

ಪುಣೆ: ಕರೊನಾ ಸೋಂಕಿತರು ಕ್ವಾರಂಟೈನ್ ಇಟ್ಟ ಸ್ಥಳದಿಂದ ಅಥವಾ ಆಸ್ಪತ್ರೆಯಿಂದ ಓಡಿ ಹೋಗುವುದು ಇಂದು ಮಾಮೂಲಾಗಿಬಿಟ್ಟಿದೆ. ಚಿಕಿತ್ಸೆಗೆ ಹೆದರಿ ಕೆಲವರು ಓಡಿ ಹೋಗುತ್ತಿದ್ದರೆ, ಇನ್ನು ಕೆಲವರು ವೈದ್ಯರು ತಮಗೇನೋ ಮಾಡಿಬಿಟ್ಟರೆ ಎಂಬ ಭಯದಿಂದ ಎಸ್ಕೇಪ್ ಆಗುತ್ತಿದ್ದಾರೆ.
ಆದರೆ ಪುಣೆಯ ಯರವಾಡಾದ ಕರೊನಾ ಸೋಂಕು ಪೀಡಿತ 70 ವರ್ಷದ ಅಜ್ಜನೊಬ್ಬ ಕ್ವಾರಂಟೈನ್ ಕೇಂದ್ರದಿಂದ ಪರಾರಿಯಾಗಿದ್ದು, ಅದಕ್ಕೆ ಕಾರಣ ಆ ಸ್ಥಳ ಗಬ್ಬು ನಾರುತ್ತಿದುದ್ದಂತೆ. ಪುರಸಭೆಯ ಆವರಣದಲ್ಲಿ ಕ್ವಾರಂಟೈನ್ಗೆ ವ್ಯವಸ್ಥೆ ಮಾಡಲಾಗಿತ್ತು. ಅದು ಅತ್ಯಂತ ಕೆಟ್ಟದಾಗಿತ್ತು. ಶೌಚಾಲಯ ಸ್ವಚ್ಛಗೊಳಿಸದೆ ಗಬ್ಬು ನಾರುತ್ತಿತ್ತು ಅದಕ್ಕಾಗಿ ಅಲ್ಲಿಂದ ಓಡಿಬಂದೆ ಎಂದು ವೃದ್ಧ ಹೇಳಿದ್ದಾರೆ.
ಅಲ್ಲಿಂದ ಓಡಿ ಹೊರಗೆ ಬಂದದ್ದೇನೋ ಆಗಿದೆ, ಆದರೆ ಮನೆಗೆ ಹೋಗಲು ವಾಹನ ಬೇಕಲ್ಲ? ಲಾಕ್ಡೌನ್ ಇರುವಾಗ ವಾಹನವೆಲ್ಲಿ ಸಿಗುತ್ತದೆ? ಆದರೆ ಈ ಅಜ್ಜ ಧೃತಿಗೆಡಲಿಲ್ಲ. ಗಬ್ಬು ನಾರುವ ಸ್ಥಳಕ್ಕಿಂತ ನಡೆದು ಹೋಗುವುದೇ ಲೇಸೆಂದು ಬಗೆದು ಮನೆಗೆ ನಡೆದೇ ಹೋಗಿದ್ದಾರೆ, ಆಸ್ಪತ್ರೆಯಿಂದ ಅವರ ಮನೆ ಇದ್ದ ದೂರ ಬರೋಬ್ಬರಿ 17 ಕಿ.ಮೀ! ಹೌದು. ಇಷ್ಟು ದೂರದವರೆಗೆ ನಡೆದು ಹೋಗಿರುವ ಅಜ್ಜ ಮನೆ ಸೇರಿದ್ದಾರೆ.
ಆಸ್ಪತ್ರೆ ಸಿಬ್ಬಂದಿ ಮನೆಗೆ ಬಂದಾಗ ಕ್ವಾರಂಟೈನ್ನಲ್ಲಿ ಇದ್ದ ರೋಗಿಗಳಿಗೆ ಆಹಾರ ಕೊಡುತ್ತಿರಲಿಲ್ಲ. ಅಲ್ಲದೇ ಶೌಚಾಲಯ ಸ್ವಚ್ಚಗೊಳಿಸದೆ ಗಬ್ಬು ನಾರುತ್ತಿತ್ತು, ವಾಕರಿಗೆ ಬರುತ್ತಿತ್ತು. ಆದ್ದರಿಂದ ನಾನು ಪರಾರಿಯಾದೆ, ಮತ್ತೆ ವಾಪಸ್ ಬರಲ್ಲ ಎಂದಿದ್ದಾರೆ. ಆರೋಗ್ಯ ಕಾರ್ಯಕರ್ತರು ಅವರ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಏಪ್ರಿಲ್ 25ರಂದು ಈ ಅಜ್ಜನಿಗೆ ಸೋಂಕು ಇರುವುದು ಪತ್ತೆಯಾಗಿತ್ತು. ಸ್ಥಳೀಯರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಯರವಾಡ ಪ್ರದೇಶದ ಕಾರ್ಪೋರೇಟರ್ ಸಿದ್ದಾರ್ಥ ದೆಂಡೆ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿ ಐಸೋಲೇಷನಲ್ಲಿ ಇರಿಸುವಂತೆ ಸೂಚಿಸಿದ್ದರು ಎನ್ನಲಾಗಿದೆ.
ಕ್ವಾರಂಟೈನ್ ಕೇಂದ್ರದಲ್ಲಿ ಮೂಲ ಸೌಕರ್ಯಗಳ ಕೊರತೆ ಇದ್ದು ಈ ಬಗ್ಗೆ ಹಿರಿಯ ಅಧಿಕಾರಿಗಳು ಗಮನಹರಿಸಬೇಕಾಗಿದೆ ಎಂದು ಕಾರ್ಪೋರೇಟರ್ ಮನವಿ ಮಾಡಿಕೊಂಡಿದ್ದಾರೆ. (ಏಜೆನ್ಸೀಸ್)