

ನವದೆಹಲಿ: ಬಿಜೆಪಿ ನಾಯಕ ತೇಜಿಂದರ್ಪಾಲ್ ಸಿಂಗ್ ಬಗ್ಗಾ ಅವರನ್ನು ಪಂಜಾಬ್ ಪೊಲೀಸರು ಶುಕ್ರವಾರ ಬೆಳಗ್ಗೆ ಬಂಧಿಸಿದರು. ದೆಹಲಿಯ ಜನಕಪುರಿಯಲ್ಲಿರುವ ಬಗ್ಗಾ ಅವರ ನಿವಾಸದಲ್ಲಿ ನಡೆದ ಈ ಬಂಧನ ಪಂಜಾಬ್, ದೆಹಲಿ, ಹರಿಯಾಣ ಪೊಲೀಸರ ನಡುವೆ ಹೈಡ್ರಾಮಾಕ್ಕೆ ಕಾರಣವಾಯಿತು. ಬಿಜೆಪಿ ಮತ್ತು ಎಎಪಿ ನಾಯಕರ ನಡುವೆ ರಾಜಕೀಯ ವಾಕ್ಸಮರಕ್ಕೂ ವೇದಿಕೆ ಒದಗಿಸಿತು. ಆದರೆ, ರಾಜಕೀಯ ಹಗೆತನದ ನಡೆಸಿದ ಕ್ರಮ ಅಲ್ಲ ಎಂದು ಪಂಜಾಬ್ ಪೊಲೀಸರು ಹೇಳಿದ್ದಾರೆ.
ಬೆಳಗ್ಗೆ 8.30ಕ್ಕೆ 50 ಪೊಲೀಸರ ತಂಡ, ಬಗ್ಗಾಗೆ ಟರ್ಬನ್ ತೊಡುವುದಕ್ಕೂ ಅವಕಾಶ ನೀಡದೆ ಬಂಧಿಸಿತು ಎಂದು ಬಗ್ಗಾ ತಂದೆ ಪ್ರೀತ್ಪಾಲ್ ಸಿಂಗ್ ಹೇಳಿದ್ದಾರೆ. ಪೊಲೀಸರು ಮನೆಯೊಳಗೆ ನುಗ್ಗಿ ಬಗ್ಗಾನನ್ನು ಹಿಡಿದೆಳೆದು ಒಯ್ದಿದ್ದಾರೆ. ಈ ವಿದ್ಯಮಾನವನ್ನು ಮೊಬೈಲ್ನಲ್ಲಿ ವಿಡಿಯೋ ಮಾಡಲು ಹೊರಾಟ ನನ್ನನ್ನು ಪಕ್ಕದ ಕೊಠಡಿಗೆ ಕೂಡಿ ಹಾಕಿ ಮುಖಕ್ಕೆ ಗುದ್ದಿದರು ಎಂದು ಬಿಜೆಪಿ ಮುಖಂಡ ನವೀನ್ ಕುಮಾರ್ ಆರೋಪಿಸಿದ್ದಾರೆ.
ಪಂಜಾಬ್ ಪೊಲೀಸರು ಬಗ್ಗಾ ಅವರನ್ನು ಮೊಹಾಲಿಗೆ ಕರೆದೊಯ್ಯುವ ವೇಳೆ ಹರಿಯಾಣ ಪೊಲೀಸರ ತಂಡ ಕುರುಕ್ಷೇತ್ರದಲ್ಲಿ ಅವರನ್ನು ತಡೆಯಿತು. ದೆಹಲಿ ಪೊಲೀಸರ ತಂಡ ಕೂಡ ಅಲ್ಲಿಗೆ ತಲುಪಿದ್ದಲ್ಲದೆ, ಮಾಹಿತಿ ಇಲ್ಲದೆ ಬಗ್ಗಾ ಅವರನ್ನು ಬಂಧಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿತು. ಹರಿಯಾಣ ಪೋಲಿಸ್ ಇಲಾಖೆಗೆ ಪಂಜಾಬ್ ಪೊಲೀಸರು ಪತ್ರ ಬರೆದಿರುವುದು ಖಚಿತವಾದ ಬಳಿಕ, ಹರಿಯಾಣ ಪೊಲೀಸರು ಸುಮ್ಮನಾದರು. ಬಳಿಕ ದೆಹಲಿ ಪೊಲೀಸರು ಕೂಡ ಬಗ್ಗಾ ಅವರನ್ನು ಪಂಜಾಬ್ ಪೊಲೀಸರಿಗೆ ಬಿಟ್ಟುಕೊಟ್ಟರು. ನಂತರ ದೆಹಲಿ ಪೊಲೀಸರು ಬಗ್ಗಾರನ್ನು ತಮ್ಮ ವಶಕ್ಕೆ ಪಡೆದು ಈಗ ದೆಹಲಿಗೆ ಕರೆತಂದಿದ್ದಾರೆ. ಆದರೆ, ಪಂಜಾಬ್ ಪೊಲೀಸರು, ಬಗ್ಗಾ ಅವರನ್ನು ಹರಿಯಾಣ ಪೊಲೀಸರ ವಶಕ್ಕೆ ನೀಡಬೇಕು ಎಂದು ಮಾಡಿದ ಮನವಿಯನ್ನು ದೆಹಲಿ ಕೋರ್ಟ್ ತಳ್ಳಿಹಾಕಿದೆ. ಈ ಮಧ್ಯೆ, ಬಗ್ಗಾ ಅವರನ್ನು ಅಪಹರಣ ಮಾಡಲಾಗಿದೆ ಎಂದು ಬಗ್ಗಾ ತಂದೆ ನೀಡಿದ ದೂರಿನ ಮೇಲೆ ದೆಹಲಿಯಲ್ಲಿ ಪ್ರಕರಣ ಕೂಡ ದಾಖಲಾಗಿದೆ.
ಏನಿದು ಕೇಸ್?: ದಿ ಕಶ್ಮೀರ್ ಫೈಲ್ಸ್ ಸಿನಿಮಾಕ್ಕೆ ಸಂಬಂಧಿಸಿ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ನಿವಾಸದ ಎದುರು ಮಾ.30ರಂದು ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ ನಡೆಸಿದ ವೇಳೆ ತೇಜಿಂದರ್ಪಾಲ್ ಸಿಂಗ್ ಬಗ್ಗಾ ಅಲ್ಲಿದ್ದರು. ಅಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದರು ಎಂದು ಆರೋಪಿಸಿ ಎಎಪಿ ನಾಯಕ ಸನ್ನಿ ಅಹ್ಲುವಾಲಿಯಾ ಮೊಹಾಲಿಯಲ್ಲಿ ಏ.1ರಂದು ಪೊಲೀಸ್ ಕೇಸ್ ದಾಖಲಿಸಿದ್ದರು.