

ಪುತ್ತೂರು: ಅಧಿಕಾರಿಗಳ ದಂಡು ಪುತ್ತೂರಿನ ರಸ್ತೆಯುದ್ದಕ್ಕೂ ಓಡಾಡಿ, ಚರಂಡಿ, ತೋಡು, ಹೊಳೆ ಎಂದು ಪರಿಶೀಲನೆ ನಡೆಸಿ ಮಳೆಗಾಲದ ಸಿದ್ಧತೆ ಆಗಿಯೇ ಹೋಯಿತು ಎಂದು ತೋರಿಸಿದ್ದಾರೆ. ಆದರೆ ತಾಲೂಕು ಭವನದ ಹಿಂಭಾಗದ ಕಣಿಯೊಂದರಲ್ಲಿ ತರಗೆಲೆ ತುಂಬಿ ನೀರು ಹರಿಯದ ಪರಿಸ್ಥಿತಿಗೆ ತಲುಪಿದ್ದÀಕ್ಕೆ ವ್ಯವಸ್ಥೆ ಇಲ್ಲದಂತಾಗಿದೆ. ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲದೆ ರಸ್ತೆಯೇ ಕೊಚ್ಚಿ ಹೋಗುವ ಸ್ಥಿತಿಗೆ ತಲುಪಿಸಿದೆ.
ಮಳೆಗಾಲವನ್ನು ಎದುರಿಸುವ ನಿಟ್ಟಿನಲ್ಲಿ ಪುತ್ತೂರಿನಲ್ಲಿ ಸಹಾಯಕ ಆಯುಕ್ತರ ನೇತೃತ್ವದಲ್ಲಿ ಕಲ್ಪಿತ ಕಾರ್ಯಾಚರಣೆಗಳನ್ನು ನಡೆಸಲಾಗಿದೆ. ಸಾರ್ವಜನಿಕರ ದೂರಿನ ಹೆಸರಿನಲ್ಲಿ ಕೆಲವು ಮರಗಳನ್ನು ತೆರವು ಮಾಡಲಾಗಿದೆ. ಕಚೇರಿಗಳಲ್ಲಿ ಕುಳಿತು ಹಲವು ಸುತ್ತಿನ ಸಭೆಗಳನ್ನೂ ನಡೆಸಿ ಕಾಲಹರಣ ಮಾಡಿದ್ದು ಬಿಟ್ಟರೆ, ಯಾವುದೂ ಸಮರ್ಪಕವಾಗಿ ಕಾರ್ಯರೂಪಕ್ಕೆ ಬಂದಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.
ನಗರಸಭೆ, ತಾಲೂಕು ಆಡಳಿತ ಸೇರಿ ಎಲ್ಲ ಚರಂಡಿಗಳ ದುರಸ್ತಿಯನ್ನು ಒಂದೇ ದಿನದಲ್ಲಿ ಮಾಡಿರುವ ಬಗ್ಗೆ ಹೇಳಿಕೆಗಳನ್ನು ನೀಡಿದೆ. ಆದರೆ ವಾಸ್ತವವಾಗಿ ಇದೆಲ್ಲವೂ ಒಂದು ದಿನದ ನಾಟಕ ಎಂಬುದು ಕೆಲವು ಚರಂಡಿಗಳನ್ನು ಗಮನಿಸಿದರೆ ತಿಳಿಯುತ್ತಿದೆ. ತಾಲೂಕು ಆಡಳಿತ ಕಚೇರಿಯ ಹಿಂಭಾಗದಲ್ಲಿರುವ ಜೈನ ಭವನದ ಪಕ್ಕದಿಂದ ಬಪ್ಪಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಚರಂಡಿಯಲ್ಲಿ ತರಗೆಲೆಗಳು ತುಂಬಿ ನೀರು ರಸ್ತೆಯಲ್ಲೇ ಹರಿಯುವ ಸ್ಥಿತಿಯಿದೆ.
