ಕನ್ನಡಿಗ ಕ್ರೀಡಾಸಾಧಕನನ್ನು ಮನೆಗೆ ಕರೆಸಿ ಸನ್ಮಾನಿಸಿದ್ದ ಪುನೀತ್

pic appu
Published on

ಬೆಂಗಳೂರು: ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡಿಗರ ಸಾಧನೆ ಬಗ್ಗೆ ಅಪಾರ ಹೆಮ್ಮೆ ಇಟ್ಟುಕೊಂಡಿದ್ದ ನಟ ಪುನೀತ್ ರಾಜ್‌ಕುಮಾರ್ ಇಂದು ನಮ್ಮೊಂದಿಗಿಲ್ಲ. ಆದರೆ ಅವರಿಂದ ಗೌರವಿಸಲ್ಪಟ್ಟ ಸಾಧಕರು ಅವರನ್ನು ಈಗಲೂ ನೆನಪಿಸಿಕೊಳ್ಳುತ್ತಾರೆ. ಇತ್ತೀಚಿನ ಪ್ಯಾರಾಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗಳಿಸಿದ ಕನ್ನಡಿಗ ಐಎಎಸ್ ಅಧಿಕಾರಿ, ಸದ್ಯ ಉತ್ತರಪ್ರದೇಶದ ಗೌತಮಬುದ್ಧ ನಗರದಲ್ಲಿ ಸೇವೆ ಸಲ್ಲಿಸುತ್ತಿರುವ ಸುಹಾಸ್ ಎಲ್. ಯತಿರಾಜ್ ಅವರನ್ನು ನಟ ಪುನೀತ್ ರಾಜ್‌ಕುಮಾರ್ ತಮ್ಮ ನಿವಾಸಕ್ಕೆ ಆಹ್ವಾನಿಸಿ ಸನ್ಮಾನ ಮಾಡಿದ್ದರು.

ಅದನ್ನು ಈಗ ಪುನೀತ್ ಅಗಲಿಕೆಯ ಸಂದರ್ಭದಲ್ಲಿ ಸುಹಾಸ್ ಯತಿರಾಜ್ ಸ್ಮರಿಸಿಕೊಂಡಿದ್ದಾರೆ. ‘‘ಇಪ್ಪತ್ತೇಳು ದಿನಗಳ ಹಿಂದೆ, ಅ. 2ರಂದು ನಿಮ್ಮ ಮನೆಗೆ ನನ್ನನ್ನು ಆಹ್ವಾನಿಸಿ, ಸನ್ಮಾನಿಸಿ, ನಿಮ್ಮ ಜತೆ ಮೂರು ಘಂಟೆಗೂ ಹೆಚ್ಚು ಸಮಯ ಕಳೆಯುವ ಸೌಭಾಗ್ಯವನ್ನು ಕಲ್ಪಿಸಿಕೊಟ್ಟಿರಿ. ದೆಹಲಿಗೆ ಬಂದಾಗ ಸಿಗುವೆ ಎಂಬುದಾಗಿ ಮಾತು ಕೊಟ್ಟಿರಿ, ಆ ಮಾತೇ ಈಗ ನನಗೆ ನೆನಪಾಗುತ್ತಿದೆ’’ ಎಂದು ಸುಹಾಸ್ ತಮ್ಮ ಸಂದೇಶದಲ್ಲಿ ಸ್ಮರಿಸಿದ್ದಾರೆ.

‘‘ಸ್ವತಃ ಸಾಧಕರಾದ ನೀವು ಪ್ಯಾರಾಲಿಂಪಿಕ್ಸ್ ಸಾಧನೆಯ ಕುರಿತು ಆಸಕ್ತಿಯಿಂದ ವಿಚಾರಿಸಿದಿರಿ. ಇಷ್ಟು ಸಾಧನೆ ಮಾಡಿಯೂ ನೀವು ಹೇಗೆ ಇಷ್ಟೊಂದು ಸರಳವಾಗಿದ್ದೀರಿ ಎಂಬ ನನ್ನ ಪ್ರಶ್ನೆಗೆ ನಿಮ್ಮದು ನಗುವೇ ಉತ್ತರವಾಗಿತ್ತು. ಆ ನಗುವೇ ಈಗ ನನಗೆ ನೆನಪಾಗುತ್ತಿದೆ...’’ ಎಂದು ಸುಹಾಸ್ ಮೆಲುಕು ಹಾಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net