

ಕೆ.ಆರ್.ನಗರ: ಕರೊನಾ ಸೋಂಕು ಹರಡುವಿಕೆ ಮತ್ತು ಲಾಕ್‌ಡೌನ್‌ನಿಂದಾಗಿ ದೇಶವೇ ತತ್ತರಿಸಿದೆ. ಎಲ್ಲ ಕ್ಷೇತ್ರಗಳೂ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿವೆ. ತೊಂದರೆಗೊಳಗಾಗಿರುವ ಕ್ಷೇತ್ರಗಳ ಆರ್ಥಿಕ ಪುನಶ್ಚೇತನಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನುದಾನ ನೀಡಿ ಪ್ರೋತ್ಸಾಹಿಸುತ್ತಿವೆ.
ಇಂತಹ ಸಂದರ್ಭದಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ ಹಾಗೂ ರಾಗಿ ಖರೀದಿಸಿರುವ ಸರ್ಕಾರ ಸಂಬಂಧಪಟ್ಟ ರೈತರಿಗೆ ಹಣ ಪಾವತಿಸದೆ ತೊಂದರೆ ಅನುಭವಿಸುವಂತೆ ಮಾಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ತಾಲೂಕಿನಾದ್ಯಂತ ಬೆಂಬಲ ಬೆಲೆ ಯೋಜನೆಯಡಿ ಕಳೆದ ಫೆಬ್ರವರಿಯಿಂದ ಮೇ ವರೆಗೆ 4577 ರೈತರಿಂದ 1,09,465 ಕ್ವಿಂಟಾಲ್ ಭತ್ತ ಮತ್ತು 1624 ರೈತರಿಂದ 29,706.39 ಕ್ವಿಂಟಾಲ್ ರಾಗಿ ಖರೀದಿ ಮಾಡಲಾಗಿದೆ. ಆದರೆ, ರೈತರಿಗೆ ಸರ್ಕಾರದಿಂದ ಹಣ ಜಮೆ ಆಗಿಲ್ಲ. ಉಗ್ರಾಣಕ್ಕೆ ಭತ್ತ ಅಥವಾ ರಾಗಿಯನ್ನು ತಲುಪಿಸಿದ 7 ದಿನಗಳಲ್ಲಿ ರೈತರ ಬ್ಯಾಂಕ್ ಖಾತೆಗೆ ಹಣ ಸಂದಾಯವಾಗಬೇಕು. ಆದರೆ, 4 ತಿಂಗಳಾದರೂ ಆ ಕೆಲಸವಾಗಿಲ್ಲ.
ಇದರಿಂದ ಮೊದಲೇ ಸಂಕಷ್ಟದಲ್ಲಿರುವ ರೈತರು ಮತ್ತಷ್ಟು ತೊಂದರೆಗೆ ಒಳಗಾಗಿದ್ದಾರೆ.
ತಾವು ಬೆಳೆದ ಬೆಳೆಗೆ ಸರ್ಕಾರದಿಂದ ಬೆಂಬಲೆ ಬೆಲೆ ಸಿಕ್ಕಿದ್ದು, ಅದರಿಂದ ಸಾಲ-ಸೋಲ ತೀರಿಸಿಕೊಂಡು ಮುಂದಿನ ವ್ಯವಸಾಯಕ್ಕೆ ಅನುಕೂಲ ಮಾಡಿಕೊಳ್ಳಬಹುದು ಎಂಬ ಆಶಾಭಾವನೆ ಹೊಂದಿದ್ದ ರೈತರಿಗೆ ಕರೊನಾ ಲಾಕ್‌ಡೌನ್ ಸಮಸ್ಯೆ ತಂದೊಡ್ಡಿತು. ಹಣ್ಣು, ತರಕಾರಿ, ಹೂವು ಇನ್ನಿತರ ಬೆಳೆಗಳಲ್ಲಿ ನಷ್ಟ ಉಂಡಿರುವ ರೈತರ ನೆರವಿಗೆ ಭತ್ತ ಮತ್ತು ರಾಗಿ ಮಾರಾಟದ ಹಣವಾದರೂ ಬಂದಿದ್ದರೆ ಒಂದಿಷ್ಟು ಅನುಕೂಲವಾಗುತ್ತಿತ್ತು.