ಬಪ್ಪಳಿಕೆಯ ಮೋರಿಯೊಂದರಲ್ಲಿ ಮರದ ರೆಂಬೆಗಳು, ತರಗೆಲೆಗಳು ತುಂಬಿಕೊAಡಿವೆ. ಧಾರಾಕಾರ ಮಳೆಯಾದರೆ ತಗ್ಗುಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗುವ ಸಾಧ್ಯತೆಯಿದೆ. ಸಮಸ್ಯೆಗಳು ಹಲವು ಇದ್ದರೂ ಎರಡು ದಿನಗಳ ಹಿಂದೆ 100 ಮೀ ದೂರದಲ್ಲಿ ಕೊಚ್ಚೆ ನೀರು ರಸ್ತೆಗೆ ಬರುತ್ತಿರುವ ವಿಚಾರದ ತನಿಖೆಗೆ ತೆರಳಿದ ನಗರಸಭೆಯ ಅಧಿಕಾರಿಗಳು ಚರಂಡಿಗಳನ್ನು ಸರಿಪಡಿಸುವ ಗೋಜಿಗೆ ಹೋಗಿಲ್ಲ.
ಹಾಕಿದ ಮಣ್ಣು ಚರಂಡಿಗೆ: ಮಾಣಿ-ಮೈಸೂರು ಹೆದ್ದಾರಿಯಲ್ಲಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಇಕ್ಕೆಲಗಳಲ್ಲಿ ಮಣ್ಣು ಹಾಕಿ ಸಮತಟ್ಟು ಮಾಡಿರುವುದು ಮೊದಲ ಸಣ್ಣ ಮಳೆಗೆ ಚರಂಡಿ ಸೇರಿದೆ. ಕೆಲವು ಭಾಗದಲ್ಲಿ ವಾಹನಗಳು ಸೈಡ್ ಕೊಡುವಾಗ ಚಕ್ರ ಸಿಲುಕಿ ಹಾಕಿರುವ ಘಟನೆಯೂ ನಡೆದಿದೆ. ಇನ್ನು ಕೆಲವು ಪ್ರದೇಶದಲ್ಲಿ ಕೆಸರುಮಯವಾಗಿ ಮಾರ್ಪಾಡಾಗಿದೆ.
ಜಲಸಿರಿ ಕಂಟಕ
ಬಲ್ನಾಡು ಶ್ರೀಉಳ್ಳಾಲ್ತಿಯ ಮೂಲಸ್ಥಾನಕ್ಕೆ ಹೋಗುವ ದಾರಿಯ ಪ್ರಾರಂಭದಲ್ಲಿ ತಿರುವಿದ್ದು, ಇದರ ಒಂದು ಭಾಗದಲ್ಲಿ ಜಲಸಿರಿ ಯ ಪೈಪ್‌ಲೈನ್ ಹಾಕಲಾಗಿದೆ. ರಸ್ತೆಯಲ್ಲಿ ನೀರು ಹರಿದು, ಪೈಪ್‌ಲೈನ್ ಮೇಲ್ಭಾಗದಲ್ಲಿದ್ದ ಮಣ್ಣು ಹೊಚ್ಚಿ ಹೋಗಿ ರಸ್ತೆಯ ಬದಿಯಲ್ಲಿ ಅಪಾಯ ಬಾಯ್ತೆರೆದುಕೊಂಡಿದೆ. ಹೆಚ್ಚಿನ ಭಾಗದಲ್ಲಿ ಡಾಂಬರು ಹಾಕಿ ಮಣ್ಣು ಕೊಚ್ಚಿಹೋಗದಂತೆ ಮಾಡಲಾಗಿದೆಯಾದರೂ, ಈ ಭಾಗದಲ್ಲಿ ನಿರ್ಲಕ್ಷ್ಯ ತೋರಲಾಗಿದೆ. ತಿರುವಿನಲ್ಲಿ ಮುಂಭಾಗದ ವಾಹನ ತಪ್ಪಿಸಲು ಎಡ ಭಾಗಕ್ಕೆ ವಾಹನ ತೆಗೆದುಕೊಂಡು ಹೋದರೆ ಚರಂಡಿ ಸೇರುವುದರಲ್ಲಿ ಅನುಮಾನವಿಲ್ಲ.
