ದಾಸಕೂಟದ ಕೀರ್ತಿಕಲಶ ಪುರಂದರ ದಾಸರು: ಇಂದು ನಾಳೆ ಪುರಂದರ ದಾಸರ ಆರಾಧನಾ ಮಹೋತ್ಸವ

Aradhane
Published on

| ಡಾ. ಗುರುರಾಜ ಪೋಶೆಟ್ಟಿಹಳ್ಳಿ

ಕನ್ನಡ ಸಾಹಿತ್ಯ ಚರಿತ್ರೆಯ ಪ್ರಮುಖ ಕಾಲ ಘಟ್ಟಗಳಲ್ಲಿ ಒಂದು ದಾಸ ಸಾಹಿತ್ಯ. ಧಾರ್ವಿುಕ ಜಾಗೃತಿ ಮೂಡಿಸುತ್ತ ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಗಣನೀಯ ಕೊಡುಗೆ ನೀಡುತ್ತ ಬಂದವರು ಹರಿದಾಸರು. ಭಕ್ತಿ ಸಾಹಿತ್ಯದ ರಚನೆಯ ಮೂಲಕ ಸಂಸ್ಕೃತಿಯ ಹರಿಕಾರರಾದವರು ಈ ದಾಸವರೇಣ್ಯರು. ಪುರಂದರದಾಸರು ಇಂತಹ ಹರಿದಾಸರ ಸಾಲಿನಲ್ಲಿ ವಿಶಿಷ್ಟ ಸ್ಥಾನದಲ್ಲಿರುವವರು.

‘ದಾಸರೆಂದರೆ ಪುರಂದರ ದಾಸರಯ್ಯ’- ಇದು ಗುರುಗಳಾದ ಶ್ರೀವ್ಯಾಸರಾಜರು ತಮ್ಮ ಶಿಷ್ಯ ಪುರಂದರದಾಸರನ್ನು ಕುರಿತು ಹೇಳಿದ ಮಾತು. ಅಷ್ಟೇ ಅಲ್ಲ, ಅವರು ದಾಸರ ಲಕ್ಷಣಗಳನ್ನು ಹೇಳುತ್ತ, ಉದರಂಭರಣೆಗಾಗಿ ತಾಳ-ತಂಬೂರಿ ಹಿಡಿದು ಬೀದಿಯಲ್ಲಿ ಗಾಯನವನ್ನು ಮಾಡುವವರೆಲ್ಲ ದಾಸರಲ್ಲ. ನೀತಿಯನ್ನರಿತು ತ್ಯಾಗ ಮನೋಭಾವದಿಂದ ಶ್ರೀಕೃಷ್ಣನನ್ನು ಮನಸಾರೆ ಪೂಜಿಸುವ ಪುರಂದದಾಸರೇ ಇತರರಿಗೆ ಮಾದರಿ ಎನ್ನುತ್ತಾರೆ. ವಜ್ರ ವ್ಯಾಪಾರಿ, ನವಕೋಟಿ ನಾರಾಯಣ ಶ್ರೀನಿವಾಸ ನಾಯಕ, ಪತ್ನಿಯ ಕಾರುಣ್ಯದಿಂದ ತನ್ನದೆಲ್ಲವನ್ನೂ ಕೃಷ್ಣಾರ್ಪಣೆ ಮಾಡಿ ವ್ಯಾಸರಾಜರ ಅನುಗ್ರಹಕ್ಕೆ ಬಂದಾಗ ಅವನಿಗೆ ವೈಷ್ಣವ ದೀಕ್ಷೆ ನೀಡಿ ಪುರಂದರ ಎಂಬ ಅಂಕಿತವನ್ನು ನೀಡಿದರು. ತಮ್ಮ ಶಿಷ್ಯನ ಅಪರಿಮಿತ ಕೀರ್ತನ ಸಾಹಿತ್ಯವು ಉಪನಿಷತ್ತುಗಳ ಸಾರ ಎಂಬುದನ್ನು ಮನಗಂಡು ಆ ಸಾಹಿತ್ಯಕ್ಕೆ ಪುರಂದರೋಪನಿಷತ್ ಎಂದು ನಾಮಕರಣ ಮಾಡುತ್ತಾರೆ.