ಆದರೆ, ಈ ವಿಷಯದಲ್ಲಿ ಸರ್ಕಾರ ನಿರ್ಲಕ್ಷೃ ಮತ್ತು ವಿಳಂಬ ಧೋರಣೆ ಅನುಸರಿಸಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತು ‘ಲೌಡ್‌ಸ್ಪೀಕರ್’ನಲ್ಲಿ ಹಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಿತ್ಯ ಅಲೆಯುವುದೇ ಕೆಲಸವಾಗಿದೆ
ಜೀವನವೇ ಬೇಸರವೆನಿಸಿದೆ. ಫೆಬ್ರವರಿಯಲ್ಲಿ 21 ಕ್ವಿಂಟಾಲ್ ಭತ್ತ ಬಿಟ್ಟಿದ್ದು, ನಮ್ಮ ಖಾತೆಗೆ ಇನ್ನೂ ಹಣ ಬಂದಿಲ್ಲ. ಉಗ್ರಾಣ ನಿಗಮದ ಅಧಿಕಾರಿಗಳನ್ನು ಕೇಳಿದರೆ ಕೃಷಿ ಅಧಿಕಾರಿಗಳ ಬಳಿ ಹೋಗಿ ಎನ್ನುತ್ತಾರೆ. ಅಲ್ಲಿ ಕೇಳಿದರೆ ಇಲ್ಲಿಗೆ ಕಳುಹಿಸುತ್ತಾರೆ. ಇದರಿಂದಾಗಿ ದಿನನಿತ್ಯ ನಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಇಲಾಖೆ ಕಚೇರಿಗಳಿಗೆ ಹಣ ಕೊಡಿಸುವಂತೆ ಅಲೆಯುವುದೇ ಕೆಲಸವಾಗಿದ್ದು, ಬೇಸರವೆನಿಸಿದೆ.
ಕೀರ್ತಿ, ರೈತ, ದೆಗ್ಗನಹಳ್ಳಿ
ಸರ್ಕಾರಕ್ಕಿಂತ ದಲ್ಲಾಳಿಗಳೇ ಪರವಾಗಿಲ್ಲ
ನಾನು ಆರಂಭದಲ್ಲಿ ಬಿಟ್ಟಿದ್ದ ಭತ್ತದ ಹಣ ಸ್ವಲ್ಪ ಬಂದಿದೆ. ಆದರೆ, ಏಪ್ರಿಲ್ 23ರಂದು 8 ಕ್ವಿಂಟಾಲ್ ರಾಗಿಯನ್ನು ನಮ್ಮ ಕುಟುಂಬಸ್ಥರ ಹೆಸರಿನಲ್ಲಿ ಬಿಡಲಾಗಿದ್ದು, ಈವರೆಗೂ ಹಣ ಬಂದಿಲ್ಲ. ಬ್ಯಾಂಕ್‌ಗೆ ಅಲೆದು ಸಾಕಾಗಿದೆ. ಉಗ್ರಾಣ ನಿಗಮದ ಬದಲು ದಲ್ಲಾಳಿಗಳಿಗೆ ಭತ್ತ ನೀಡಿದ್ದರೆ ತಕ್ಷಣ ಹಣ ನೀಡುತ್ತಿದ್ದರು. ಈಗ ನಮ್ಮ ಸಮಸ್ಯೆ ಕೇಳುವವರು ಯಾರು? ಜನಪ್ರತಿನಿಧಿಗಳು ಈ ಸಮಸ್ಯೆ ಬಗ್ಗೆ ಗಮನಹರಿಸಿ ಶೀಘ್ರವಾಗಿ ಹಣ ಪಾವತಿಸುವಂತೆ ಕ್ರಮ ಕೈಗೊಳ್ಳಬೇಕು.