ಕಾಫಿ ಬಿಸ್ಕತ್‌ಗೆ ಸೀಮಿತ
ಪ್ರಾಕೃತಿಕ ವಿಕೋಪಗಳಿಗೆ ಅಗತ್ಯ ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳುವ ನಿಟ್ಟಿನಲ್ಲಿ ಸಭೆಯನ್ನು ನಡೆಸಲಾಗುತ್ತಿದೆಯಾದರೂ, ಯಾವುದೂ ವ್ಯವಸ್ಥಿತವಾಗಿ ನಡೆಯುತ್ತಿಲ್ಲ. ಅಧಿಕಾರಿಗಳ ಸಭೆಗಳು ಕಾಫಿ ಬಿಸ್ಕತ್‌ಗೆ ಸೀಮಿತವಾಗುತ್ತಿವೆ. ಖುರ್ಚಿಯಿಂದ ಕದಲದ ಅಽಕಾರಿಗಳು ಸಭೆಯಲ್ಲಿ ಗಂಭೀರವಾಗಿ ಚರ್ಚಿಸುತ್ತಾರೆಯೇ ವಿನಃ ಯಾವುದನ್ನೂ ಕಾರ್ಯರೂಪಕ್ಕಿಳಿಸುವುದಿಲ್ಲ.
ದಾರಿ ತಪ್ಪಿಸುವವರಾರು?
ಹಲವು ವರ್ಷಗಳಿಂದ ಒಂದೇ ಸ್ಥಳದಲ್ಲಿ ಠಿಕಾಣಿ ಹೂಡಿರುವ ಕೆಲವು ಅಽಕಾರಿಗಳಿಗೆ, ಸದ್ಯ ಹೊಸದಾಗಿ ಆಗಮಿಸಿದ ಅಧಿಕಾರಿಗಳ ಕಾರ್ಯವೈಖರಿಯಿಂದ ನಿತ್ಯ ಒಂದೇ ಸ್ಥಳದಲ್ಲಿ ಕೂರದೆ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ತಾಲೂಕು ಆಡಳಿತ ಕಚೇರಿಯಲ್ಲಿ ಹಲವು ತಿಮಿಂಗಿಲಗಳಿದ್ದು, ಸರಿಯಾಗಿ ಕೆಲಸ ನಿರ್ವಹಿಸುವ ಅಧಿಕಾರಿಗಳನ್ನೇ ದಾರಿ ತಪ್ಪಿಸಿ ತಮ್ಮ ಹಾದಿಯನ್ನು ಸುಗಮ ಮಾಡಿಕೊಳ್ಳುತ್ತಿದ್ದಾರೆಂಬ ಆರೋಪ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.
ಪುತ್ತೂರಿನ ವಿವಿಧ ಸ್ಥಳಗಳನ್ನು ಗುರುತಿಸಿಕೊಂಡು ಪ್ರಾಕೃತಿಕ ವಿಕೋಪದ ಕುರಿತಾದ ಪ್ರಾತ್ಯಕ್ಷಿಕೆಯನ್ನು ನಡೆಸಲಾಗುತ್ತಿದ್ದು, ಅಧಿಕಾರಿಗಳ ಜತೆಗೆ ಜನರು ಪಾಲ್ಗೊಳ್ಳುತ್ತಿದ್ದಾರೆ. ಪುತ್ತೂರು ಉಪ ವಿಭಾಗಕ್ಕೆ ಸೇರಿದ ನಾಲ್ಕು ತಾಲೂಕಿನಲ್ಲಿ ಕಲ್ಪಿತ ಪ್ರಾತ್ಯಕ್ಷಿಕೆ ನಡೆಸಲಾಗುತ್ತಿದೆ. ಮಳೆಯ ವಿಚಾರದಲ್ಲಿ ಎಲ್ಲ ರೀತಿಯಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
| ಜುಬಿನ್ ಮೊಹಾಪಾತ್ರ, ಸಹಾಯಕ ಆಯುಕ್ತರು