

| ವಿಜಯವಾಣಿ ಸುದ್ದಿಜಾಲ ಬೆಂಗಳೂರು/ಮೈಸೂರು
ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಮುಡಾ ಪ್ರಾಧಿಕಾರಕ್ಕೆ 14 ನಿವೇಶನ ಹಿಂದಿರುಗಿಸಿದ ಬೆನ್ನಲ್ಲೇ ಮುಂದೇನೆಂಬ ಕುತೂಹಲ ಇಮ್ಮಡಿಗೊಂಡಿದೆ. ಲೋಕಾಯುಕ್ತ ತನಿಖೆ ಆರಂಭಗೊಂಡ ನಂತರ ಅಖಾಡಕ್ಕಿಳಿದು ದಾಖಲೆ ಸಂಗ್ರಹ ಆರಂಭಿಸಿರುವ ಜಾರಿ ನಿರ್ದೇಶನಾಲಯದ (ಇ.ಡಿ.) ಮುಂದಿನ ನಡೆಯತ್ತ ರಾಜ್ಯ ರಾಜಕಾರಣದ ದೃಷ್ಟಿ ನೆಟ್ಟಿದೆ. ಮತ್ತೊಂದೆಡೆ ಲೋಕಾಯುಕ್ತ ತನಿಖಾ ತಂಡ ವಿವಾದದ ಮೂಲ ಕೇಂದ್ರ ಮೈಸೂರಿನ 3.16 ಎಕರೆ ಪ್ರದೇಶಕ್ಕೆ ತೆರಳಿ ತನಿಖೆ ಆರಂಭಿಸಿದೆ.
ಲೋಕಾಯುಕ್ತ ಪೊಲೀಸರ ಎಫ್ಐಆರ್ ಆಧರಿಸಿಯೇ ಇ.ಡಿ ಇಸಿಐಆರ್ ದಾಖಲಿದೆ. ಇಡಿ ಅಧಿಕಾರಿಗಳು ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸಲ್ಲಿಸಿರುವ ಸಾಕ್ಷ್ಯಾಧಾರ ಮತ್ತು ಲೋಕಾಯುಕ್ತ ಪೊಲೀಸರಿಂದ ಪ್ರಕರಣದ ಮಾಹಿತಿ ಪಡೆದು ತನಿಖೆ ಚುರುಕುಗೊಳಿಸಿದ್ದಾರೆ. ಯಾವುದೇ ಕ್ಷಣದಲ್ಲಿ ಬೇಕಾದರೂ ಇ.ಡಿ. ಅಧಿಕಾರಿಗಳು, ಹಗರಣದಲ್ಲಿ ಭಾಗಿಯಾಗಿರುವ ಮುಡಾ ಸಿಬ್ಬಂದಿ ಹಾಗೂ ಆರೋಪಿಗಳಿಗೆ ನೋಟಿಸ್ ಕೊಟ್ಟು ವಿಚಾರಣೆ ಕರೆಯುವ ಸಾಧ್ಯತೆ ದಟ್ಟವಾಗಿದೆ.
