ಮನಸ್ಸಿನ ಪಾವಿತ್ರ್ಯವೇ ಪ್ರಧಾನ

Pure mind 25 Jan 20
Published on
ತುಸು ಹೊತ್ತಿನ ನಂತರ ಪುನಃ ಸ್ವಸ್ಥಮನಸ್ಕನಾದ ಭೀಷ್ಮನು ತಾನು ತಿಳಿಸುತ್ತಲಿದ್ದ ಧರ್ಮದ ವಿವರಣೆಯನ್ನು ಹೀಗೆ ಮುಂದುವರಿಸಿದನು: ‘ಯುಧಿಷ್ಠಿರ! ವಿಪ್ರ ಹಾಗೂ ಕ್ಷತ್ರಿಯ ವರ್ಣದವರಿಗಾಗಿ ಧರ್ಮಪಾಲನೆಯ ನೀತಿಯನ್ನು ನಿರ್ದೇಶಿಸಿರುವಂತೆಯೇ ವೈಶ್ಯರಿಗೆ ತಕ್ಕ ಧರ್ಮವನ್ನು ನಿರ್ದೇಶಿಸಲಾಗಿದೆ. ಅವರು ಕೂಡ ದಾನಕರ್ಮ, ಶಾಸ್ತ್ರಾಧ್ಯಯನ, ಯುದ್ಧಕರ್ವದಿಗಳನ್ನು ಆಚರಿಸಬೇಕು. ಅವರು ಪಾವಿತ್ರ್ಯಾಪೂರ್ವಕವಾಗಿಯೂ ನ್ಯಾಯಯುತವಾಗಿಯೂ ಧನಸಂಗ್ರಹ ಮಾಡಲು ಅರ್ಹರು. ಲೋಕದಲ್ಲಿ ಓರ್ವ ತಂದೆಯು ಮಕ್ಕಳ ಪಾಲನೆ ಪೋಷಣೆ ಮಾಡುವಂತೆ ವೈಶ್ಯವರ್ಣದವರು ಪಶು ಹಾಗೂ ಅನ್ಯ ಪ್ರಾಣಿಗಳಿಗೆ ತಕ್ಕ ಪಾಲನೆ-ಪೋಷಣೆ ನೀಡಬೇಕು. ವಿತ್ತರಕ್ಷಣೆಯ ವಿಶೇಷ ಕರ್ಮವನ್ನು ಬ್ರಹ್ಮದೇವನು ವೈಶ್ಯರಿಗೇ ನಿರ್ದೇಶಿಸಿದ್ದಾನೆ.

ವೈಶ್ಯರು ತಮ್ಮ ಪ್ರಧಾನ ವೃತ್ತಿಯನ್ನಾಗಿ ಅವಲಂಬಿಸುವ ಪಶುಪಾಲನೆ ಮತ್ತು ಕೃಷಿಕಾರ್ಯಗಳ ಮೂಲಕ ಗಳಿಸುವ ಹಾಲು-ಹೈನು, ದವಸಧಾನ್ಯ ಮುಂತಾದವುಗಳಲ್ಲಿ ಪಾಲನಾವೆಚ್ಚವನ್ನು ಕಳೆದು ಮಿಕ್ಕಿರುವ ಉತ್ಪನ್ನದಲ್ಲಿ ಆರರ ಒಂದು ಭಾಗದಷ್ಟನ್ನು ತನ್ನ ಜೀವಿತದ ಅನುಭೋಗಕ್ಕಾಗಿ ಇರಿಸಿಕೊಳ್ಳಬೇಕು. ಅನ್ಯರು ಸಾಕಿರುವ ಗೋವುಗಳಿಗೆ ರಕ್ಷಣೆ-ಪೋಷಣೆ ನೀಡಿದ್ದರೆ ಅದಕ್ಕೆ ಪ್ರತಿಯಾಗಿ ಹಾಲು ಹಿಂಡುವ ಒಂದು ಗೋವನ್ನು ಹಾಗೂ ಎತ್ತನ್ನು ತನಗಾಗಿ ಪಡೆದುಕೊಳ್ಳಬೇಕು. ಹಾಗೆ ತನ್ನ ವಶಕ್ಕೆ ಪಡೆದ ಪಶುಗಳಿಂದ ದೊರೆಯುವ ಉತ್ಪನ್ನವನ್ನು ವಿಕ್ರಯಗೈದು ಅದರ ಲಾಭದಲ್ಲಿ ಏಳನೇ ಒಂದು ಭಾಗವನ್ನಷ್ಟೇ ತನಗಾಗಿ ಉಳಿಸಿಕೊಂಡು ಮಿಕ್ಕಿದ ಅಂಶಗಳನ್ನು ರಾಜನ ಕೋಶಕ್ಕೆ ಅರ್ಪಿಸಬೇಕು.