ಇಂತಹ ಹೆಗ್ಗಳಿಕೆಯ ಪುರಂದರದಾಸರದು ಬಹುಶ್ರುತ ಪ್ರತಿಭೆ. ಹುಟ್ಟಿನಿಂದ ದಾಸರು ಆಗರ್ಭ ಶ್ರೀಮಂತರು. ಬಾಲ್ಯದಿಂದಲೇ ಪ್ರತಿಭಾವಂತರು, ಸಂಗೀತ ಸಾಹಿತ್ಯಾಭ್ಯಾಸಿಗಳು. ಅವರು ನಾರದಾವತಾರವೆಂದು ವೈಷ್ಣವರ ನಂಬಿಕೆ. ಕರ್ನಾಟಕ ಸಂಗೀತಕ್ಕೆ ದಾಸರ ಕೊಡುಗೆಯನ್ನು ಗಮನಿಸುವುದಾದರೆ ಸರಳೆ, ಜಂಟಿವರಸೆ, ಅಲಂಕಾರಗಳು ಇತ್ಯಾದಿಗಳ ಶಾಸ್ತ್ರೀಯ ಅಳವಡಿಕೆ ಅವರಿಂದಲೇ ಆರಂಭವಾಗಿದೆಯೆನ್ನಬೇಕು. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಆರಂಭಿಕ ಹಂತದಲ್ಲಿಯೇ ‘ಮಾಯಾ ಮಾಳವ ಗೌಳ’ ರಾಗದ ನಿರೂಪಣೆಯೂ ಅವರದೇ. ಪುರಂದರರು ವಾಗ್ಗೇಯಕಾರರಷ್ಟೇ ಅಲ್ಲ, ಲಕ್ಷಣಕಾರರೂ ಹೌದು. ದೇಶಿ ರಾಗಗಳನ್ನು ಕೀರ್ತನೆಗಳಿಗೆ ಅಳವಡಿಸಿದ್ದು, ವರ್ಣಮಟ್ಟುಗಳ ಆವಿಷ್ಕಾರವೂ ಅವರ ಕಾಲದ್ದೇ. ಕರ್ನಾಟಕ ಸಂಗೀತವಷ್ಟೆ ಅಲ್ಲ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದ ಮೇಲೂ ಅವರ ಪ್ರಭಾವ ಇರುವಂತೆ ಕಾಣುತ್ತದೆ. ಪ್ರಸಿದ್ಧ ಹಿಂದೂಸ್ಥಾನಿ ಗಾಯಕ ತಾನ್​ಸೇನನ ಗುರುವಾಗಿದ್ದ ಸ್ವಾಮಿ ಹರಿದಾಸರು, ಪುರಂದರದಾಸರ ಶಿಷ್ಯರಂತೆ. ಕರ್ನಾಟಕ ಸಂಗೀತಕ್ಕೊಂದು ಕ್ರಮಬದ್ಧ ವ್ಯಾಕರಣ ಕೊಟ್ಟ ಕಾರಣ ವಿದ್ವಾಂಸರು ಅವರನ್ನು ‘ಕರ್ನಾಟಕ ಸಂಗೀತ ಪಿತಾಮಹ’ ಎಂದು ಗುರುತಿಸುತ್ತಾರೆ. ಭಾವ-ರಾಗ-ಲಯಗಳ ಸಮ್ಮಿಳನ ಅವರ ಕೃತಿಗಳ ಸೊಗಸು. ಇಂದಿಗೂ ಸಂಗೀತಾಭ್ಯಾಸದ ಪಾಠ ಶ್ರೇಣಿಗಳಾದ ಸ್ವರಾವಳಿ, ಜಂಟೀ ಸ್ವರಗಳು, ಲಕ್ಷಣ ಗೀತೆಗಳು, ಅಲಂಕಾರಗಳು, ಪ್ರಬಂಧ, ಉಗಾಭೋಗ, ದಾಟುವಂತೆ, ಗೀತೆಗಳು, ಸುಳಾದಿ, ಕೃತಿಗಳು ಅವರ ಕೊಡುಗೆಯೇ.

ಕರ್ನಾಟಕ ಸಂಗೀತವನ್ನು ಭಕ್ತಿರಸದ ತೊರೆಯಾಗಿ ಪರಿವರ್ತಿಸಿದ ಹೆಗ್ಗಳಿಕೆ ದಾಸರದು. ಸಂಗೀತಸುಧೆಯ ಲೇಪನ ಅವರ ಪದಗಳಿಗೆ, ಕೀರ್ತನೆಗಳಿಗೆ, ಸುಳಾದಿಗಳಿಗೆ ಇಲ್ಲದೆ ಹೋಗಿದ್ದರೆ ಬಹುಶಃ ಅವು ಇಂದಿನವರೆಗೂ ಉಳಿಯುತ್ತಿದ್ದವೋ ಇಲ್ಲವೋ? ವಿಜಯನಗರ ಕಾಲದ ಭವ್ಯ ಸಂಸ್ಕೃತಿಯೊಂದನ್ನು ಶತ-ಶತಮಾನಕ್ಕೂ ಪಸರಿಸುತ್ತಿವೆ ದಾಸರ ಗೀತ ಪುಷ್ಪಗಳು.