ಮತ್ತೊಂದೆಡೆ ಲೋಕಾಯುಕ್ತ ಎಸ್ಪಿ ಉದೇಶ್ ನೇತೃತ್ವದ ತನಿಖಾ ತಂಡ ದೂರುದಾರ ಸ್ನೇಹಮಯಿ ಕೃಷ್ಣ ಅವರೊಂದಿಗೆ ಮಂಗಳವಾರ ಬೆಳಗ್ಗೆ ವಿವಾದಿತ ಸ್ಥಳಕೆಸರೆ ಗ್ರಾಮಕ್ಕೆ ಭೇಟಿ ನೀಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರು ಸರ್ವೆ ನಂ.464ರಲ್ಲಿ ಹೊಂದಿದ್ದ 3.16 ಎಕರೆ ಜಾಗದ ಮಹಜರು ನಡೆಸಿದರು. ಈ ಜಾಗವು ಈಗ ದೇವನೂರು ಬಡಾವಣೆಯಾಗಿ ಅಭಿವೃದ್ಧಿಗೊಂಡಿದೆ. ಮಹಜರು ಬಳಿಕ ಮಧ್ಯಾಹ್ನವರೆಗೆ ಸರ್ವೆ ಕಾರ್ಯವೂ ನಡೆಯಿತು. ಪಾರ್ವತಿ ಅವರಿಗೆ ಜಾಗ ಹಸ್ತಾಂತರವಾಗಿದ್ದು ಹೇಗೆ? ನಂತರ ಮುಡಾ ಭೂ ಸ್ವಾಧೀನಪಡಿಸಿಕೊಂಡು ಯಾವ ರೀತಿ ಬಡಾವಣೆ ನಿರ್ಮಾಣ ಮಾಡಿತು ಎಂಬುದನ್ನು ಲೋಕಾಯುಕ್ತ ಅಧಿಕಾರಿಗಳು ಖುದ್ದು ವೀಕ್ಷಿಸಿ ಮಾಹಿತಿ ಪಡೆದರು. ಸರ್ವೆ ನಡೆಸುವ ಮೂಲಕ 3.16 ಎಕರೆ ಭೂಮಿ ಇರುವುದನ್ನು ಖಾತ್ರಿಪಡಿಸಿಕೊಂಡರು.
ಮಧ್ಯಾಹ್ನದ ನಂತರ ದೂರುದಾರ ಸ್ನೇಹಮಯಿ ಕೃಷ್ಣ ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಿದ ದೂರುಗಳು ಹಾಗೂ ಕಡತದ ಸಂಪೂರ್ಣ ಮಾಹಿತಿಯನ್ನು ಲೋಕಾಯುಕ್ತ ಪೊಲೀಸರು ಪಡೆದುಕೊಂಡಿದ್ದಾರೆ.
ಹಗರಣಕ್ಕೆ ಸಂಬಂಧಿಸಿದ ಎಲ್ಲ ಕಡತಗಳನ್ನು ತಕ್ಷಣ ನೀಡುವಂತೆ ಮುಡಾಗೆ ಲೋಕಾಯುಕ್ತ ಪೊಲೀಸರು ನೋಟಿಸ್ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುಡಾದಲ್ಲಿ ಬೆಳಗ್ಗಿನಿಂದಲೇ ಎಲ್ಲ ಕಡತಗಳನ್ನು ತೆಗೆಯುವ ಕಾರ್ಯ ನಡೆದಿದೆ. ಕಡತ ಪಡೆದ ನಂತರ ತನಿಖೆ ಮತ್ತೊಂದು ಆಯಾಮ ಪಡೆದುಕೊಳ್ಳುವ ಸಾಧ್ಯತೆ ಇದೆ. ಲೋಕಾಯುಕ್ತ ಪೊಲೀಸರು ಮುಡಾದಿಂದ ಹಗರಣದ ಕಡತ ಕೇಳಿರುವುದನ್ನು ಮುಡಾ ಆಯುಕ್ತ ರಘುನಂದನ್ ಖಚಿತಪಡಿಸಿದ್ದಾರೆ. ಆದರೆ, ಇದುವರೆಗೆ ಜಾರಿ ನಿರ್ದೇಶನಾಲಯ ಯಾವುದೇ ಮಾಹಿತಿ ಬಯಸಿಲ್ಲ. ತನಿಖಾ ಸಂಸ್ಥೆಗಳು ಬಯಸುವ ಎಲ್ಲ ಮಾಹಿತಿಗಳನ್ನು ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.
ಮುಡಾದಲ್ಲಿನ 360 ಕೋಟಿ ರೂ.ಗಳನ್ನು ಅನ್ಯ ಯೋಜನೆಗೆ ದುರ್ಬಳಕೆ ಮಾಡಿಕೊಂಡ ಆರೋಪದ ಮೇಲೆ 2022ರಲ್ಲಿ ಲೋಕಾಯುಕ್ತ ಸಂಸ್ಥೆಯಲ್ಲಿ 18 ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು. ಲೋಕಾಯುಕ್ತ ಪೊಲೀಸರು ಅಧಿಕಾರಿಗಳಿಗೆ ನೋಟಿಸ್ ಕೊಟ್ಟು ವಿಚಾರಣೆ ನಡೆಸಿದ್ದರು. ಈ ಕೇಸಿನ ಮೇಲೂ ಇಡಿ ಅಧಿಕಾರಿಗಳು, ದಾಖಲೆ ಸಂಗ್ರಹದಲ್ಲಿ ತೊಡಗಿದ್ದಾರೆ ಎನ್ನಲಾಗುತ್ತಿದೆ.
