ಬಿಎಂಟಿಸಿಯಲ್ಲಿ ಡಿಜಿಟಲ್ ಪಾವತಿಗೆ ಕ್ಯೂಆರ್‌ಕೋಡ್ ಕಡ್ಡಾಯ

bmtc
Published on

ಬೆಂಗಳೂರು: ಬಿಎಂಟಿಸಿಯ ಎಲ್ಲ ಬಸ್‌ಗಳಲ್ಲಿ ಡಿಜಿಟಲ್ ಪಾವತಿ ಮಾಡಿಸಿಕೊಳ್ಳಲು ಬಿಎಂಟಿಸಿ ಸಂಸ್ಥೆ ಮುಂದಾಗಿದ್ದು, ಇದರಿಂದ ಚಿಲ್ಲರೆ ಸಮಸ್ಯೆಗೆ ಮುಕ್ತಿ ಸಿಗಲಿದೆ.

ಬಿಎಂಟಿಸಿ ಬಸ್‌ಗಳಲ್ಲಿ ಟಿಕೆಟ್ ಖರೀದಿಗಾಗಿ ಎಲ್ಲ ನಿರ್ವಾಹಕರಿಗೆ ಡಿಜಿಟಲ್ ಪಾವತಿ ಮಾಡಿಸಿಕೊಳ್ಳಲು ಕ್ಯೂಆರ್ ಕೋಡ್ ಸ್ಕ್ಯಾನರ್ ನೀಡಿದ್ದರೂ, ಅದು ವೋಲ್ವೊ ಬಸ್‌ಗಳಲ್ಲಿ ಮಾತ್ರ ಬಳಕೆಯಾಗುತ್ತಿದೆ. ಇನ್ನು ಮುಂದೆ ಎಲ್ಲ ನಿರ್ವಾಹಕರು ಈ ವ್ಯವಸ್ಥೆ ಬಳಸುವುದನ್ನು ಕಡ್ಡಾಯಗೊಳಿಸಲು ಬಿಎಂಟಿಸಿ ಮುಂದಾಗಿದೆ.

ಕರೊನಾ ಕಾಲದಲ್ಲಿ ವ್ಯಕ್ತಿಗಳ ನಡುವೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಕಡ್ಡಾಯವಾಗಿದ್ದರಿಂದ, ೨೦೨೦ರಲ್ಲಿಯೇ ಬಿಎಂಟಿಸಿ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಜಾರಿಗೆ ತಂದಿತ್ತು. ಕೋವಿಡ್ ನಂತರದಲ್ಲಿ ದೂರ ಪ್ರಯಾಣದ ಬಸ್‌ಗಳನ್ನು ಹೊರತುಪಡಿಸಿ ಉಳಿದವುಗಳಲ್ಲಿ ಕ್ಯೂಆರ್ ಕೋಡ್ ಬಳಕೆ ಕಡಿಮೆಯಾಯಿತು.

ಕೆಲ ಸಮಸ್ಯೆಗಳಿಂದ ಕ್ಯೂಆರ್ ಕೋಡ್ ಮರೆಮಾಚಿದ್ದರು:
ನಗರದ ಒಳಗೆ ಬಸ್ ನಿಲ್ದಾಣಗಳ ಅಂತರ ಕಡಿಮೆ ಇರುವಲ್ಲಿ ಕ್ಯೂಆರ್ ಕೋಡ್ ಬಳಕೆಯೇ ಸಮಸ್ಯೆಗಳನ್ನು ಸೃಷ್ಟಿಸಿತು. ಒಂದು ನಿಲ್ದಾಣದಿಂದ ಪಕ್ಕದ ನಿಲ್ದಾಣಕ್ಕೆ ತೆರಳುವವರು ಟಿಕೆಟ್ ತೆಗೆದುಕೊಳ್ಳಲು ಸ್ಕ್ಯಾನ್ ಮಾಡುವಾಗ ನೆಟ್‌ವರ್ಕ್ ಇನ್ನಿತರ ಕಾರಣದಿಂದ ವಿಳಂಬವಾದರೆ, ಅವರು ಇಳಿಯಬೇಕಿದ್ದ ಸ್ಥಳ ಬಂದು ಬಿಡುತ್ತಿತ್ತು. ಇದರಿಂದ ಬಹುತೇಕ ನಿರ್ವಾಹಕರು ಡಿಜಿಟಲ್ ಪಾವತಿ ಇರುವುದನ್ನೇ ಮರೆಮಾಚಿ ನಗದು ಪಡೆದು ಟಿಕೆಟ್ ನೀಡುವುದನ್ನು ಮುಂದುವರಿಸಿದ್ದರು.

