸ ಬೇಕಿದೆ, ಗ್ರೇಡ್ ನೀಡುವ ಸಮಯದಲ್ಲಿ 85ಕ್ಕಿಂತ ಹೆಚ್ಚು ತೆಗೆದುಕೊಂಡರೆ ‘ಎ’ ಶ್ರೇಣಿ, 60ರಿಂದ 80ರ ನಡುವಿನ ಅಂಕಕ್ಕೆ ‘ಬಿ’ ಮತ್ತು 60ಕ್ಕಿಂತ ಕಡಿಮೆ ತೆಗೆದುಕೊಂಡರೆ ‘ಸಿ’ ಶ್ರೇಣಿಯನ್ನು ನೀಡಲಿದೆ.

ಷರತ್ತುಗಳು: ನೂತನ ವಿಧಾನದಲ್ಲಿ ಜಿಲ್ಲಾ ರ‍್ಯಾಂಕಿಂಗ್ ಪಟ್ಟಿ ರೂಪಿಸುವಾಗ ಮಂಡಳಿಯು ಕೆಲವು ಷರತ್ತು ಮತ್ತು ನಿಬಂಧನೆಗಳನ್ನು ಪಾಲಿಸುವುದು ಕಡ್ಡಾಯವಾಗಿದೆ. ಈಗಾಗಲೇ ಶಿಕ್ಷಣ ಇಲಾಖೆ ನಿಗದಿಪಡಿಸಿರುವ ಅಂಕಗಳನ್ನು ಪರಿಗಣಿಸುವ ವಿಧಾನ ಮತ್ತು ಗ್ರೇಡ್ ನೀಡುವುದನ್ನು ಸರ್ಕಾರದ ಅನುಮತಿ ಇಲ್ಲದೆಯೇ ಬದಲಿಸುವಂತಿಲ್ಲ. ಈ ಬಗ್ಗೆ ಶಿಕ್ಷಕರಿಗೆ ಸ್ಪಷ್ಟವಾಗಿ ಮಂಡಳಿಯು ತಿಳಿಸಬೇಕು. ಸದ್ಯ ಸೂಚಿಸಿರುವ ಮಾನದಂಡದ ಆಧಾರದಲ್ಲಿಯೇ ತಾಲೂಕುಗಳ ಶ್ರೇಣಿ ವರ್ಗೀಕರಿಸಿ ಆರೋಗ್ಯಕರ ಸ್ಪರ್ಧೆಗೆ ಅನುವುಮಾಡಿಕೊಡಬೇಕು. ತಾಲೂಕು ಮತ್ತು ಜಿಲ್ಲಾ ಹಂತದ ಗ್ರೇಡ್ ಪ್ರಕಟಿಸುವ ಮೊದಲು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಂದ ಅನುಮತಿ ಪಡೆಯಬೇಕು. ಈ ನೂತನ ಪದ್ಧತಿ ಅನುಷ್ಠಾನಗೊಳಿಸಿದ ಬಗ್ಗೆ ಪ್ರಗತಿಯ ವರದಿಯನ್ನು ಸರ್ಕಾರಕ್ಕೆ ಕಳುಹಿಸಬೇಕು ಎಂದು ಶಿಕ್ಷಣ ಇಲಾಖೆ ಹೊರಡಿಸಿರುವ ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net