ಸಿದ್ದರಾಮಯ್ಯ ಪತ್ನಿ ಪಾರ್ವತಿ ವಿವಾದಿತ 14 ಮುಡಾ ನಿವೇಶನ ಹಿಂತಿರುಗಿಸುತ್ತಿರುವುದಾಗಿ ಪತ್ರ ನೀಡಿದ ಬೆನ್ನಲೇ ವಿವಾದಿತ ನಿವೇಶನಗಳ ಖಾತೆ ರದ್ದಾಗಿರುವ ಮಾಹಿತಿ ಲಭ್ಯವಾಗಿದೆ. ಖುದ್ದಾಗಿ ಪಾರ್ವತಿ ಅವರೇ ಪುತ್ರ ಯತೀಂದ್ರ ಜತೆ ಮಂಗಳವಾರ ಉಪನೋಂದಣಿ ಕಚೇರಿಗೆ ತೆರಳಿ ತಮಗೆ ಮಂಜೂರಾಗಿದ್ದ 14 ಮುಡಾ ನಿವೇಶನಗಳ ಖಾತೆ ರದ್ದು ಮಾಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಿಎಂ ಪತ್ನಿ ಪಾರ್ವತಿ ಅಕ್ರಮವಾಗಿ ಪಡೆದಿರುವ 14 ನಿವೇಶನಗಳನ್ನು ಮುಡಾಗೆ ಹಿಂತಿರುಗಿಸಿದ್ದಾರೆ. ಜಾರಿ ನಿರ್ದೇಶನಾಲಯದಲ್ಲಿ ಪ್ರಕರಣ ದಾಖಲಾಗಿದೆ. ಇದು ನನ್ನ ಹೋರಾಟಕ್ಕೆ ಸಿಕ್ಕಿರುವ ಮೊದಲ ಗೆಲುವಾಗಿದೆ. ಪಾರ್ವತಿ ಅವರ ಪ್ರಕರಣ ಮಾತ್ರವಲ್ಲ ಮುಡಾದ ಎಲ್ಲ ಹಗರಣಗಳ ಕುರಿತು ತನಿಖೆ ನಡೆಯುವ ಅವಶ್ಯಕತೆ ಇದೆ. ನನ್ನ ಬಳಿ ಹಗರಣಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಇದ್ದು, ದಾಖಲೆ ಇಲ್ಲದೆ ನಾನು ಏನು ಹೇಳುವುದಿಲ್ಲ. | ಸ್ನೇಹಮಯಿ ಕೃಷ್ಣ, ದೂರುದಾರ
ಪಾರ್ವತಿಗೆ ನೀಡಿದ್ದ 14 ಸೈಟ್ ಮುಡಾಗೆ ವಾಪಸ್ ಆಗಿದ್ದು, ಆ ನಿವೇಶನಗಳ ಕ್ರಯಪತ್ರ ರದ್ದುಪಡಿಸಲಾಗಿದೆ. ಈ ನಿವೇಶನಗಳನ್ನು ಬೇರೆಯವರಿಗೆ ಹಂಚಬಹುದಾ ಎಂಬ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯ ಪಡೆಯಲಾಗುವುದು. ಈ ವಿಚಾರವನ್ನು ತನಿಖಾ ಸಂಸ್ಥೆಯ ಗಮನಕ್ಕೆ ತರಲಾಗಿದೆ. | ರಘುನಂದನ್ , ಮುಡಾ ಆಯುಕ್ತ