ಸಾರಿಗೆಯ ನಾಲ್ಕು ನಿಗಮಗಳಲ್ಲಿ ಮೊದಲ ಬಾರಿಗೆ ಕ್ಯೂಆರ್ ಕೋಡ್ ಸ್ಕ್ಯಾನರ್ ಪದ್ಧತಿಯನ್ನು ಜಾರಿಗೊಳಿಸಿದ್ದೇ ಬಿಎಂಟಿಸಿ. ಈಗ ಬಿಎಂಟಿಸಿಗೆ ಪ್ರಯಾಣಿಕರಿಂದ ಬರುವ ಆದಾಯದಲ್ಲಿ ಶೇ ೭ರಷ್ಟು ಕ್ಯೂಆರ್ ಕೋಡ್ ಮೂಲಕ ಬರುತ್ತಿದೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಎಲ್ಲ ನಿರ್ವಾಹಕರಿಗೆ ಸೂಚನೆ:
ಪ್ರಯಾಣದರವನ್ನು ಯುಪಿಐ ಆಧಾರಿತ ಪಾವತಿ ಮಾಡಲು ನಾಲ್ಕು ವರ್ಷಗಳ ಹಿಂದೆಯೇ ಬಿಎಂಟಿಸಿಯ ಎಲ್ಲ ನಿರ್ವಾಹಕರಿಗೆ ಕ್ಯೂಆರ್ ಕೋಡ್ ಸ್ಕ್ಯಾನರ್ ನೀಡಲಾಗಿದೆ. ದೇವನಹಳ್ಳಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಚರಿಸುವ ಬಸ್‌ಗಳೂ ಒಳಗೊಂಡಂತೆ ಎಲ್ಲ ಹವಾನಿಯಂತ್ರಿತ ಬಸ್‌ಗಳಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆ ಬಳಕೆಯಾಗುತ್ತಿದೆ. ವಿವಿಧ ಕಾರಣಗಳಿಂದ ಕೆಲವು ಮಾರ್ಗಗಳಲ್ಲಿ ನಿರ್ವಾಹಕರು ಬಳಸುತ್ತಿಲ್ಲ. ಇನ್ಮುಂದೆ ಎಲ್ಲ ನಿರ್ವಾಹಕರು ಬಳಸುವಂತೆ ಸೂಚನೆ ನೀಡಲಾಗುವುದು ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಚಿಲ್ಲರೆ ಸಮಸ್ಯೆಗೆ ಬ್ರೇಕ್:
ಬಿಎಂಟಿಸಿ ಬಸ್‌ನಲ್ಲಿ ನಿತ್ಯ ೩೫ ಲಕ್ಷಕ್ಕೂ ಅಧಿಕ ಜನ ಸಂಚರಿಸುತ್ತಿದ್ದಾರೆ. ಈ ಫೈಕಿ ೨೦ ಲಕ್ಷ ಮಹಿಳೆಯರು ನಿತ್ಯ ಉಚಿತವಾಗಿ ಸಂಚರಿಸಿದರೆ. ಉಳಿದ ೧೫ ಲಕ್ಷ ಜನ ಹಣ ಕೊಟ್ಟು ಟಿಕೆಟ್ ಪಡೆದು ಪ್ರಯಾಣಿಸುತ್ತಿದ್ದಾರೆ. ಇದರಲ್ಲಿ ಒಂದು ಲಕ್ಷ ಜನ ಟಿಕೆಟ್ ಪಡೆಯಲು ಯುಪಿಐ ಮೊರೆ ಹೋಗಿದ್ದಾರೆ. ಇದರಿಂದ ಚಿಲ್ಲರೆ ಸಮಸ್ಯೆಯಿಲ್ಲದೆ ಟಿಕೆಟ್ ಪಡೆಯಬಹುದು ಎಂದು ಪ್ರಯಾಣಿಕರು ಸಂತಸ ಹಂಚಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net