ಪಿಡಿಪಿಎಸ್ ಅಡಿ ಈರುಳ್ಳಿ ಖರೀದಿ

Onion
Published on

ಬೆಂಗಳೂರು: ಈರುಳ್ಳಿ ಬೆಲೆ ಕುಸಿತ ಹಿನ್ನೆಲೆಯಲ್ಲಿ ಪಿಡಿಪಿಎಸ್ (ಪ್ರೈಸ್ ಡಿಪಿಷಿಯನ್ಸಿ ಪ್ರೊಕ್ಯೂರ್‌ಮೆಂಟ್ ಸ್ಕೀಂ) ಅಡಿಯಲ್ಲಿ ಖರೀದಿಸಲು ಪ್ರಯತ್ನ ನಡೆದಿದೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ.

ಮುಂಗಾರು ಹಂಗಾಮಿನಲ್ಲಿ ಸುರಿದ ಭಾರೀ ಮಳೆಗೆ ಕಟಾವಿಗೆ ಬಂದಿರುವ ಈರುಳ್ಳಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಕಳೆದ ಸಾಲಿನ ಸರಾಸರಿ ಮಾರುಕಟ್ಟೆ ಬೆಲೆಗೆ ಹೋಲಿಸಿದರೆ ಮಾರಾಟ ದರ ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ಇದೆ. ಈ ಹಿನ್ನೆಲೆಯಲ್ಲಿ ಖರೀದಿಗೆ ಅನುಮತಿ ನೀಡಬೇಕೆಂದು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ಮುಂಗಾರು ಮತ್ತು ಹಿಂಗಾರು ಸೇರಿ ಒಟ್ಟು 2.05 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗಿದೆ. ವಾರ್ಷಿಕ ಉತ್ಪನ್ನ 27 ಲಕ್ಷ ಮೆಟ್ರಕ್ ಟನ್‌ಗಳಾಗಿದೆ.

ಬೆಳೆ ನಾಶವಾಗಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸಭೆ ಸೇರಿ ಚರ್ಚಿಸಿದ್ದು, ಎಂಐಎಸ್ (ಮಾರುಕಟ್ಟೆ ಮಧ್ಯಪ್ರವೇಶ ಯೋಜನೆ) ಅಲ್ಲಿ ಖರೀದಿಸಲು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಶಿಫಾರಸು ಮಾಡಿದ್ದರು. ಆದರೆ, ಪಿಡಿಪಿಎಸ್ ಅಡಿ ಖರೀದಿ ಸೂಕ್ತವೆಂದು ಅನುಮತಿ ಕೋರಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net