

ಮುಂಬೈ: ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ(NCP) ನಾಯಕ ಶರದ್ ಪವಾರ್(Sharad Pawar) ಅವರಿಗೆ ಫೇಸ್ಬುಕ್ನಲ್ಲಿ ಜೀವ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಇದೀಗ ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಶರದ್ ಪವಾರ್ ಅವರ ಪುತ್ರಿ ಸುಪ್ರಿಯಾ ಸುಳೆ ಅವರು ನೀಡಿದ್ದ ದೂರನ್ನು ಸ್ವೀಕರಿಸಿದ ಮುಂಬೈ ಕ್ರೈಂ ಬ್ರಾಂಚ್(Mumbai Crime Branch) ಪುಣೆ ಟೆಕ್ಕಿಯನ್ನು ಬಂಧಿಸುವಲ್ಲಿ ಸಫಲವಾಗಿದೆ. ಶಂಕಿತ ಆರೋಪಿಯನ್ನು 32 ವರ್ಷದ ಸಾಗರ್ ಬರ್ವೆ ಎಂದು ಗುರುತಿಸಲಾಗಿದ್ದು, ಎಸ್ಪ್ಲೆನೇಡ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆತನನ್ನು ಜೂನ್ 14 ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಶರದ್ ಪವಾರ್ ಅವರ ಪುತ್ರಿ ಸುಪ್ರಿಯಾ ಸುಳೆ ಅವರು ಮುಂಬೈ ಪೊಲೀಸರ ಬಳಿ ತಮ್ಮ ತಂದೆಗೆ ಫೇಸ್ಬುಕ್, ಟ್ವೀಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಜೀವ ಬೆದರಿಕೆ ಕರೆ ಬಂದಿದೆ. ಶೀಘ್ರವೇ ಬೆದರಿಕೆ ಹಾಕಿರುವ ವ್ಯಕ್ತಿಯನ್ನು ಬಂಧಿಸಬೇಕು ಎಂದು ದೂರು ನೀಡಿದ್ದರು. ಸುಪ್ರಿಯಾ ಅವರ ದೂರಿನ ಅನ್ವಯ ಮುಂಬೈ ಪೊಲೀಸರು ಇದೀಗ ಆತನನ್ನು ಬಂಧಿಸಿದ್ದಾರೆ.
ಬರ್ವೆ ಎಂಬ ವ್ಯಕ್ತಿ ಫೇಸ್ಬುಕ್ನಲ್ಲಿ ಶರದ್ ಪವಾರ್ ಅವರಿಗೆ ಜೀವ ಬೆದರಿಕೆ ಹಾಕಿದ್ದು, ಈ ಬೆದರಿಕೆಗಳನ್ನು ಪೋಸ್ಟ್ ಮಾಡಲು ಆತ ಎರಡು ನಕಲಿ ಖಾತೆಗಳನ್ನು ಬಳಸಿದ್ದಾನೆ ಎಂದು ಪೊಲೀಸರು ವರದಿಯಲ್ಲಿ ತಿಳಿಸಿದ್ದಾರೆ. ಈ ಕುರಿತು ಮಾತನಾಡಿದ ಮಹಾರಾಷ್ಟ್ರ ಸಿಎಂ ಏಕ್ನಾಥ್ ಶಿಂಧೆ, ತನಿಖೆಗೆ ಮತ್ತಷ್ಟು ಒತ್ತು ನೀಡಿ, ಮಾಜಿ ಸಿಎಂ ಅವರ ಭದ್ರತೆಯನ್ನು ಹೆಚ್ಚಿಸಿ ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.