

ಮಾಸ್ಕೊ/ಕಿಯೆವ್: ಯೂಕ್ರೇನ್ ಮೇಲಿನ ಸೇನಾ ಕಾರ್ಯಾಚರಣೆಯ ಮೂಲಕ ಅಂದುಕೊಂಡ ಭವ್ಯ ಉದ್ದೇಶವನ್ನು ಖಚಿತವಾಗಿ ಈಡೇರಿಸಿಕೊಳ್ಳುತ್ತೇವೆ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಮಂಗಳವಾರ ಸ್ಪಷ್ಟಪಡಿಸಿದರು.
ವೊಸ್ಟೋಚ್ನಿ ಕೋಸ್ಮೊಡ್ರೋಮ್ಲ್ಲಿ ನಡೆದ ಸಮಾರಂಭದಲ್ಲಿ ಪುತಿನ್ ಈ ವಿಚಾರ ತಿಳಿಸಿದ್ದು, ಯೂಕ್ರೇನ್ನ ರಷ್ಯಾ ವಿರೋಧಿ ಪಡೆಗಳನ್ನು ಮಟ್ಟ ಹಾಕುವುದಕ್ಕೆ ಸೇನಾ ಕಾರ್ಯಾಚರಣೆಯ ಹೊರತು ಬೇರೆ ಮಾರ್ಗವಿರಲಿಲ್ಲ. ರಷ್ಯಾದ ಗುರಿ ಮತ್ತು ಉದ್ದೇಶ ಬಹಳ ಸ್ಪಷ್ಟವಾಗಿದೆ ಎಂದು ವಿವರಿಸಿದರು. ರಷ್ಯಾದ ಹಿತಾಸಕ್ತಿಗೆ ವಿರುದ್ಧವಾಗಿ ನ್ಯಾಟೋ ಕೂಟ ಸೇರ್ಪಡೆಯಾಗುವ ಯೂಕ್ರೇನ್ ನಡೆಯ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಲೇ ಬರಲಾಗಿತ್ತು. ಇದಲ್ಲದೆ, ರಷ್ಯಾ ಬೆಂಬಲಿತ ಭಿನ್ನಮತೀಯರನ್ನು ಹತ್ತಿಕ್ಕಲು ಯೂಕ್ರೇನ್ 2014ರಿಂದೀಚೆಗೆ ಪ್ರಯತ್ನಿಸುತ್ತಿದೆ. ಒಂದು ಕಡೆಗೆ ರಷ್ಯಾ ಜನರಿಗೆ ನೆರವು ನೀಡುತ್ತ ಅವರನ್ನು ರಕ್ಷಿಸುತ್ತಿದೆ. ಇನ್ನೊಂದೆಡೆ ರಷ್ಯಾದ ಸುರಕ್ಷತೆಯನ್ನು ಗಮನಿಸಲಾಗುತ್ತಿದೆ ಎಂದು ಪುತಿನ್ ಹೇಳಿದರು.
ಶರಣಾಗತಿ ಇಲ್ಲ: ರಷ್ಯಾ ದಾಳಿಗೆ ಈಗಾಗಲೇ ನಾವು ಹಲವು ಜೀವಗಳನ್ನು ಕಳೆದುಕೊಂಡಿದ್ದೇವೆ. ಯುದ್ಧ ಇಷ್ಟು ಮುಂದುವರಿದ ಮೇಲೆ ಶರಣಾಗತಿ ಅಥವಾ ಯೂಕ್ರೇನ್ ಅನ್ನು ರಷ್ಯಾ ವಶಕ್ಕೆ ಒಪ್ಪಿಸುವ ಪ್ರಶ್ನೆಯೇ ಇಲ್ಲ ಎಂದು ವೊಲೊದಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.
ಕೆಮಿಕಲ್ ಅಸ್ತ್ರದ ಅಪಾಯ: ಯೂಕ್ರೇನ್ನಲ್ಲಿ ರಾಸಾಯನಿಕ ಅಸ್ತ್ರವನ್ನು ರಷ್ಯಾ ಪ್ರಯೋಗಿಸುವ ಸಾಧ್ಯತೆ ದಟ್ಟವಾಗಿದೆ. ಇಂತಹ ದಾಳಿಯಿಂದ ಯೂಕ್ರೇನ್ ಅನ್ನು ರಕ್ಷಿಸುವ ಸಲುವಾಗಿ ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾ ಮೇಲೆ ಇನ್ನಷ್ಟು ನಿರ್ಬಂಧಗಳನ್ನು ಹೇರಬೇಕು ಎಂದು ಯೂಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಆಗ್ರಹಸಿದರು. ಇದೇ ವೇಳೆ, ರಷ್ಯಾ ಈಗಾಗಲೇ ಮರಿಯುಪೋಲ್ನಲ್ಲಿ ರಾಸಾಯನಿಕ ಅಸ್ತ್ರ ಬಳಸಿದ್ದಾಗಿ ಆರೋಪ ಕೇಳಿಬಂದಿದೆ. ಇದರ ಸತ್ಯಾಸತ್ಯ ಅರಿಯುವುದಕ್ಕೆ ತನಿಖೆ ನಡೆಸುತ್ತಿರುವುದಾಗಿ ಬ್ರಿಟನ್ ಹೇಳಿದೆ. ಕೆಮಿಕಲ್ ಅಸ್ತ್ರ ಬಳಸಿದ್ದರೆ, ಅದಕ್ಕೆ ಪ್ರತಿಯಾಗಿ ಎಲ್ಲ ಆಯ್ಕೆ ತೆರೆದಿಟ್ಟಿರುವುದಾಗಿ ಬ್ರಿಟನ್ ಎಚ್ಚರಿಸಿದೆ.
