

ಮುಂಬೈ: ದೇಶಾದ್ಯಂತ ಸಂಚಲನ ಮೂಡಿಸಿದ್ದ ಪುಣೆ ಕಾರು ಅಪಘಾತ ಪ್ರಕರಣದಲ್ಲಿ ದಿನಕ್ಕೊಂದು ಟ್ವಿಸ್ಟ್ ಬೆಳಕಿಗೆ ಬರುತ್ತಿದೆ. ಇದೀಗ ಈ ಪ್ರಕರಣದಲ್ಲಿ ಎಲ್ಲರ ಹುಬ್ಬೇರಿಸುವ ಪ್ರಮುಖ ಆರೋಪಿ ಅಪ್ರಾಪ್ತನ ರಕ್ತದ ಮಾದರಿ ಬದಲಿಸುವ ಮಾಸ್ಟರ್ ಪ್ಲಾನ್ ನಲ್ಲಿ ತಾಯಿಯೂ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.
ಈ ಪ್ರಕರಣದಿಂದ ಆರೋಪಿಯನ್ನು ತಪ್ಪಿಸಲು ತಾಯಿಯ ರಕ್ತದ ಮಾದರಿ ಸಂಗ್ರಹಿಸಿರಬಹುದು ಎನ್ನಲಾಗುತ್ತಿದೆ.
ಸರ್ಕಾರಿ ಸ್ವಾಮ್ಯದ ಸಸೂನ್ ಆಸ್ಪತ್ರೆಯ ಇಬ್ಬರು ವೈದ್ಯರು ಆರೋಪಿಯ ರಕ್ತದ ಮಾದರಿಯನ್ನು ಬದಲಾಯಿಸಿದ್ದಾರೆ ಎಂಬುದು ಬೆಳಕಿಗೆ ಬಂದಾಗ, ಮಹಾರಾಷ್ಟ್ರ ವೈದ್ಯಕೀಯ ಇಲಾಖೆ ಈ ವಿಷಯದ ಬಗ್ಗೆ ಆಳವಾದ ತನಿಖೆ ನಡೆಸಲು ಮೂವರು ಸದಸ್ಯರ ಸಮಿತಿಯನ್ನು ನೇಮಿಸಿತು. ಈ ಸಮಿತಿಗೆ ಡಾ. ಪಲ್ಲವಿ ಸಪಳೆ ಅವರನ್ನು ಮುಖ್ಯಸ್ಥರನ್ನಾಗಿ ನೇಮಿಸಲಾಯಿತು. ಈ ಆದೇಶದಲ್ಲಿ ಸಮಿತಿ ವಿಚಾರಣೆ ನಡೆಸಿದಾಗ ಆಘಾತಕಾರಿ ವಿಷಯವೊಂದು ಬೆಳಕಿಗೆ ಬಂದಿದೆ.
ಆರೋಪಿಯ ರಕ್ತದ ಮಾದರಿಯನ್ನು ಬದಲಾಯಿಸಲು ಒಬ್ಬ ಮಹಿಳೆ ಮತ್ತು ಇತರ ಇಬ್ಬರು ವ್ಯಕ್ತಿಗಳ ರಕ್ತದ ಮಾದರಿಗಳನ್ನು ಸಂಗ್ರಹಿಸಲಾಗಿದೆ ಎಂದು ಸಮಿತಿಯು ಕಂಡುಹಿಡಿದಿದೆ. ಇದರೊಂದಿಗೆ ಮಹಿಳೆ ಬೇರೆ ಯಾರೂ ಅಲ್ಲ, ಆರೋಪಿಯ ತಾಯಿಯೇ ಆಗಿರಬಹುದು ಎಂದು ಪೊಲೀಸರು ಶಂಕಿಸಿದ್ದು, ಆಕೆಯ ರಕ್ತದ ಮಾದರಿಯನ್ನು ಸಂಗ್ರಹಿಸಲಾಗಿದೆ.
ಆದರೆ, ಇದು ನಿಜವೇ? ಅಲ್ಲವೇ ಇದನ್ನು ಪತ್ತೆ ಹಚ್ಚಲು ಕೆಲವು ಶಂಕಿತರ ರಕ್ತದ ಮಾದರಿ ಸಂಗ್ರಹಿಸಲು ಪೊಲೀಸರು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
ಕಾಣೆಯಾದ ತಾಯಿ: ಇಲ್ಲಿ ಇನ್ನೊಂದು ಟ್ವಿಸ್ಟ್ ಏನೆಂದರೆ ಆರೋಪಿಯ ತಾಯಿ ಈಗ ತಲೆಮರೆಸಿಕೊಂಡಿದ್ದಾಳೆ. ಪೊಲೀಸರು ರಕ್ತದ ಮಾದರಿ ಸಂಗ್ರಹಿಸಲು ಮನೆಗೆ ಹೋದಾಗ ಎಲ್ಲಿಯೂ ಆಕೆ ಕಾಣಲಿಲ್ಲ. ಯಾರೂ ಕೇಳಿದರೂ ಸರಿಯಾದ ಮಾಹಿತಿ ನೀಡುತ್ತಿಲ್ಲ. ಇದರೊಂದಿಗೆ... ಆಕೆಗಾಗಿ ಹುಡುಕಾಟ ನಡೆದಿದೆ.
ಇದಕ್ಕೂ ಮುನ್ನ ಆರೋಪಿಯ ತಾಯಿ ವಿಡಿಯೋ ಸಂದೇಶದಲ್ಲಿ ಕಾಣಿಸಿಕೊಂಡಿದ್ದರು. ಅದರಲ್ಲಿ ತನ್ನ ಮಗನ ವೈರಲ್ ವಿಡಿಯೋ ನಕಲಿಯಾಗಿದ್ದು, ಮಗನನ್ನು ರಕ್ಷಿಸುವಂತೆ ಪೊಲೀಸರಿಗೆ ಮನವಿ ಮಾಡಿದ್ದಾಳೆ.
ಮತ್ತೊಂದೆಡೆ, ಆರೋಪಿ ಅಬ್ಸರ್ವೇಶನ್ ಹೋಂನಲ್ಲಿದ್ದಾನೆ. ಅಲ್ಲದೆ ಆರೋಪಿಯ ತಂದೆ ಮಗನನ್ನು ಈ ಪ್ರಕರಣದಿಂದ ಹೊರತರಲು ಅಕ್ರಮ ಯತ್ನ ನಡೆಸಿದ್ದು, ಆತನನ್ನು ಬಂಧಿಸಲಾಗಿದೆ. ಮೇಲಾಗಿ ಆರೋಪಿಯ ಅಜ್ಜನನ್ನೂ ಬಂಧಿಸಲಾಗಿದೆ.