1991ನ ರೂಲ್ಸ್ 8ರಲ್ಲಿ ಸ್ವ ಇಚ್ಛೆಯಿಂದ ನಿವೇಶನ ವಾಪಸ್ ನೀಡಲು ಮತ್ತು ಅಂತಹ ನಿವೇಶನಗಳನ್ನು ಮುಡಾ ಪಡೆಯಲು ಅವಕಾಶವಿದೆ. ಅವರ ಅರ್ಜಿಯನ್ನು ನಾವು ಉಪ ನೋಂದಣಾಧಿಕಾರಿಗೆ ಕಳುಹಿಸಿಕೊಟ್ಟಿದ್ದೇವೆ. 24 ಗಂಟೆಯಲ್ಲಿ ಕಾನೂನು ಪ್ರಕಾರ ಖಾತೆ ರದ್ದು ಮಾಡಲು ಅವಕಾಶವಿದೆ. ಮುಂದೆ ಯಾರೇ ನಿವೇಶನಗಳನ್ನು ನೀಡಿದರೂ ಇಷ್ಟೇ ವೇಗದಲ್ಲಿ ಪಡೆಯಲಾಗುವುದು. | ಪ್ರಸನ್ನಕುಮಾರ್ , ಮುಡಾ ಕಾರ್ಯದರ್ಶಿ
ವಿವಾದಿತ 14 ನಿವೇಶನಗಳನ್ನು ಹಿಂಪಡೆಯಿರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಮುಡಾಗೆ ಬರೆದಿರುವ ಪತ್ರವನ್ನು ಪಾರ್ವತಿ ಪರವಾಗಿ ಪುತ್ರ, ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಮಂಗಳವಾರ ಮುಡಾ ಆಯುಕ್ತ ರಘುನಂದನ್ಗೆ ಹಸ್ತಾಂತರಿಸಿದರು.
ಬೆಂಗಳೂರು: ‘ನನ್ನ ನಾಲ್ಕು ದಶಕಗಳ ಸುದೀರ್ಘ ರಾಜಕಾರಣದಲ್ಲಿ ಎಂದೂ ಕೂಡ ಮಧ್ಯೆ ಪ್ರವೇಶಿಸದೆ ಕುಟುಂಬಕ್ಕಷ್ಟೆ ಸೀಮಿತವಾಗಿದ್ದ ನನ್ನ ಪತ್ನಿ ನನ್ನ ವಿರುದ್ಧದ ದ್ವೇಷದ ರಾಜಕಾರಣಕ್ಕೆ ಬಲಿಯಾಗಿ ಮಾನಸಿಕವಾಗಿ ಹಿಂಸೆ ಅನುಭವಿಸುವಂತಾಗಿರುವುದಕ್ಕೆ ನನಗೆ ವಿಷಾದ ಇದೆ’ ಎಂದು ಸಿಎಂ ಸಿದ್ದರಾಮಯ್ಯ ಬೇಸರ ಹೊರಹಾಕಿದ್ದಾರೆ.
‘ನನ್ನ ವಿರುದ್ಧ ನಡೆಯುತ್ತಿರುವ ರಾಜಕೀಯ ಷಡ್ಯಂತ್ರದಿಂದ ನೊಂದ ಪತ್ನಿ ಮುಡಾ ನೀಡಿರುವ 14 ನಿವೇಶನ ಹಿಂದಿರುಗಿಸುವ ನಿರ್ಧಾರ ಕೈಗೊಂಡು, ಆಶ್ಚರ್ಯ ಉಂಟು ಮಾಡಿದ್ದಾರೆ ಎಂದಿದ್ದಾರೆ. ಇನ್ನು ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡುವುದಿಲ್ಲ ಎಂದು ಸಿಎಂ ಪುನರುಚ್ಚರಿಸಿದ್ದಾರೆ.
ಮೈಸೂರು: ಹಳೆಯ ಚೆಕ್ಬೌನ್ಸ್ ಪ್ರಕರಣ ಸಂಬಂಧ ಆರ್ಟಿಇ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧ 3ನೇ ಹೆಚ್ಚುವರಿ ಸಿವಿಲ್ ಕೋರ್ಟ್ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿದೆ.
