ಜ್ಞಾನ ಸದ್ಬಳಕೆಗಾಗಿ ಅಹಂ ಬದಿಗಿರಿಸಿ

gsb
ಸಿಬಿಎಸ್‌ಇ 10ನೇ ತರಗತಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ, ದೇಶಕ್ಕೆ 4ನೇ ಸ್ಥಾನ ಪಡೆದ ಶ್ರದ್ಧಾ ಬಿ.ಜಿ. ಶಾನಭಾಗ್ ಅವರನ್ನು ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿ ಆಶೀರ್ವದಿಸಿದರು. ಭಾಸ್ಕರ್ ಜಿ. ಕಾಮತ್, ಬಿ.ಎಸ್.ಕಾಮತ್, ಸದಾನಂದ ನಾಯಕ್ ಇತರರಿದ್ದರು.
Published on

ಶಿವಮೊಗ್ಗ: ಧರ್ಮದಿಂದ ಸತ್ಕರ್ಮ ಮಾಡಿ ಜ್ಞಾನ ಸಂಪಾದಿಸಬೇಕು. ಅಹಂ ಬದಿಗಿರಿಸಿ ಜ್ಞಾನದ ಸದ್ವಿನಿಯೋಗ ಮಾಡಿಕೊಳ್ಳಬೇಕು ಎಂದು ಸಂಸ್ಥಾನ ಗೌಡ ಪಾದಾಚಾರ್ಯ ಕೈವಲ್ಯ ಮಠಾಧೀಶ ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದರು.

ನಗರದ ಗೌಡ ಸಾರಸ್ವತ ಸಮಾಜದ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಏರ್ಪಡಿಸಿದ್ದ ಧಾರ್ಮಿಕ ಸಭೆಯ ಸಾನ್ನಿಧಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಮನುಷ್ಯನಿಗೆ ಪರಮಾತ್ಮನ ಕೃಪೆ ಪಡೆಯುವ ಪರಮ ಲಕ್ಷೃವಿರಬೇಕು. ಅಹಂ ಇದ್ದರೆ ಜ್ಞಾನ ವ್ಯರ್ಥ ಎಂದರು.

ಮನುಷ್ಯನಿಗೆ ಸಂಕಷ್ಟಗಳು ಬರುತ್ತಲೇ ಇರುತ್ತವೆ. ಮನುಷ್ಯ ಜನ್ಮ ಶ್ರೇಷ್ಠ. ಪದೇಪದೆ ಈ ಜನ್ಮ ಸಿಗುವುದಿಲ್ಲ. ನಾವು ಜಗತ್ತನ್ನು ನೋಡುತ್ತೇವೆ, ಸುತ್ತಲಿನವರೊಂದಿಗೆ ಮಾತನಾಡುತ್ತೇವೆ ಎಂದರೆ ಅದಕ್ಕೆ ಪರಮಾತ್ಮನ ಕೃಪೆಯೇ ಕಾರಣ. ನಮ್ಮ ಹಿಂದೆ ಒಂದು ದೊಡ್ಡ ಶಕ್ತಿ ಇದೆ ಎಂದರ್ಥ. ಕಷ್ಟಗಳ ನಿವಾರಣೆ, ಶಾಂತಿ, ನೆಮ್ಮದಿಗಾಗಿ ದೇವರ ನಾಮಸ್ಮರಣೆ ಮುಖ್ಯ ಎಂದು ಹೇಳಿದರು.

ಅಂತಃಕರಣದಿಂದ ದೇವರನ್ನು ಭಜಿಸಿದರೆ ಆನಂದ ಪ್ರಾಪ್ತಿಯಾಗುತ್ತದೆ. ಪ್ರತಿನಿತ್ಯ ಸ್ವಲ್ಪ ಕಾಲವಾದರೂ ದೇವರ ನಾಮಸ್ಮರಣೆ ಮಾಡಬೇಕು. ವರ್ತಮಾನದಲ್ಲಿ ನಾಮಸ್ಮರಣೆ ಮಾಡುವುದರಿಂದ ಪೂರ್ವಜನ್ಮದ ಪಾಪಗಳು ನಷ್ಟವಾಗುತ್ತವೆ. ಸಚ್ಚಿದಾನಂದ ಸ್ವರೂಪನಾದ ಭಗವಂತ ನಾಮಸ್ಮರಣೆಯಿಂದ ಸ್ಥಿರ ಆನಂದ ದೊರೆಯುತ್ತದೆ ಎಂದು ಅಭಿಪ್ರಾಯಪಟ್ಟರು.

ಗೌಡ ಸಾರಸ್ವತ ಸಮಾಜದ ಅಧ್ಯಕ್ಷ ಭಾಸ್ಕರ್ ಜಿ. ಕಾಮತ್, ಕಾರ್ಯದರ್ಶಿ ಸದಾನಂದ ನಾಯಕ್, ಪ್ರಮುಖರಾದ ಬಿ.ಎಸ್.ಕಾಮತ್, ವಾಗೀಶ್ವರಿ ಭಜನಾ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net