ಎ.ಎಸ್.ರಾಜು, ರೈತ, ಅರಕೆರೆ
ವ್ಯವಸಾಯ ಪ್ರಾರಂಭಿಸಲು ಸಾಧ್ಯವಾಗಿಲ್ಲ
ಕೃಷಿ ಚಟುವಟಿಕೆ ಆರಂಭಿಸಲು ಹಣವಿಲ್ಲ. 8-10 ದಿನಗಳಲ್ಲಿ ಹಣ ಬರುತ್ತದೆಂದು ಅಧಿಕಾರಿಗಳು ಹೇಳಿದ್ದರಿಂದ 46 ಕ್ವಿಂಟಾಲ್ ರಾಗಿ ಬಿಟ್ಟಿದ್ದೆ. ಅದರ ಬಾಬ್ತು 1.46 ಲಕ್ಷ ರೂ. ಬರಬೇಕಿದೆ. ಆದರೆ ಇನ್ನೂ ಬಂದಿಲ್ಲ. ಇದರಿಂದಾಗಿ ನಮ್ಮ ಬಳಿ ಹಣವಿಲ್ಲದೆ ಈ ಹಣವನ್ನೇ ಕಾಯುತ್ತಾ ಮುಂಗಾರಿನ ವ್ಯವಸಾಯ ಪ್ರಾರಂಭಿಸಲು ಸಾಧ್ಯವಾಗಿಲ್ಲ.
ಎಚ್.ಪಿ.ಸಂತೋಷ್‌ಕುಮಾರ್, ರೈತ, ಹೊಸಕೋಟೆ
ಬೀದಿಗಿಳಿದು ಹೋರಾಟ ಮಾಡುತ್ತೇವೆ
ಕರೊನಾ ಸಮಸ್ಯೆಯಿಂದ ಮೊದಲೇ ನೊಂದಿರುವ ರೈತರ ಭತ್ತ ಮತ್ತು ರಾಗಿ ಪಡೆದುಕೊಂಡು ಹಣ ಸಂದಾಯ ಮಾಡದೆ ಇರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ತಮ್ಮದು ರೈತಪರ ಸರ್ಕಾರವೆಂದು ಬೀಗುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಕ್ಷಣ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ನಮ್ಮ ಪಕ್ಷ ಮತ್ತು ರೈತ ಸಂಘಟನೆಗಳು ಬೀದಿಗಿಳಿದು ಉಗ್ರ ಹೋರಾಟ ಮಾಡಬೇಕಾಗುತ್ತದೆ.
ಗರುಡಗಂಭದಸ್ವಾಮಿ, ಅಧ್ಯಕ್ಷ, ಸ್ವರಾಜ್ ಇಂಡಿಯಾ ಪಕ್ಷ
ಈಡೇರದ ಜಂಟಿ ನಿರ್ದೇಶಕರ ಭರವಸೆ
ಭತ್ತವನ್ನು ಎ ಗ್ರೇಡ್ ಮತ್ತು ಬಿ ಗ್ರೇಡ್ ಎಂದು ಗುರುತಿಸಿ ಖರೀದಿಸಲಾಗಿದೆ. ಖರೀದಿ ಕೇಂದ್ರ ಆರಂಭವಾದಗಲೇ ನಾವು 2 ಆರ್‌ಟಿಸಿಯಿಂದ 76 ಕ್ವಿಂಟಾಲ್ ಭತ್ತ ಬಿಟ್ಟಿದ್ದು, ಈ ವಾರ 65 ಸಾವಿರ ರೂ. ಬಂದಿದೆ. ಬಾಕಿ 75 ಸಾವಿರ ರೂ. ಬರಬೇಕಿದೆ. ಈ ಕುರಿತು ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ಎರಡು ಬಾರಿ ದೂರು ನೀಡಿದ್ದೆವು. ಜರೂರಾಗಿ ಹಣ ಪಾವತಿಸುವಂತೆ ಉಗ್ರಾಣ ನಿಗಮದವರಿಗೆ ಪತ್ರ ಬರೆಯುವುದಾಗಿ ಅವರು ಭರವಸೆ ನೀಡಿದ್ದರು. ಆದರೆ, ಆ ಕೆಲಸ ಇನ್ನೂ ಆಗಿಲ್ಲ.