ಮಂಗಳವಾರ ನಡೆದ ವಿಚಾರಣೆಗೆ ಕೃಷ್ಣ ಗೈರಾಗಿದ್ದರು. ಈ ಹಿನ್ನೆಲೆಯಲ್ಲಿ ಕೋರ್ಟ್ ಈ ಆದೇಶ ಹೊರಡಿಸಿದೆ. ದೂರುದಾರ ಎನ್.ಕುಮಾರ್ ಎಂಬುವರು 2015ರ ಜೂನ್ 30ರಂದು ಸ್ನೇಹಮಯಿ ಕೃಷ್ಣ ವಿರುದ್ಧ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದರು. ಮತ್ತೊಂದೆಡೆ ದೂರುದಾರ ಸ್ನೇಹಮಯಿ ಕೃಷ್ಣಗೆ ಗುರುವಾರ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದೆ.
ಮುಡಾ ನಿವೇಶನ ವಾಪಸ್ ಕೊಡುವ ಪರಿಸ್ಥಿತಿ ಬರುತ್ತದೆ ಎಂದಿದ್ದೆವು, ಅದೀಗ ನಿಜವಾಗಿದೆ. ಅದೇ ರೀತಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವುದೂ ನಿಶ್ಚಿತ. ಈ ವಿಷಯದಲ್ಲಿ ನಮಗಿಂತಲೂ ಕಾಂಗ್ರೆಸ್ನವರಿಗೇ ವಿಶ್ವಾಸ ಹೆಚ್ಚಾಗಿದೆ. | ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ
* ಲೋಕಾ ತನಿಖೆಯಂತೆ ನಡೆಯುವುದಿಲ್ಲ
* ಮೊದಲು ಪ್ರಕರಣದ ದಾಖಲೆಗಳ ಸಂಗ್ರಹ
* ಬಳಿಕ ನಡೆಯಲಿದೆ ಆರೋಪಿಗಳ ವಿಚಾರಣೆ
* ಸಿಎಂ ಕುಟುಂಬದವರು ಪ್ರಶ್ನೆ ಎದುರಿಸಬೇಕು
* ಅಧಿಕಾರಿಗಳಿಗೂ ಕಠಿಣ ಪ್ರಶ್ನೆ ಎದುರಾಗಲಿದೆ
* ಬಂಧಿಸಿ ವಿಚಾರಣೆ ನಡೆಸುವ ಅಧಿಕಾರವಿದೆ
* ಮುಡಾ ಅಧಿಕಾರಿಗಳ ಹೇಳಿಕೆ ಇಲ್ಲಿ ಮುಖ್ಯ
* ಸಿಎಂ ಸಹಿ, ಶಿಫಾರಸು ಸಾಬೀತಾದರೆ ಕಷ್ಟ
* ಸಿಎಂಗೆ ಕಾನೂನು ಸಂಕಷ್ಟ ಎದುರಾಗಲಿದೆ
* ಪ್ರಕರಣದ ಗಂಭೀರತೆ ತಗ್ಗಿಸುವ ಉದ್ದೇಶ
* ರಾಜಕೀಯ ಕಾವು ತಣ್ಣಗಾಗಿಸುವ ನಡೆ
* ಆಪ್ತರು,ತಜ್ಞರ ಸಲಹೆಗೆ ಸಮ್ಮತಿಸಿದ ಸಿಎಂ
* ತನಿಖೆ ಆಗಬೇಕೆಂಬುದೇ ಸಿಎಂ ಬಯಕೆ?
? ತನಿಖೆಯ ಪ್ರಕ್ರಿಯೆ 80 ದಿನ ನಡೆಯಲಿದೆ
* ತಡೆ ತಂದರೆ ಟೀಕೆಗೆ ಗುರಿ ಆಗುವ ಆತಂಕ
* ಲೋಕಾ ತನಿಖೆಯಲ್ಲಿ ಕ್ಲೀನ್ಚಿಟ್ ನಿರೀಕ್ಷೆ
* ಹೀಗಾದರೆ ತಮ್ಮ ಜತೆಗೆ ಪಕ್ಷಕ್ಕೂ ನಿರಾಳ
* ವಿಪಕ್ಷಗಳಿಗೆ ಮುಖಭಂಗ ಮಾಡುವ ಗುರಿ