ಈ ವ್ಯವಹಾರದಂತೆಯೇ ಅನ್ಯರು ಬೆಳೆಸಿರುವ ಕೃಷಿ ಉತ್ಪನ್ನಗಳಲ್ಲಿಯೂ ಪೋಷಣೆಯ ವೆಚ್ಚವನ್ನು ಭರಿಸಿ ಮಿಕ್ಕಿರುವ ಉತ್ಪನ್ನಗಳಲ್ಲಿಯೂ ವೈಶ್ಯರು ತನಗಾಗಿ ಏಳರಲ್ಲಿ ಒಂದು ಭಾಗವನ್ನು ಮಾತ್ರ ನಿರ್ವಹಣಾ ವೇತನದ ರೂಪದಲ್ಲಿ ಪಡೆದುಕೊಳ್ಳಬೇಕು. ಇದು ಅರ್ಥನೀತಿಯಾಗಿದೆ. ಆದರೆ ವೈಶ್ಯನು ಕೃಷಿಕಾರ್ಯ ಮತ್ತು ಪಶುಪಾಲನೆಗೆ ತಾನು ಯುಕ್ತ ರೀತಿಯಲ್ಲಿ ನೆರವಾಗಬೇಕು ಎಂಬುದನ್ನು ಯಾವ ಕಾರಣಕ್ಕೂ ಎಂದಿಗೂ ನಿರಾಕರಿಸತಕ್ಕದ್ದಲ್ಲ. ಅರ್ಥಾತ್ ಆ ಕೃಷಿಕ ಮಾಲೀಕನು ತನ್ನ ಕೆಲಸಕಾರ್ಯಗಳಿಗಾಗಿ ಇನ್ನಾರದೋ ಸಹಾಯವನ್ನು ಅಥವಾ ಸಂದರ್ಭಾನುಸಾರ ಆವಶ್ಯಕವಾಗಿರುವವುಗಳನ್ನು ಯಾಚಿಸುವ ಪ್ರಮೇಯ ಉಂಟಾಗದಂತೆ ಅನ್ವಯಿತ ವೈಶ್ಯನು ನೋಡಿಕೊಳ್ಳಬೇಕಾದುದು ಅವನ ಕರ್ತವ್ಯಧರ್ಮವಾಗಿದೆ. ವೈಶ್ಯನು ನಿರಂತರ ಉದ್ಯೋಗಶೀಲನಾಗಿದ್ದುಕೊಂಡು ತನ್ನ ಧರ್ಮ-ಕರ್ಮಗಳಿಗೆ ವ್ಯತಿರಿಕ್ತನಾಗಿರದಂತೆ ವರ್ತಿಸಬೇಕಾಗುತ್ತದೆ.

ಬ್ರಹ್ಮ, ಕ್ಷತ್ರಿಯ, ವೈಶ್ಯ ವರ್ಣಗಳವರಿಗೆ ಧರ್ಮ-ಕರ್ಮಗಳನ್ನು ನಿಗದಿಗೊಳಿಸಿ ನಿರ್ದೇಶಿಸಿರುವ ನೀತಿಯನ್ನು ಅನುಸರಿಸಲು ಸಾಧ್ಯವಾಗದ, ನಿರ್ವಹಿಸಲಾರದವರೂ ಇರುತ್ತಾರೆ. ಅವರು ಸದಾ ಅನ್ಯರ ಆಶ್ರಯವನ್ನು ಪಡೆದೇ ಅವಲಂಬಿತ ಜೀವನ ನಡೆಸುತ್ತಾರೆ. ಪ್ರಜಾಪತಿಯು ಅವರನ್ನೆಲ್ಲ ನಾಲ್ಕನೆಯ ವರ್ಣದವರನ್ನಾಗಿ ಪರಿಗಣಿಸುವವನು. ಅವರಿಗೂ ಸಹ ಮಾನವರಾಗಿ ಅನುಸರಿಸಲೇಬೇಕಾಗಿರುವ ನಿತ್ಯಕರ್ಮದ ಧರ್ಮವನ್ನು ನಿರ್ದೇಶಿಸಿರುವನು. ಅವರು ಸದಾ ಸೇವಾವೃತ್ತಿಯನ್ನು ಅನುಸರಿಸಿಕೊಂಡು ಬಾಳಬೇಕು. ಮೊದಲ ಮೂರು ವರ್ಣಗಳವರಿಗೆ ಅಗತ್ಯವಿರುವ ಸೇವಾಕೈಂಕರ್ಯವನ್ನು ನಿತ್ಯದ ಕರ್ಮವೆಂದು ಭಾವಿಸಬೇಕು. ಹಾಗಿದ್ದರೂ ತನ್ನ ಯಜಮಾನನ ಸಮ್ಮತಿ ಪಡೆದು ಧಾರ್ವಿುಕ ಕಾರ್ಯವನ್ನು ಕೈಗೊಳ್ಳಬಹುದು. ಹೀಗೆ ತಮ್ಮ ಸೇವಾಕಾಯಕದಲ್ಲಿ ತೊಡಗಿರುವ ಅವರ ಉದರ ಪೋಷಣೆ ಮತ್ತು ಇನ್ನಿತರ ಅಗತ್ಯಗಳನ್ನು ಸೇವೆ ಪಡೆಯುತ್ತಿರುವವರು ಯುಕ್ತವಾದ ಬಗೆಯಲ್ಲಿ ಒದಗಿಸುತ್ತಿರಬೇಕು. ಅವರು ಉಚ್ಚ ವರ್ಣದವರಂತೆ ಯಜ್ಞಗಳನ್ನು ಮಾಡಬಹುದು. ಶ್ರದ್ಧೆ ಮತ್ತು ಮನಸ್ಸಿನ ಪಾವಿತ್ರ್ಯೇ ಎಲ್ಲದಕ್ಕೂ ಎಲ್ಲಕ್ಕಿಂತ ಪ್ರಧಾನವಾದುದು. ಮಾನಸಿಕ ಸಂಕಲ್ಪ ಭಾವನಾತ್ಮಕ ನಡೆಯುಳ್ಳ ಯಜ್ಞಕ್ಕೆ ಎಲ್ಲ ವರ್ಣದವರೂ ಸಮಾನ ಅಧಿಕಾರಸ್ಥರೇ ಆಗಿರುತ್ತಾರೆ.’

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net