

ಹೈದರಾಬಾದ್: ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ 'ಪುಷ್ಪ'-2 ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ಈಗಾಗಲೇ ಈ ಚಿತ್ರದ ಒಂದೊಂದೇ ಹಾಡು ಬಿಡುಗಡೆಯಾಗಿ ಸದ್ದು ಮಾಡುತ್ತಿದ್ದು, ಟೈಟಲ್ ಸಾಂಗ್ ಬಳಿಕ ರೊಮ್ಯಾಂಟಿಕ್ ಸಾಂಗ್ ಬಂದಿದೆ.
ದೇವಿ ಶ್ರೀಪ್ರಸಾದ್ ಸಂಗೀತದಲ್ಲಿ ಶ್ರೇಯಾ ಘೋಷಾಲ್ ಹಾಡಿರುವ ಹಾಡು ಅಭಿಮಾನಿಗಳ ಮನಗೆದ್ದಿದೆ. ಶ್ರೇಯಾ ಘೋಷಾಲ್ ಕಂಠದಲ್ಲಿ ಮೂಡಿ ಬಂದಿರುವ ಸವಿಗಾನ ಕೇಳುತ್ತಿದ್ದರೆ ಮೈಮರೆಸುವಂತಿದೆ. 6 ಭಾಷೆಗಳಲ್ಲಿ 'ಪುಷ್ಪ'-2 ಕಪಲ್ ಸಾಂಗ್ ರಿಲೀಸ್ ಆಗಿದ್ದು, ತೆಲುಗಿನಲ್ಲಿ ಆಸ್ಕರ್ ವಿಜೇತ ಚಂದ್ರಬೋಸ್ ಸಾಹಿತ್ಯ ಬರೆದಿದ್ದರು. ಕನ್ನಡದಲ್ಲಿ ವರದರಾಜ್ ಚಿಕ್ಕಬಳ್ಳಾಪುರ ಬರೆದಿದ್ದಾರೆ. ಕನ್ನಡ ವರ್ಷನ್ ಸಾಂಗ್
ಅರ್ಥಗರ್ಭಿತ ಸಾಹಿತ್ಯ ಹಾಗೂ ಶ್ರೇಯಾ ದನಿ ಸೇರಿ ಹಾಡು ಮ್ಯಾಜಿಕ್ ಕ್ರಿಯೇಟ್ ಮಾಡಿದೆ. ಕನ್ನಡ ಸಿನಿರಸಿಕರು ಹಾಡು ಕೇಳಿ ಮೆಚ್ಚಿಕೊಳ್ಳುತ್ತಿದ್ದಾರೆ.
'ನನ್‌ಸಾಮಿ' ಎಂದು ಶುರುವಾಗುವ ಹಾಡಿನ ಲಿರಿಕಲ್ ವೀಡಿಯೋ ಮಾತ್ರ ರಿಲೀಸ್ ಆಗಿದೆ. ಸೆಟ್‌ನಲ್ಲಿ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ರಿಹರ್ಸಲ್ ಮಾಡಿರುವ ಸಣ್ಣ ಸಣ್ಣ ಝಲಕ್ ಮಿಕ್ಸ್ ಮಾಡಿ ವೀಡಿಯೋ ಡಿಸೈನ್ ಮಾಡಿದ್ದಾರೆ. 'ಪುಷ್ಪ'ರಾಜ್ ಹಾಗೂ ಶ್ರೀವಲ್ಲಿ ಗೆಟಪ್‌ನಲ್ಲಿ ಇರುವ ಸಾಂಗ್ ರಿವೀಲ್ ಆಗಿಲ್ಲ. ಬಾಲಿವುಡ್‌ನ ಖ್ಯಾತ ಡ್ಯಾನ್ಸ್ ಮಾಸ್ಟರ್ ಗಣೇಶ್ ಆಚಾರ್ಯ ಡ್ಯಾನ್ಸ್ ಕೊರಿಯೋಗ್ರಫಿ ಮಾಡಿದ್ದಾರೆ. ಸಿಂಪಲ್ ಸ್ಟೆಪ್ಸ್‌ಗಳಲ್ಲಿ ಅಲ್ಲು ಅರ್ಜುನ್,ರಶ್ಮಿಕಾ ಮೋಡಿ ಮಾಡುವ ಸುಳಿವು ಸಿಗುತ್ತಿದೆ.
ಸಿಕ್ಕಾಪಟ್ಟೆ ಎಂಜಾಯ್ ಮಾಡುತ್ತಾ ತಂಡ ಸಾಂಗ್ ಶೂಟ್ ಮಾಡಿದೆ. ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್‌ನಲ್ಲಿ ಬಹಳ ಅದ್ಧೂರಿಯಾಗಿ 'ಪುಷ್ಪ'-2 ಸಿನಿಮಾ ಮೂಡಿ ಬರುತ್ತಿದೆ. 1000 ಕೋಟಿ ರೂ. ಕಲೆಕ್ಷನ್ ಟಾರ್ಗೆಟ್ ಮಾಡಿ ಸುಕುಮಾರ್ ಸಿನಿಮಾ ಕಟ್ಟಿಕೊಡುತ್ತಿದ್ದಾರೆ.
ಪುಷ್ಪರಾಜ್ ಆಗಿ ನಟಿಸಿ ಅಲ್ಲು ಅರ್ಜುನ್ ರಾಷ್ಟ್ರಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. ಹಾಗಾಗಿ ಸೀಕ್ವೆಲ್ ಮೇಲೆ ನಿರೀಕ್ಷೆ ಡಬಲ್ ಆಗಿದೆ. ಈ ಬಾರಿ ಬನ್ವರ್ ಸಿಂಗ್ ಶೇಖಾವತ್ ಹಾಗೂ ಪುಷ್ಪರಾಜ್ ಕಾದಾಟ ನೋಡಲು ಸಿನಿರಸಿಕರು ಕಾಯುತ್ತಿದ್ದಾರೆ. ಜೊತೆಗೆ ಶ್ರೀವಲ್ಲಿಯಾಗಿ ರಶ್ಮಿಕಾ ಪಾತ್ರ ಹೇಗೆ ಮುಂದುವರೆಯುತ್ತದೆ ಎನ್ನುವ ನಿರೀಕ್ಷೆ ಕೂಡ ಇದೆ. ಮಿರೋಸ್ಲಾ ಕುಬಾ ಬ್ರೋಜೆಕ್ ಛಾಯಾಗ್ರಹಣ, ಶ್ರೀಕಾಂತ್ ವಿಸ್ಸ ಸಂಭಾಷಣೆ ಚಿತ್ರಕ್ಕಿದೆ. ಜಗಪತಿ ಬಾಬು, ಪ್ರಕಾಶ್ ರಾಜ್, ಅನಸೂಯ ಭಾರಧ್ವಜ್, ಸುನೀಲ್, ಡಾಲಿ ಧನಂಜಯ, ರಾವ್ ರಮೇಶ್, ಅಜಯ್ ಘೋಷ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.
ಆಗಸ್ಟ್ 15ಕ್ಕೆ 'ಪುಷ್ಪ'-2 ಸಿನಿಮಾ ತೆರೆಗೆ ಬರಲಿದೆ. 3 ವರ್ಷಗಳ ಹಿಂದೆ ಬಂದಿದ್ದ ಸರಣಿಯ ಮೊದಲ ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಪ್ರೀಕ್ವೆಲ್ ಆಲ್ಬಮ್ ಕೂಡ ಹಿಟ್ ಸಖತ್ ಸದ್ದು ಮಾಡಿತ್ತು.