Punjab AAP MLA | ಪೊಲೀಸರ ಮೇಲೆ ಗುಂಡು ಹಾರಿಸಿ ಪರಾರಿಯಾದ ಪಂಜಾಬ್​ ಶಾಸಕ!

MLA Harmeet Singh
Published on

Punjab AAP MLA: ಅತ್ಯಾಚಾರ ಮತ್ತು ವಂಚನೆ ಆರೋಪದ ಮೇಲೆ ಬಂಧಿತನಾಗಿರುವ ಪಂಜಾಬ್ ಆಮ್ ಆದ್ಮಿ ಪಕ್ಷದ (ಎಎಪಿ) ಶಾಸಕ ಹರ್ಮೀತ್ ಸಿಂಗ್ ಧಿಲ್ಲೋನ್ ಪಠಾಣ ಮಾಜ್ರಾ ಮಂಗಳವಾರ (ಸೆಪ್ಟೆಂಬರ್​ 2​) ಕರ್ನಾಲ್‌ನಲ್ಲಿ ಪೊಲೀಸ್ ಅಧಿಕಾರಿಗಳ ಮೇಲೆ ಗುಂಡು ಹಾರಿಸಿ ಕಸ್ಟಡಿಯಿಂದ ತಪ್ಪಿಸಿಕೊಂಡಿದ್ದಾನೆ ಎಂದು ವರದಿಯಾಗಿದೆ.

ಸನೂರ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಧಿಲ್ಲೋನ್​ರನ್ನು ಸ್ಥಳೀಯ ಠಾಣೆಗೆ ಕರೆದೊಯ್ಯುವ ವೇಳೆ ಮತ್ತು ಅವರ ಸಹಾಯಕರೊಂದಿಗೆ ತಾವೂ ಪೊಲೀಸರ ಮೇಲೆ ಗುಂಡು ಹಾರಿಸಿದ್ದರಿಂದ ಒರ್ವ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿದ್ದು, ಇದು ಮಾತ್ರವಲ್ಲದೇ ಮಜ್ರಾ, ಸ್ಕಾರ್ಪಿಯೋ ಎಸ್‌ಯುವಿಯಲ್ಲಿ ಪರಾರಿಯಾಗುವ ಮುಂಚೆ ಮತ್ತೊಬ್ಬ ಅಧಿಕಾರಿಯ ಮೇಲೆ ವಾಹನ ಚಲಾಯಿಸಿದ್ದಾನೆ ಎನ್ನಲಾಗಿದೆ. ಪರಾರಿಯಾಗಲು ಬಳಸಿರುವ ಫಾರ್ಚೂನರ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಸದ್ಯ ಆರೋಪಿಗಾಗಿ ಶೋಧ ಕಾರ್ಯ ನಡೆದಿದೆ ಎಂದು ತಿಳಿದುಬಂದಿದೆ.

ತಾನೂ ವಿಚ್ಛೇದಿತ ಎಂದು ಸುಳ್ಳು ಹೇಳಿರುವ ಶಾಸಕ, ಜಿರಾಕ್‌ಪುರದ ಮಹಿಳೆಯನ್ನು ಮದುವೆ ಮಾಡಿಕೊಂಡು ಲೈಂಗಿಕವಾಗಿ ಶೋಷಣೆ ನಡೆಸಿದ್ದಾರೆ, ಅಶ್ಲೀಲ ವಸ್ತುಗಳನ್ನು ಕಳುಹಿಸಿದ್ದಾರೆ ಮತ್ತು ಬೆದರಿಕೆ ಹಾಕಿದ್ದಾರೆ ಎಂದು ಅವರು ಆರೋಪಿಸಿ ಪಠಾಣಮಜ್ರಾ ವಿರುದ್ಧ ದೂರು ನೀಡಿದ್ದರು. ಈ ಹಿನ್ನಲೆಯಲ್ಲಿ ಆರೋಪಿಯ ಮೇಲೆ ಅತ್ಯಾಚಾರ, ವಂಚನೆ ಮತ್ತು ಕ್ರಿಮಿನಲ್ ಬೆದರಿಕೆ ಆರೋಪಗಳಡಿಯಲ್ಲಿ ಎಫ್‌ಐಆರ್‌ ದಾಖಲಿಸಿ ಬಂಧಿಸಿದ್ದರು.

ರಾಜಕೀಯ ಪ್ರೇರಿತ ಎಂದ ಶಾಸಕ

ಈ ಪ್ರಕರಣದ ಕುರಿತು ಫೇಸ್​ಬುಕ್​​ ಲೈವನಲ್ಲಿ ಮಾತನಾಡಿದ್ದ ಶಾಸಕ ಪಠಾಣಮಜ್ರಾ, ಇದು ರಾಜಕೀಯ ಪ್ರೇರಿತವಾಗಿದ್ದು, ಕೇಂದ್ರ ಸರ್ಕಾರ ಪಂಜಾಬ್ ರಾಜ್ಯವನ್ನು ಅಕ್ರಮವಾಗಿ ಆಳುತ್ತಿದೆ, ಅವರು ನನ್ನ ವಿರುದ್ಧ ದೂರು ದಾಖಲಿಸಬಹುದು, ನನ್ನನ್ನು ಬಂಧಿಸಬಹುದು ಆದರೆ ಯಾರಿಂದಲೂ ನನ್ನ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ ಎಂದಿದ್ದರು.

ಶಾಸಕನ ಪರ ವಕೀಲ ಸಿಮ್ರನ್‌ಜೀತ್ ಸಿಂಗ್ ಸಗ್ಗು, ದೂರುದಾರ ಮಹಿಳೆ ನ್ಯಾಯಾಲಯದಲ್ಲಿ ತಮ್ಮ ಮತ್ತು ಶಾಸಕನ ನಡುವೆ ಲಿವ್-ಇನ್ ರಿಲೇಷನ್​ಶಿಪ್​ ಇರುವುದನ್ನು ಒಪ್ಪಿಕೊಂಡಿದ್ದು, ಆರೋಪಗಳೆಲ್ಲ ಆಧಾರ ರಹಿತವಾಗಿವೆ ಎಂದು ವಾದಿಸಿದರು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net