ಪುರಂದರರ ಕೊಡುಗೆ ಸಂಗೀತ ಕ್ಷೇತ್ರಕ್ಕಷ್ಟೇ ಅಲ್ಲ, ಅದರ ವಾšಯ ಪ್ರಪಂಚ ಬಲು ವಿಸ್ತಾರವಾದುದು. ದಾಸರ ಭಾಷೆಯನ್ನು, ಭಾವವನ್ನು ಗಮನಿಸಿದಾಗ ಅವರಿಗೆ ಸಂಸ್ಕೃತ ಜ್ಞಾನ ಅಮಿತವಾಗಿರಬೇಕು ಎಂದೆನಿಸುತ್ತದೆ. ದಾಸರ ಸಾಹಿತ್ಯದ ಹಿರಿಮೆಯೆಂದರೆ ಆಡುಭಾಷೆಯ ಅದ್ಭುತ ಮೆರವಣಿಗೆ. ವೇದ, ಉಪನಿಷತ್ತುಗಳ ಸಾರವನ್ನು, ಸಂಸ್ಕೃತದಲ್ಲಿ ರಹಸ್ಯವಾಗಿರಿಸಿದ್ದ ತತ್ವಗಳನ್ನು ಸಾಮಾನ್ಯ ಜನರಿಗೆ ತಿಳಿಗನ್ನಡದಲ್ಲಿ ಬೋಧಿಸುವ ಭಕ್ತಿಗೀತೆಗಳ ಸಂಪ್ರದಾಯವನ್ನು ಅವರು ಪಸರಿಸಿದರು. ಪುರಂದರದಾಸರ ಕೃತಿ ಎನ್ನಲಾದ ಕೀರ್ತನೆಯೊಂದರಲ್ಲಿ ತಾನು ನಾಲ್ಕು ಲಕ್ಷ ಎಪ್ಪತ್ತೈದು ಸಾವಿರ ಪದಗಳನ್ನು ಬರೆದಿರುವುದಾಗಿ ಹೇಳಿದ್ದಾರೆ. ಆದರೆ ಈಗ ಲಭ್ಯವಿರುವುದು ಸಾವಿರ ಮಾತ್ರ. ದಾಸರು ಬರೆಯದ ವಿಷಯವಿಲ್ಲ. ದಿನನಿತ್ಯದ ಸಾಂಸಾರಿಕ ಕೋಟಲೆಗಳ ಲಘು ವಿಷಯಗಳಿಂದ ಹಿಡಿದು ಪರಬ್ರಹ್ಮ ಸ್ವರೂಪದಂತಹ ಗಹನ ವಿಷಯಗಳವರೆವಿಗೂ ಅವರ ಸಾಹಿತ್ಯ ಸಾಮ್ರಾಜ್ಯ ಹರಡಿದೆ. ಅಂತಿಮ ಸಂದೇಶ ಮಾತ್ರ ನಿಚ್ಚಳ. ಅದೇ ಪಂಡಾರಪುರದ ವಿಠ್ಠಲನಿಗೆ ಸಂಪೂರ್ಣ ಶರಣಾಗತಿ. ದಾಸರು ಬರೆದ ಪದ್ಯಗಳಲ್ಲಿ ಭಕ್ತಿ ಪ್ರಸರಣದ ಜತೆ ಜತೆಗೆ ಸಮಾಜದ ಅಂಕು ಡೊಂಕುಗಳನ್ನು ಓರೆಕೋರೆಗಳನ್ನು ತಿದ್ದುವ ಪ್ರಯತ್ನವೂ ಅವ್ಯಾಹತವಾಗಿ ನಡೆದಿದೆ.

ದಾಸರು ಆಧ್ಯಾತ್ಮಿಕ ಹಾದಿಯ ಹೂವು-ಮುಳ್ಳುಗಳನ್ನು ಬಲ್ಲವರು. ಅದಕ್ಕೆ ಅವರ ಸಾಂತ್ವನದ ನುಡಿ ಈಸಬೇಕು ಇದ್ದು ಜೈಸಬೇಕು. ಪತ್ನೀಪುತ್ರರೊಂದಿಗೆ ತಿರುಪತಿ, ಪಂಡರಾಪುರ, ಉಡುಪಿ, ಚನ್ನಪಟ್ಟಣ ಮುಂತಾದ ನಗರಗಳಲ್ಲಿ ಸಂಚರಿಸಿ ಸಂಧ್ಯಾಕಾಲದಲ್ಲಿ ಹಂಪೆಯಲ್ಲಿ ನೆಲೆಸಿ ಇಹಲೋಕ ವ್ಯಾಪಾರ ಮುಗಿಸುತ್ತಾರೆ. ಪಂಡರಾಪುರದ ವಿಠ್ಠಲನ ದೇವಸ್ಥಾನದಲ್ಲಿರುವ ದಾಸರ ಕಂಬ, ಮಳೂರಿನ ಅಂಬೆಗಾಲು ಕೃಷ್ಣ, ಹಂಪೆಯ ಪುರಂದರ ಮಂಟಪ ಇತ್ಯಾದಿ ಅವರ ನೆನಪಿನ ಸಂಕೇತಗಳಾಗಿವೆ.

(ಲೇಖಕರು ಸಂಸ್ಕೃತಿ ಚಿಂತಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net