ಅರ್ಜುನಹಳ್ಳಿ ರಾಮ್‌ಪ್ರಸಾದ್, ತಾಲೂಕು ರೈತ ವಿದ್ಯಾರ್ಥಿ ಘಟಕದ ಅಧ್ಯಕ್ಷ
ಕಾರಣವೇನೆಂಬುದು ನಮಗೂ ತಿಳಿದಿಲ್ಲ
ಕೃಷಿ ಇಲಾಖೆಯಿಂದ ಆರಂಭದಲ್ಲಿ ಭತ್ತ ಮತ್ತು ರಾಗಿಯ ಗುಣಮಟ್ಟ ಪರೀಕ್ಷೆ ಮಾಡಿ ರೈತರಿಗೆ ಗುರುತಿನ ಸಂಖ್ಯೆ(ಎಫ್‌ಐಡಿ) ನೀಡಲಾಗಿದೆ. ನಂತರ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ನಗದು ಜಮೆ ಆಗಬೇಕಿದೆ. ಆದರೆ, ಇದುವರೆಗೆ ಆ ಕೆಲಸ ಆಗಿಲ್ಲದಿರುವುದಕ್ಕೆ ಕಾರಣವೇನೆಂಬುದು ತಿಳಿದಿಲ್ಲ. ಪ್ರತಿನಿತ್ಯ ನೂರಾರು ರೈತರು ನಮ್ಮ ಬಳಿ ಬಂದು ಈ ಬಗ್ಗೆ ಕೇಳುತ್ತಿದ್ದು, ಉಗ್ರಾಣ ನಿಗಮಕ್ಕೆ ಹೋಗಿ ವಿಚಾರಿಸುವಂತೆ ಅವರಿಗೆ ಹೇಳಿ ಕಳುಹಿಸುತ್ತಿದ್ದೇವೆ.
ಶಶಿಧರ್, ಸಹಾಯಕ ನಿರ್ದೇಶಕರು, ಕೃಷಿ ಇಲಾಖೆ
ಬ್ಯಾಂಕ್ ಅಧಿಕಾರಿಗಳ ಅಸಹಕಾರ
ರೈತರು ನಮಗೆ ನೀಡಿರುವ ಖಾತೆ ಮತ್ತು ಆಧಾರ್ ಸಂಖ್ಯೆಯಲ್ಲಿನ ದೋಷ, ಭೂಮಿ ಬದಲಾವಣೆ ಹಾಗೂ ಬ್ಯಾಂಕ್‌ನ ತಾಂತ್ರಿಕ ಸಮಸ್ಯೆಯಿಂದ ಹಣ ಪಾವತಿ ವಿಳಂಬವಾಗಿದೆ. ಇದರ ಬಗ್ಗೆ ಬ್ಯಾಂಕ್ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಹಣಕ್ಕೆಂದು ಬ್ಯಾಂಕ್‌ಗೆ ಹೋಗುವ ರೈತರಿಗೆ ಕೆಲವು ಬ್ಯಾಂಕ್ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ.
ಎಸ್.ಟಿ.ರತ್ನಮ್ಮ, ವ್ಯವಸ್ಥಾಪಕಿ, ಕರ್ನಾಟಕ ರಾಜ್ಯ ಉಗ್ರಾಣ ನಿಗಮ
ರೈತರಿಂದ ಬೆಳೆ ಖರೀದಿ ಮಾಡಿದ ಮೇಲೆ ಸಕಾಲದಲ್ಲಿ ಹಣ ಪಾವತಿಸುವುದು ರಾಜ್ಯ ಉಗ್ರಾಣ ನಿಗಮದ ಕರ್ತವ್ಯ. ಕಷ್ಟಪಟ್ಟು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗಲಿದೆ ಎಂಬ ಕಾರಣದಿಂದ ಖರೀದಿ ಕೇಂದ್ರಕ್ಕೆ ರೈತರು ಭತ್ತ, ರಾಗಿ ಬಿಟ್ಟಿದ್ದಾರೆ. ಆದರೆ, ಹಣ ಪಾವತಿಗೆ ವಿಳಂಬ ಮಾಡಿರುವುದರಿಂದ ಸರ್ಕಾರ ಬಡ್ಡಿ ಸೇರಿಸಿ ಕೊಡಬೇಕು. ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುತ್ತೇನೆ.
ಅಚ್ಯುತಾನಂದ, ಅಧ್ಯಕ್ಷರು, ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