ಯೂಕ್ರೇನ್ ಸಂಘರ್ಷದ ಕಾರಣ ಜಾಗತಿಕವಾಗಿ ಆಹಾರ ಸರಬರಾಜು ವ್ಯತ್ಯಯವಾಗಿರುವ ಕಾರಣ ಆಹಾರ ಪೂರೈಕೆಯಲ್ಲಿ ಸಮತೋಲನ ಕಾಯ್ದುಕೊಳ್ಳಲು ಭಾರತ ಆಹಾರ ಪೂರೈಕೆ ಮಾಡಲು ಸಿದ್ಧವಿದೆ. ಈ ವಿಷಯವನ್ನು ಅಮೆರಿಕ ಅಧ್ಯಕ್ಷರ ಜತೆಗೂ ರ್ಚಚಿಸಿರುವೆ. ವಿಶ್ವ ವ್ಯಾಪಾರ ಸಂಸ್ಥೆ (ಡಬ್ಲ್ಯುಟಿಒ) ಒಪ್ಪಿಗೆ ನೀಡಿದರೆ. ಇದನ್ನು ಕಾರ್ಯಗತಗೊಳಿಸಲಾಗುವುದು | ನರೇಂದ್ರ ಮೋದಿ ಪ್ರಧಾನಿ
ರಷ್ಯಾದಿಂದ ತೈಲ ಆಮದು ವಿಚಾರದಲ್ಲಿ ಅಮೆರಿಕದ ಗಮನ ಯುರೋಪ್ ಕಡೆಗೆ ಇರಬೇಕೇ ಹೊರತು ಭಾರತದ ಕಡೆಗಲ್ಲ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ನೇರವಾಗಿ ಅಮೆರಿಕಕ್ಕೆ ತಿರುಗೇಟು ನೀಡಿದರು.
ಯೂಕ್ರೇನ್ -ರಷ್ಯಾ ಬಿಕ್ಕಟ್ಟಿನ ಸನ್ನಿವೇಶದ ನಡುವೆ ಭಾರತ ಮತ್ತು ಅಮೆರಿಕ ನಡುವೆ ಸಚಿವರ ಸ್ತರದ 2+2 ಶೃಂಗದಲ್ಲಿ ರಷ್ಯಾದಿಂದ ಭಾರತ ಕಚ್ಚಾ ತೈಲ ಆಮದು ಮಾಡುವುದರ ಬಗ್ಗೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಜೆ ಬ್ಲಿಂಕೆನ್ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಜೈಶಂಕರ್, ರಷ್ಯಾ ಕುರಿತ ಭಾರತ ನೀತಿ ಸರಿಯಾಗಿಯೇ ಇದೆ. ಕಚ್ಚಾ ತೈಲದ ವಿಷಯದಲ್ಲಿ ಭಾರತ ಒಂದು ತಿಂಗಳಿಗೆ ಆಮದು ಮಾಡಿಕೊಳ್ಳುವಷ್ಟು ತೈಲವನ್ನು ಯುರೋಪ್ ಒಂದು ಹೊತ್ತಿಗೆ ರಷ್ಯಾದಿಂದ ಆಮದು ಮಾಡುತ್ತಿದೆ. ಇದರ ಕಡೆಗೆ ಅಮೆರಿಕ ಗಮನಹರಿಸಬೇಕು ಎಂದರು.
ಕಾಟ್ಸಾ ಬಗ್ಗೆ ನಿರ್ಧಾರವಾಗಿಲ್ಲ: ರಷ್ಯಾದಿಂದ ಭಾರತ ಎಸ್-400 ಕ್ಷಿಪಣಿ ನಿರೋಧಕ ವ್ಯವಸ್ಥೆ ಖರೀದಿಸಿದೆ. ಇದಕ್ಕಾಗಿ ಕೌಂಟರಿಂಗ್ ಅಮೆರಿಕಾ’ಸ್ ಅಡ್ವರ್ಸರೀಸ್ ಥ್ರೂ ಸ್ಯಾಂಕ್ಷನ್ಸ್ ಆಕ್ಟ್ (ಕಾಟ್ಸಾ) ಕಾನೂನು ಅನ್ವಯಿಸಿ ಭಾರತದ ಮೇಲೆ ನಿರ್ಬಂಧ ಹೇರುವ ಬಗ್ಗೆ ಇನ್ನೂ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಬ್ಲಿಂಕೆನ್ ಹೇಳಿದರು.
ಮಾನವಹಕ್ಕುಗಳ ಉಲ್ಲಂಘನೆ ಆರೋಪ: ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಹೆಚ್ಚಳವಾಗಿರುವುದನ್ನು ನಾವು ಗಮನಿಸಿದ್ದೇವೆ ಎಂದ ಬ್ಲಿಂಕನ್, ಹೆಚ್ಚು ವಿವರಣೆ ನೀಡಲು ಹೋಗಿಲ್ಲ. ಸಭೆಯಲ್ಲಿ ಭಾಗವಹಿಸಿದ್ದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಈ ವಿಚಾರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿಲ್ಲ.