'ಕಂಗನಾಗೆ ಲಗಾಮು ಹಾಕಿ': ಬಿಜೆಪಿ ನಾಯಕತ್ವಕ್ಕೆ ಮಾನ್​ ಆಗ್ರಹ

kangana
Published on

ಚಂಡೀಗಢ: ಮಂಡಿ ಸಂಸದೆ ಕಂಗನಾ ರಣಾವತ್ "ಆಧಾರರಹಿತ" ಹೇಳಿಕೆಗಳನ್ನು ನೀಡದಂತೆ ಬಿಜೆಪಿ ನಾಯಕತ್ವ ನಿಯಂತ್ರಿಸಬೇಕು ಎಂದು ಪಂಜಾಬ್​ ಮುಖ್ಯಮಂತ್ರಿ ಭಗವಂತ್ ಮಾನ್ ಒತ್ತಾಯಿಸಿದ್ದಾರೆ.

ರೈತರ ಆಂದೋಲನವನ್ನು ಟೀಕಿಸುವ ಭರದಲ್ಲಿ ಕಂಗನಾ, ಭಾರತದಲ್ಲಿ ಬಾಂಗ್ಲಾ ರೀತಿಯ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿಭಟನಾ ಸ್ಥಳದಲ್ಲಿ ಅತ್ಯಾಚಾರ ಘಟನೆಗಳು ನಡೆದು ಮೃತ ದೇಹಗಳನ್ನು ಮರಗಳಿಗೆ ನೇಣು ಹಾಕಲಾಗಿದೆ ಆರೋಪಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಮಾನ್, ಕಂಗನಾ ರನೌತ್ ತನ್ನ ವಿಷಕಾರಿ ಹೇಳಿಕೆಗಳಿಂದ ದೇಶದ ವಾತಾವರಣವನ್ನು ಹಾಳುಮಾಡುವ ಕೆಲಸ ಮಾಡುತ್ತಿದ್ದು, ಬಿಜೆಪಿ ಅವರಿಗೆ ತಿಳಿ ಹೇಳಬೇಕು ಎಂದು ಹೇಳಿದರು.

ಕಂಗನಾ ಜನರ ಕಲ್ಯಾಣದ ಮೇಲೆ ಕೇಂದ್ರೀಕರಿಸುವುದಕ್ಕಿಂತ ಹೆಚ್ಚಾಗಿ ತನ್ನ ಆಧಾರರಹಿತ ಹೇಳಿಕೆಗಳ ಮೂಲಕ ಪಂಜಾಬಿಗಳ ಭಾವನೆಗಳಿಗೆ ಪದೇ ಪದೇ ನೋವುಂಟು ಮಾಡುತ್ತಿದ್ದಾರೆ. ಅವರು ಈಗ ಸಾರ್ವಜನಿಕ ಜೀವನದಲ್ಲಿದ್ದು, ಮಂಡಿ ಕ್ಷೇತ್ರದ ಸಮಸ್ಯೆಗಳನ್ನು ಪರಿಹರಿಸಲಿ ಎಂದು ಜನರು ಅವರನ್ನು ಆಯ್ಕೆ ಮಾಡಿದ್ದಾರೆ. ಆದರೆ ಸಮಾಜದಲ್ಲಿ ಅಸ್ಥಿರತೆಗೆ ಕಾರಣವಾಗುವ ಅಥವಾ ಯಾರಿಗಾದರೂ ನೋವುಂಟು ಮಾಡುವ ಆಧಾರರಹಿತ ಹೇಳಿಕೆಗಳನ್ನು ನೀಡುತ್ತಿರುವ ಅವರನ್ನು ಬಿಜೆಪಿಯವರು ವೈಯಕ್ತಿಕ ಹೇಳಿಕೆ ಎನ್ನುವ ಬದಲು ಪಕ್ಷದಿಂದ ವಜಾಗೊಳಿಸಬೇಕು ಮಾನ್ ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net